Morbi Tragedy: ಗುಜರಾತ್​​​ ಕೇಬಲ್ ಸೇತುವೆ ದುರಂತ; ಮೊರ್ಬಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ

| Updated By: ಸುಷ್ಮಾ ಚಕ್ರೆ

Updated on: Nov 01, 2022 | 8:53 AM

ಪ್ರಧಾನಿ ಮೋದಿ ಇಂದು ಮಧ್ಯಾಹ್ನ ಮೊರ್ಬಿಗೆ ಭೇಟಿ ನೀಡಲಿದ್ದಾರೆ. ಹಾಗೇ, ಸಂತ್ರಸ್ತರ ಕುಟುಂಬಸ್ಥರನ್ನು ಭೇಟಿ ಮಾಡಲಿದ್ದಾರೆ.

Morbi Tragedy: ಗುಜರಾತ್​​​ ಕೇಬಲ್ ಸೇತುವೆ ದುರಂತ; ಮೊರ್ಬಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ
ಮೊರ್ಬಿ ಸೇತುವೆ ದುರಂತದ ಬಗ್ಗೆ ಅಧಿಕಾರಿಗಳೊಂದಿಗೆ ಮೋದಿ ಸಭೆ
Follow us on

ಅಹಮದಾಬಾದ್: ಗುಜರಾತ್​​ನ ಮೊರ್ಬಿಯಲ್ಲಿ (Morbi Bridge Collapse) ಭಾನುವಾರ ಸಂಜೆ ಕೇಬಲ್ ಸೇತುವೆ ಕುಸಿತವಾಗಿ 134ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಮೊರ್ಬಿಯಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಲು ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆಯನ್ನು ನಡೆಸಿದ್ದು, ಪರಿಹಾರ ಕಾರ್ಯಗಳ ಬಗ್ಗೆ ಚರ್ಚಿಸಿದ್ದಾರೆ. ಮೂರು ದಿನಗಳ ಗುಜರಾತ್​ ಪ್ರವಾಸದಲ್ಲಿರುವ ಮೋದಿ (Narendra Modi) ಇಂದು ಮೊರ್ಬಿ ನಗರಕ್ಕೆ ಆಗಮಿಸಲಿದ್ದಾರೆ. ಗುಜರಾತ್​ನ ಮೊರ್ಬಿಯ ಸೇತುವೆ ಕುಸಿತವಾದ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು (ಮಂಗಳವಾರ) ಭೇಟಿ ನೀಡಲಿದ್ದಾರೆ. ಹಾಗೇ, ಸಂತ್ರಸ್ತರ ಕುಟುಂಬಸ್ಥರನ್ನು ಭೇಟಿ ಮಾಡಲಿದ್ದಾರೆ.

ಪ್ರಧಾನಿ ಮೋದಿ ಇಂದು ಮಧ್ಯಾಹ್ನ ಮೊರ್ಬಿಗೆ ಭೇಟಿ ನೀಡಲಿದ್ದಾರೆ ಎಂದು ಗುಜರಾತ್ ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ. ಗುಜರಾತ್ ರಾಜಧಾನಿ ಗಾಂಧಿನಗರದಿಂದ ಸುಮಾರು 300 ಕಿ.ಮೀ ದೂರದಲ್ಲಿರುವ ಮೊರ್ಬಿಯಲ್ಲಿ ಭಾನುವಾರ ನಡೆದ ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇದುವರೆಗೆ 170ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದೆ.

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆಗಳು ಭರದಿಂದ ಸಾಗುತ್ತಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ, ಭಾರತೀಯ ವಾಯುಪಡೆ, ಸೇನೆ ಮತ್ತು ನೌಕಾಪಡೆಯ ತಂಡಗಳು, ಸ್ಥಳೀಯ ಸಿಬ್ಬಂದಿ ಸಹ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಮೊರ್ಬಿಯಲ್ಲಿ ದುರದೃಷ್ಟಕರ ದುರ್ಘಟನೆ ನಡೆದಾಗಿನಿಂದ ನಡೆಯುತ್ತಿರುವ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳ ಕುರಿತು ಪ್ರಧಾನಮಂತ್ರಿ ಮೋದಿ ಅವರಿಗೆ ವಿವರಿಸಲಾಯಿತು.

ಇದನ್ನೂ ಓದಿ: Morbi Bridge Tragedy: ಮೊರ್ಬಿ ಸೇತುವೆ ಕುಸಿತ ದುರಂತದಲ್ಲಿ ಬಿಜೆಪಿ ಸಂಸದರ ಕುಟುಂಬದ 12 ಮಂದಿ ಸಾವು

ಈ ದುರಂತಕ್ಕೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ಚರ್ಚಿಸಲಾಯಿತು. ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವು ಸಿಗುವಂತೆ ನೋಡಿಕೊಳ್ಳಲು ಪ್ರಧಾನಿ ಮೋದಿ ಸೂಚಿಸಿದ್ದಾರೆ. ಈ ಸಭೆಯಲ್ಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಗುಜರಾತ್ ಸಂಪುಟದ ಇತರ ಸಚಿವರು ಭಾಗವಹಿಸಿದ್ದರು.

ಮೊರ್ಬಿ ಸೇತುವೆ ದುರಂತದ ಹಿನ್ನೆಲೆಯಲ್ಲಿ ಗುಜರಾತ್ ಸರ್ಕಾರ ನ. 2ರಂದು ರಾಜ್ಯಾದ್ಯಂತ ಶೋಕಾಚರಣೆ ಘೋಷಿಸಿದೆ. ಮೊರ್ಬಿ ಸೇತುವೆ ಕುಸಿತದ ಸಂತ್ರಸ್ತರಿಗೆ ಶ್ರದ್ಧಾಂಜಲಿ ಸಲ್ಲಿಸಲು ಗುಜರಾತ್ ಸರ್ಕಾರ ರಾಜ್ಯಾದ್ಯಂತ ಶೋಕಾಚರಣೆಯನ್ನು ಘೋಷಿಸಿದೆ. ಮಚ್ಚು ನದಿಯ ತೂಗುಸೇತುವೆ ಕುಸಿದು ಭಾನುವಾರ ಸಂಜೆ 134 ಮಂದಿ ಸಾವನ್ನಪ್ಪಿದ ದುರಂತದ ನಂತರದ ಪರಿಸ್ಥಿತಿಯನ್ನು ಅವಲೋಕಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

“ಗುಜರಾತ್ ಸರ್ಕಾರವು ನವೆಂಬರ್ 2 ರಂದು ರಾಜ್ಯಾದ್ಯಂತ ಶೋಕಾಚರಣೆಯನ್ನು ಆಚರಿಸಲು ನಿರ್ಧರಿಸಿದೆ. ರಾಷ್ಟ್ರೀಯ ಧ್ವಜವನ್ನು ರಾಜ್ಯದಲ್ಲಿ ಅರ್ಧಕ್ಕೆ ಹಾರಿಸಲಾಗುತ್ತದೆ ಮತ್ತು ಯಾವುದೇ ಅಧಿಕೃತ ಕಾರ್ಯಕ್ರಮವನ್ನು ನಡೆಸಲಾಗುವುದಿಲ್ಲ” ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ನಾವು ಭಾರತದೊಂದಿಗೆ ಇದ್ದೇವೆ; ಗುಜರಾತ್​​ನ ಮೊರ್ಬಿ ಸೇತುವೆ ದುರಂತಕ್ಕೆ ಜೋ ಬೈಡೆನ್ ಸಂತಾಪ

15 ವರ್ಷಗಳ ಕಾಲ ಸೇತುವೆಯ ನಿರ್ವಹಣೆ ಮತ್ತು ಉಸ್ತುವಾರಿ ವಹಿಸಿಕೊಂಡ ಒರೆವಾ ಕಂಪನಿಯು ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಶತಮಾನದಷ್ಟು ಹಳೆಯದಾದ, ಕೇವಲ 150ರಿಂದ 200 ಜನರ ಸಾಮರ್ಥ್ಯದ ಸೇತುವೆಯ ಮೇಲೆ ಹೋಗಲು ಬರೋಬ್ಬರಿ 650 ಜನರಿಗೆ ಟಿಕೆಟ್ ನೀಡಿತ್ತು. ವೀಕೆಂಡ್ ಆದ್ದರಿಂದ ಜನ ಕಿಕ್ಕಿರಿದು ಸೇರಿದ್ದರು. ಇದು ದುರಂತಕ್ಕೆ ಕಾರಣವಾಯಿತು ಎನ್ನಲಾಗಿದೆ.

ಗುಜರಾತ್‌ನ ಮೊರ್ಬಿ ಸೇತುವೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಒರೆವಾ ಪೊಲೀಸ್ ಅಧಿಕಾರಿಗಳು ಸೇತುವೆಯನ್ನು ನವೀಕರಿಸಿದ ಕಂಪನಿ, ಟಿಕೆಟ್ ಮಾರಾಟಗಾರರು ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ 9 ಜನರನ್ನು ಬಂಧಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೃತರ ಪ್ರತಿ ಕುಟುಂಬಕ್ಕೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ (ಪಿಎಂಎನ್‌ಆರ್‌ಎಫ್) 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ ತಲಾ 50,000 ರೂ. ಪರಿಹಾರ ಘೋಷಿಸಿದ್ದಾರೆ. ಗುಜರಾತ್ ಸರ್ಕಾರ ಮೃತರ ಕುಟುಂಬಕ್ಕೆ 4 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 50,000 ರೂ. ಪರಿಹಾರ ಘೋಷಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:53 am, Tue, 1 November 22