ಭಾರತೀಯರಿಗೆ ಅವರ ಭಾಷೆಗಳೇ ಗೊತ್ತಿಲ್ಲ ಎನ್ನುವಂತಾಗಿದೆ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್

Mohan Bhagwat urges Indians to use mother tongue: ಕೆಲ ಭಾರತೀಯರಿಗೆ ಅವರ ಸ್ವಂತ ಭಾಷೆಗಳೇ ಅರ್ಥ ಆಗದಂತಹ ಪರಿಸ್ಥಿತಿ ಬಂದಿದೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಒಂದೊಮ್ಮೆ ದೇಶದಲ್ಲಿ ಎಲ್ಲಾ ಸಂವಹನವೂ ಸಂಸ್ಕೃತದಲ್ಲೇ ನಡೆಯುತ್ತಿತ್ತು. ಈಗ ವಿದೇಶಿಗರು ಸಂಸ್ಕೃತ ಕಲಿಸುತ್ತಿದ್ದಾರೆ ಎಂದವರು ತಿಳಿಸಿದ್ದಾರೆ. ನಾಗಪುರ್​ನಲ್ಲಿ 13ನೇ ಶತಮಾನದ ಸಂತ ಜ್ಞಾನೇಶ್ವರ್ ವಿರಚಿತ ಕೃತಿಯ ಇಂಗ್ಲೀಷ್ ಅವತರಣಿಕೆಯ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಭಾರತೀಯರಿಗೆ ಅವರ ಭಾಷೆಗಳೇ ಗೊತ್ತಿಲ್ಲ ಎನ್ನುವಂತಾಗಿದೆ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್
ಮೋಹನ್ ಭಾಗವತ್

Updated on: Dec 01, 2025 | 11:52 AM

ನಾಗಪುರ್, ನವೆಂಬರ್ 30: ಭಾರತದಲ್ಲಿ ಸ್ಥಳೀಯ ಭಾಷೆಗಳು ಮತ್ತು ಮಾತೃ ಭಾಷೆಗಳ ಬಳಕೆ ಕಡಿಮೆ ಆಗುತ್ತಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಮೋಹನ್ ಭಾಗವತ್ (Mohan Bhagwat) ಕಳವಳ ವ್ಯಕ್ತಪಡಿಸಿದ್ದಾರೆ. ಮರಾಠಿಯ ‘ಶ್ರೀ ಜ್ಞಾನೇಶ್ವರಿ’ (Shri Dnyaneshwari) ಕೃತಿಯ ಇಂಗ್ಲೀಷ್ ಅವತರಣಿಕೆಯ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದ ಮೋಹನ್ ಭಾಗವತ್, ‘ಕೆಲ ಭಾರತೀಯರಿಗೆ ತಮ್ಮ ಸ್ವಂತ ಭಾಷೆಗಳೇ ಅರ್ಥ ಆಗದಂತಾಗಿದೆ’ ಎಂದು ಹೇಳಿದ್ದಾರೆ.

‘ಶ್ರೀ ಜ್ಞಾನೇಶ್ವರಿ’ ಕೃತಿ ಮೂಲತಃ ಮರಾಠಿಯದ್ದಾಗಿದೆ. 13ನೇ ಶತಮಾನದಲ್ಲಿ ಮಹಾರಾಷ್ಟ್ರದಲ್ಲಿ ಇದ್ದ ಸಂತ ಜ್ಞಾನೇಶ್ವರ ಅವರು ರಚಿಸಿದ ಮರಾಠಿ ಕೃತಿ ಇದು. ಇದರ ಇಂಗ್ಲೀಷ್ ಅವತರಣಿಕೆಯ ಕೃತಿಯ ಬಿಡುಗಡೆ ಸಂದರ್ಭದಲ್ಲಿ ಮಾತನಾಡುತ್ತಾ ಆರೆಸ್ಸೆಸ್ ಮುಖ್ಯಸ್ಥರು, ಭಾರತೀಯ ಭಾಷೆಗಳಲ್ಲಿ ಅಭಿವ್ಯಕ್ತಪಡಿಸುವುದು ಎಷ್ಟು ಅನುಕೂಲ ಎಂಬುದನ್ನು ಮನದಟ್ಟು ಮಾಡಿದ್ದಾರೆ.

ಇದನ್ನೂ ಓದಿ: ತಮಿಳುನಾಡಿನ ಶಿವಗಂಗಾದಲ್ಲಿ ಬಸ್ ಅಪಘಾತ; 11ಕ್ಕೂ ಹೆಚ್ಚು ಸಾವು; 19 ಮಂದಿಗೆ ಗಾಯ

‘ಒಂದಾನೊಂದು ಕಾಲದಲ್ಲಿ ಎಲ್ಲಾ ಸಂವಹನವೂ ಸಂಸ್ಕೃತದಲ್ಲೇ ನಡೆಯುತ್ತಿತ್ತು. ನಾವು ಈ ವಿಶ್ವಕ್ಕೆ ಸಂಸ್ಕೃತ ಹೇಳಿಕೊಡಬೇಕಿತ್ತು. ಆದರೆ, ಕೆಲ ಅಮೆರಿಕನ್ ಪ್ರೊಫೆಸರ್​ಗಳಿಂದ ಸಂಸ್ಕೃತ ಕಲಿಯುವ ಪರಿಸ್ಥಿತಿಗೆ ಬಂದಿದ್ದೇವೆ. ಇವತ್ತಿನ ಮಕ್ಕಳಿಗೆ ಮಾತೃ ಭಾಷೆಯಲ್ಲಿ ಸರಳ ಪದಗಳನ್ನು ಬಳಸುವುದು ಹೇಗೆಂದು ಗೊತ್ತಿಲ್ಲ. ಮನೆಯಲ್ಲಿ ಇಂಗ್ಲೀಷ್ ಬೆರೆಸಿ ಮಾತನಾಡುವುದನ್ನು ನೋಡುತ್ತಿದ್ದೇವೆ’ ಎಂದು ಮೋಹನ್ ಭಾಗವತ್ ವಿಷಾದಿಸಿದ್ದಾರೆ.

ಇಂಗ್ಲೀಷ್ ಮಾಧ್ಯಮದ ಶಿಕ್ಷಣದಿಂದ ಸಮಸ್ಯೆಯಲ್ಲ…

ಭಾರತೀಯ ಭಾಷೆಗಳ ಬಳಕೆ ಕಡಿಮೆ ಆಗಲು ಇಂಗ್ಲೀಷ್ ಮಾಧ್ಯಮದ ಶಿಕ್ಷಣದ ವ್ಯವಸ್ಥೆಯೇ ಕಾರಣ ಎನ್ನುವುದನ್ನು ಆರೆಸ್ಸೆಸ್ ಸರಸಂಘಚಾಲಕರು ತಳ್ಳಿಹಾಕಿದ್ದಾರೆ. ‘ಸಮಸ್ಯೆಗೆ ಇಂಗ್ಲೀಷ್ ಮಾಧ್ಯಮ ಶಿಕ್ಷಣವೇ ಕಾರಣವಲ್ಲ. ನಾವು ಮನೆಯಲ್ಲಿ ನಮ್ಮ ಭಾಷೆಯನ್ನು ಮಾತನಾಡಿದರೆ ಸಮಸ್ಯೆ ಆಗದು. ನಾವದನ್ನು ಮಾಡುತ್ತಿಲ್ಲ. ಕೆಲ ಭಾರತೀಯರಿಗೆ ನಮ್ಮ ಸ್ವಂತ ಭಾಷೆಗಳೇ ಗೊತ್ತಿಲ್ಲದಂತಹ ಪರಿಸ್ಥಿತಿ ಬಂದಿದೆ’ ಎಂದು ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ಭಾಷೆಗಳು ಎಷ್ಟು ಸಂಪದ್ಭರಿತ ಮತ್ತು ಪ್ರಬುದ್ಧ ಎಂಬುದನ್ನು ನಿವೇದಿಸಲು ಮೋಹನ್ ಭಾಗವತ್ ಅವರು ಶ್ರೀ ಜ್ಞಾನೇಶ್ವರಿ ಕೃತಿಯನ್ನು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ದಾಂತೆವಾಡದಲ್ಲಿ 37 ನಕ್ಸರು ಶರಣು; ಹಿಂಸಾಮಾರ್ಗ ಬಿಟ್ಟು ಮುಖ್ಯವಾಹಿನಿಗೆ ಬಂದ ಮಾವೋವಾದಿಗಳು

‘ನಮ್ಮ ಭಾಷೆಗಳ ಬಳಕೆಯಲ್ಲಿ ಬರುವ ಪರಿಕಲ್ಪನೆ, ಆಲೋಚನೆಯನ್ನು ಹಿಡಿದಿಡಬಲ್ಲ ಪದಗಳು ಇಂಗ್ಲೀಷ್​ನಲ್ಲಿ ಕಡಿಮೆ. ಸಂತ ಜ್ಞಾನೇಶ್ವರರು ಬಳಸಿದ ಒಂದು ಪದವನ್ನು ಅರ್ಥೈಸಲು ಹೆಚ್ಚು ಇಂಗ್ಲೀಷ್ ಪದಗಳು ಬೇಕಾಗುತ್ತದೆ. ಕಲ್ಪವೃಕ್ಷಕ್ಕೆ ಇಂಗ್ಲೀಷ್​ನಲ್ಲಿ ಏನೆಂದು ಕರೆಯುತ್ತೀರಿ? ಸಾಂಸ್ಕೃತಿಕವಾಗಿ ಸಂಪದ್ಭರಿತವಾದ ಪರಿಕಲ್ಪನೆಗಳನ್ನು ವಿದೇಶೀ ಭಾಷೆಯಲ್ಲಿ ಸರಿಯಾಗಿ ವ್ಯಕ್ತಪಡಿಸಲು ಆಗುವುದಿಲ್ಲ’ ಎಂದು ಮೋಹನ್ ಭಾಗವತ್ ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:20 pm, Sun, 30 November 25