AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mohan Bhagwat: ಅಸ್ಪೃಶ್ಯತೆ, ಜಾತಿ ತಾರತಮ್ಯ ಅಧರ್ಮ; ವಿಜಯದಶಮಿ ಭಾಷಣದಲ್ಲಿ ಮೋಹನ್ ಭಾಗವತ್

ಇಡೀ ಜಗತ್ತು ಒಂದು ಮನೆ ಎಂದು ನಮ್ಮ ಹಿರಿಯರು ಚಿಂತಿಸಿದರು. ಅದಕ್ಕೆ ತಕ್ಕಂತೆ ನಮ್ಮ ಜೀವನ ಪದ್ಧತಿಗೆ ಮೇಲ್ಪಂಕ್ತಿ ಹಾಕಿಕೊಟ್ಟರು. ಆ ಜೀವನ ಪದ್ಧತಿಯೇ ಕ್ರಮೇಣ ಒಂದು ಧರ್ಮವಾಗಿ ರೂಪುಗೊಂಡಿತು ಎಂದು ಮೋಹನ್ ಭಾಗವತ್ ತಿಳಿಸಿದರು.

Mohan Bhagwat: ಅಸ್ಪೃಶ್ಯತೆ, ಜಾತಿ ತಾರತಮ್ಯ ಅಧರ್ಮ; ವಿಜಯದಶಮಿ ಭಾಷಣದಲ್ಲಿ ಮೋಹನ್ ಭಾಗವತ್
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್
TV9 Web
| Updated By: ಆಯೇಷಾ ಬಾನು|

Updated on: Oct 05, 2022 | 10:09 AM

Share

ನಾಗಪುರ: ‘ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯಗಳು ಅಧರ್ಮ. ಅದನ್ನು ಆಚರಿಸುವಂತೆ ಎಲ್ಲಿ ಬೇಕಾದರೂ ಬರೆದಿರಬಹುದು, ಆದರೆ ಅದು ಧರ್ಮಸಮ್ಮತವಲ್ಲ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್(Mohan Bhagwat) ಹೇಳಿದರು. ನಾಗಪುರದ ರೇಷಂಭಾಗ್​ ಸ್ಮೃತಿ ಮಂದಿರ ಮೈದಾನದಲ್ಲಿ ನಡೆದ ವಾರ್ಷಿಕ ವಿಜಯದಶಮಿ ಉತ್ಸವದಲ್ಲಿ ಮುಖ್ಯ ಬೌದ್ಧಿಕ್ ನೀಡಿದ ಅವರ, ‘ಧರ್ಮದ ಸಾರ್ವಕಾಲಿಕ ಮೌಲ್ಯಗಳಾದ ಸತ್ಯ, ಕರುಣೆ, ಶುಚಿತ್ವ ಮತ್ತು ತಪಸ್ಸಿನ ಆಧಾರದ ಮೇಲೆ ನಮ್ಮ ಬದುಕು ರೂಪುಗೊಳ್ಳಬೇಕು. ಈ ನಾಲ್ಕು ಮೌಲ್ಯಗಳ ಆಶಯವನ್ನು ಯಾವುದೇ ಆಚರಣೆ ಅಧರ್ಮ’ ಎಂದು ಘೋಷಿಸಿದರು.

ನಮ್ಮ ಆಹಾರ ಕ್ರಮ ಅಥವಾ ಪೂಜಾ ಪದ್ಧತಿ ಕಾಲಕ್ಕೆ ತಕ್ಕಂತೆ ಬದಲಾಗಬಹುದು. ಆದರೆ ಧರ್ಮದ ಮೌಲ್ಯಗಳು ಸಾರ್ವಕಾಲಿಕವಾಗಿ ಉಳಿದುಕೊಳ್ಳುತ್ತವೆ. ಇದು ಈ ದೇಶದ ಮೌಲ್ಯಗಳಾಗಿವೆ. ಅಸ್ಪೃಶ್ಯತೆ ಮತ್ತು ಜಾತಿ ಆಧರಿತ ತಾರತಮ್ಯಗಳು ಈ ಮೌಲ್ಯಗಳ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದಿಲ್ಲ. ಹೀಗಾಗಿ ಅವು ಅಧರ್ಮ ಎನಿಸಿಕೊಳ್ಳುತ್ತವೆ ಎಂದು ತಮ್ಮ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಇಡೀ ಜಗತ್ತು ಒಂದು ಮನೆ ಎಂದು ನಮ್ಮ ಹಿರಿಯರು ಚಿಂತಿಸಿದರು. ಅದಕ್ಕೆ ತಕ್ಕಂತೆ ನಮ್ಮ ಜೀವನ ಪದ್ಧತಿಗೆ ಮೇಲ್ಪಂಕ್ತಿ ಹಾಕಿಕೊಟ್ಟರು. ಆ ಜೀವನ ಪದ್ಧತಿಯೇ ಕ್ರಮೇಣ ಒಂದು ಧರ್ಮವಾಗಿ ರೂಪುಗೊಂಡಿತು. ಅದನ್ನು ನಾವು ಹಿಂದೂ ಎನ್ನುತ್ತೇವೆ. ಹಿಂದಿನಿಂದಲೂ ನಮ್ಮ ನೆಲದಲ್ಲಿ ಹಲವು ರಾಜ್ಯಗಳು, ವಿಭಿನ್ನ ಆಡಳಿತ ಕ್ರಮಗಳು ಅಸ್ತಿತ್ವದಲ್ಲಿದ್ದವು. ಆದರೆ ಒಂದೇ ದೇಶದ ವಾಸಿಗಳಾಗಿ ನಮ್ಮ ಭಾವನೆಗಳು ಬೆಸೆದುಕೊಂಡಿದ್ದವು. ರಾಮಾಯಣ, ಮಹಾಭಾರತ, ಕಾಳಿದಾಸನ ಕಾವ್ಯಗಳು ಇದನ್ನೇ ಹೇಳಿವೆ. ಕವಿಗಳಾದ ರವೀಂದ್ರನಾಥ್ ಠಾಗೋರ್, ಸುಬ್ರಹ್ಮಣ್ಯ ಭಾರತಿ ಸಹ ಇದೇ ಅಂಶವನ್ನು ಪ್ರತಿಪಾದಿಸಿದರು ಎಂದು ನೆನಪಿಸಿಕೊಂಡರು.

ನಾನು ನನ್ನ ಭಾವನೆಗಳನ್ನು ಪ್ರಕಟಿಸುವ ರೀತಿಯಲ್ಲಿಯೇ ಬೇರೊಬ್ಬರು ಬೇರೆ ಪ್ರದೇಶದಲ್ಲಿ ಬೇರೆ ಭಾಷೆಯಲ್ಲಿ ತಮ್ಮ ಭಾವನೆಗಳನ್ನು ಪ್ರಕಟಿಸುತ್ತಾರೆ. ಹೀಗೆ ಭಾವನಾತ್ಮಕವಾಗಿ ನಾವು ಒಂದು ದೇಶಕ್ಕೆ ಸೇರಿರುವ ಅಣ್ಣತಮ್ಮಂದಿರಾಗಿದ್ದೇವೆ. ಇದು ವಿಶ್ವಕ್ಕೇ ವ್ಯಾಪಿಸುತ್ತದೆ. ಇದನ್ನು ಅರ್ಥ ಮಾಡಿಕೊಂಡಿದ್ದ ನಮ್ಮ ಹಿರಿಯರು ಇಡೀ ಜಗತ್ತನ್ನು ಒಂದು ಮನೆಯನ್ನಾಗಿ ಮಾಡಿಕೊಂಡು ಹೇಗೆ ಬದುಕಬೇಕು ಎನ್ನುವ ಬಗ್ಗೆ ಯೋಚಿಸಿ ಒಂದು ಸಂಸ್ಕೃತಿ ರೂಪಿಸಿದ್ದರು. ಅದು ನಮ್ಮ ರಾಷ್ಟ್ರೀಯತೆಯ ಪ್ರಮುಖ ಆಧಾರವಾಗಿದೆ ಎಂದು ಪ್ರತಿಪಾದಿಸಿದರು.

ಯಾವುದು ಧರ್ಮ, ಯಾವುದು ಅಧರ್ಮ ಎಂಬ ಗೊಂದಲ ನಿಮ್ಮ ಮನದಲ್ಲಿ ಮೂಡಿದ ತಕ್ಷಣ ಶುದ್ಧ ಮನಸ್ಸಿನಿಂದ ಕರುಣಾಪೂರಿತ ದೃಷ್ಟಿಕೋನದಿಂದ ಸತ್ಯ ಯಾವುದು ಎಂದು ಯೋಚಿಸಿ. ಆಗ ನಿಮಗೆ ಧರ್ಮ ಯಾವುದು ಎಂದು ಅರಿವಾಗುತ್ತದೆ. ಭಾರತೀಯ ಸಂಸ್ಕೃತಿ ಗತಿಶೀಲವಾಗಿರುತ್ತದೆ. ನಮ್ಮ ರೀತಿ ರಿವಾಜುಗಳು ಬದಲಾಗಬಹುದು. ಆದರೆ ಬದುಕಿನ ಮೂಲಾಧಾರವಾದ ಮೌಲ್ಯ ಎಂದಿಗೂ ಬದಲಾಗಲಾರದು. ಅದೇ ನಮ್ಮ ಧರ್ಮ. ಅದನ್ನು ಆಧರಿಸಿಯೇ ನಾವೆಲ್ಲರೂ ಬದುಕಬೇಕು ಎಂದು ಕಿವಿಮಾತು ಹೇಳಿದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ