Money Laundering Case: ಮಾಜಿ ಸಚಿವ ನವಾಬ್ ಮಲಿಕ್‌ಗೆ ಜಾಮೀನು ನಿರಾಕರಿಸಿದ ಮುಂಬೈ ಕೋರ್ಟ್
ಪಾಕಿಸ್ತಾನ ಮೂಲದ ಭಯೋತ್ಪಾದಕ ದಾವೂದ್ ಇಬ್ರಾಹಿಂ ಮತ್ತು ಆತನ ಸಹಾಯಕರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಹಾರಾಷ್ಟ್ರದ ಮಾಜಿ ಸಚಿವ ನವಾಬ್ ಮಲಿಕ್‌ಗೆ ಮುಂಬೈನ ವಿಶೇಷ ನ್ಯಾಯಾಲಯ ಇಂದು (ಬುಧವಾರ) ಜಾಮೀನು ನಿರಾಕರಿಸಿದೆ.
ಮುಂಬೈ: ದಾವೂದ್ ಇಬ್ರಾಹಿಂ ಮತ್ತು ಆತನ ಸಹಾಯಕರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ (money laundering case) ಮಹಾರಾಷ್ಟ್ರದ ಮಾಜಿ ಸಚಿವ ನವಾಬ್ ಮಲಿಕ್‌ಗೆ (Nawab Malik) ಮುಂಬೈನ ವಿಶೇಷ ನ್ಯಾಯಾಲಯ ಇಂದು (ಬುಧವಾರ) ಜಾಮೀನು ನಿರಾಕರಿಸಿದೆ.
ವಿಶೇಷ ನ್ಯಾಯಾಧೀಶ ಆರ್ ಎನ್ ರೋಕಡೆ ಅವರು ಮಲಿಕ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು. ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ ನ್ಯಾಯಾಲಯವು ನವೆಂಬರ್ 14 ರಂದು ಮಲಿಕ್ ಅವರ ಜಾಮೀನು ಅರ್ಜಿಯ ಆದೇಶವನ್ನು ಕಾಯ್ದಿರಿಸಿತ್ತು.
ಜಾರಿ ನಿರ್ದೇಶನಾಲಯವು ಫೆಬ್ರವರಿಯಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಹಾಗೂ ಮಾಜಿ ಸಚಿವ ನವಾಬ್ ಮಲಿಕ್ ಅವರನ್ನು ಬಂಧಿಸಿತ್ತು. ನ್ಯಾಯಾಂಗ ಬಂಧನದಲ್ಲಿದ್ದು, ಅರೋಗ್ಯದ ಸಮಸ್ಯೆ ಉಂಟಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ನವಾಬ್ ಮಲಿಕ್ ಜಾಮೀನು ಕೋರಿದ್ದು, ಅಕ್ರಮ ಹಣ ವರ್ಗಾವಣೆಗಾಗಿ ತನ್ನನ್ನು ವಿಚಾರಣೆಗೆ ಒಳಪಡಿಸಲು ಯಾವುದೇ ಆಧಾರಗಳಿಲ್ಲ ಎಂದು ಮನವಿ ಮಾಡಿದರು.
ತನಿಖಾ ಸಂಸ್ಥೆಯು ಜಾಮೀನನ್ನು ವಿರೋಧಿಸಿತು, ದಾವೂದ್ ಇಬ್ರಾಹಿಂ ಮತ್ತು ಅವನ ಸಹಾಯಕರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ದಾಖಲಿಸಿದ ಪ್ರಕರಣವನ್ನು ಸಾಕಷ್ಟು ಆಧಾರವಾಗಿ ಪರಿಗಣಿಸಬಹುದು ಎಂದು ಹೇಳಿದೆ. ಆರೋಪಿ ದಾವೂದ್ ಇಬ್ರಾಹಿಂ ಮತ್ತು ಆತನ ಸಹೋದರಿ ಹಸೀನಾ ಪರ್ಕರ್ ಅವರೊಂದಿಗೆ ನವಾಬ್ ಮಲಿಕ್ ವ್ಯವಹರಿಸುತ್ತಿದ್ದರು. ನವಾಬ್ ಮಲಿಕ್ ನಿರಪರಾಧಿ ಎಂಬ ಪ್ರಶ್ನೆಯೇ ಇಲ್ಲ ಎಂದು ಇಡಿ ಹೇಳಿಕೊಂಡಿದೆ.
ಮಲಿಕ್ ವಿರುದ್ಧ EDಯ ಪ್ರಕರಣವು 1993ರ ಮುಂಬೈ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ದಾವೂದ್ ಇಬ್ರಾಹಿಂ ಮತ್ತು ಅವನ ಸಹಾಯಕರ ವಿರುದ್ಧ ಭಾರತದ ಕಠಿಣ ಭಯೋತ್ಪಾದನಾ ವಿರೋಧಿ ಕಾನೂನು UAPA ಅಡಿಯಲ್ಲಿ NIA ದಾಖಲಿಸಿದ ಎಫ್ಐಆರ್ನ್ನು ಸಾಕ್ಷಿಯಾಗಿಸಿದೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:53 pm, Wed, 30 November 22