State Formation Day 2022: ನವೆಂಬರ್ 1 ರಂದು ಸ್ಥಾಪನಾ ದಿನವನ್ನು ಆಚರಿಸುವ ಒಂಬತ್ತು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳು
ಇಂದು ನವೆಂಬರ್ 1 ರಂದು, ಕೇರಳ, ಹರಿಯಾಣ, ಮಧ್ಯಪ್ರದೇಶ, ಛತ್ತೀಸ್ಗಢ ಮತ್ತು ಕರ್ನಾಟಕ ಸೇರಿದಂತೆ ಹಲವಾರು ಭಾರತೀಯ ರಾಜ್ಯಗಳು ರಚನೆಯಾದವು. ಇದರ ನೆನಪಿಗಾಗಿ ಪ್ರತಿವರ್ಷ ಈ ದಿನದಂದು ರಾಜ್ಯೋತ್ಸವ ದಿನವನ್ನು ಆಚರಿಸಲಾಗುತ್ತದೆ.
ವಿವಿಧ ರಾಜ್ಯಗಳ ರಚನೆಗೆ ವರ್ಷಗಳೇ ಹಿಡಿದವು. ಭಾರತದ ಪ್ರತಿಯೊಂದು ರಾಜ್ಯವು ಅದರ ವಿಶಿಷ್ಟ ಸಂಸ್ಕೃತಿ ಮತ್ತು ಜನಸಂಖ್ಯಾಶಾಸ್ತ್ರಕ್ಕೆ ಹೆಸರುವಾಸಿಯಾಗಿದೆ. ಈ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ವಿವಿಧ ಕಾಲಘಟ್ಟದಲ್ಲಿ ವಿವಿಧ ರಾಜ್ಯಗಳನ್ನು ರಚಿಸಲಾಯಿತು. ನವೆಂಬರ್ 1 ರಂದು ಕರ್ನಾಟಕ, ಆಂಧ್ರಪ್ರದೇಶ, ಹರಿಯಾಣ, ಛತ್ತಿಸಗಢ, ಕೇರಳ, ಪಂಜಾಬ್ ಮತ್ತು ಮಧ್ಯಪ್ರದೇಶ ರಾಜ್ಯಗಳು ಸ್ಥಾಪನಾ ದಿನವನ್ನು ಆಚರಿಸುತ್ತವೆ, ಇದೇ ಸಮಯದಲ್ಲಿ ಕೇಂದ್ರಾಡಳಿತ ಪ್ರದೇಶ ಸ್ಥಾನಮಾನ ಸಿಕ್ಕ ಹಿನ್ನೆಲೆ ಪುದುಚೇರಿ ಮತ್ತು ಲಕ್ಷದ್ವೀಪಗಳಲ್ಲಿ ರಾಜ್ಯೋತ್ಸವ ಆಚರಣೆ ನಡೆಸಲಾಗುತ್ತದೆ.
ಕರ್ನಾಟಕ 1 ನವೆಂಬರ್ 1956: ದಕ್ಷಿಣ ಭಾರತದ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ಕರ್ನಾಟಕ ರಾಜ್ಯವನ್ನು ರೂಪಿಸಲು ವಿಲೀನಗೊಳಿಸಲಾಯಿತು. ಮೈಸೂರು ಸಂಸ್ಥಾನವನ್ನು ಬಾಂಬೆ ಮತ್ತು ಮದ್ರಾಸ್ ಪ್ರೆಸಿಡೆನ್ಸಿಗಳ ಕನ್ನಡ ಮಾತನಾಡುವ ಪ್ರದೇಶಗಳೊಂದಿಗೆ ಮತ್ತು ಹೈದರಾಬಾದಿನ ರಾಜಪ್ರಭುತ್ವದೊಂದಿಗೆ ವಿಲೀನಗೊಳಿಸಿ ಏಕೀಕೃತ ಕನ್ನಡ ಮಾತನಾಡುವ ಉಪ-ರಾಷ್ಟ್ರೀಯ ಘಟಕವನ್ನು ರಚಿಸಲಾಯಿತು.
ಆಂಧ್ರ ಪ್ರದೇಶ 1 ನವೆಂಬರ್ 1956: ಆಂದೋಲನಗಳು ಮತ್ತು ತ್ಯಾಗಗಳ ಸರಣಿಯ ನಂತರ ಆಗಿನ ಮದ್ರಾಸ್ ಪ್ರೆಸಿಡೆನ್ಸಿಯಿಂದ ಬೇರ್ಪಡಿಸಿ ಹೊಸ ರಾಜ್ಯವನ್ನು ರಚಿಸಲಾಯಿತು. ಆಗ ಹೈದರಾಬಾದ್ ರಾಜ್ಯದ ಭಾಗವಾಗಿದ್ದ ತೆಲಂಗಾಣ ಪ್ರದೇಶವು ನಂತರ ಆಂಧ್ರ ರಾಜ್ಯದೊಂದಿಗೆ ವಿಲೀನಗೊಂಡು ಸಂಪೂರ್ಣ ಆಂಧ್ರಪ್ರದೇಶ ರಾಜ್ಯವಾಗಿ ರೂಪುಗೊಂಡಿತು.
ಕೇರಳ 1 ನವೆಂಬರ್ 1956: ಆಂಧ್ರ ಪ್ರದೇಶ ಮತ್ತು ಕರ್ನಾಟಕದೊಂದಿಗೆ 1956 ರಲ್ಲಿ ರಾಜ್ಯಗಳ ಭಾಷಾವಾರು ಮರುಸಂಘಟನೆಯ ಅಂಗೀಕಾರದ ನಂತರ ಮತ್ತು ಮಲಬಾರ್, ಕೊಚ್ಚಿನ್ ಮತ್ತು ತಿರುವಾಂಕೂರು ಪ್ರಾಂತ್ಯಗಳ ವಿಲೀನದ ನಂತರ ಮದ್ರಾಸ್ ಪ್ರೆಸಿಡೆನ್ಸಿಯಿಂದ ಬೇರ್ಪಟ್ಟು ಕೇರಳ ರಾಜ್ಯವಾಗಿ ರೂಪುಗೊಂಡಿತು.
ಛತ್ತೀಸ್‌ಗಢ 1 ನವೆಂಬರ್ 2000: ಮಧ್ಯಪ್ರದೇಶದ ಹತ್ತು ಛತ್ತೀಸ್‌ಗಢಿ ಮತ್ತು ಆರು ಗೊಂಡಿ ಮಾತನಾಡುವ ಆಗ್ನೇಯ ಜಿಲ್ಲೆಗಳನ್ನು ವಿಭಜಿಸುವ ಮೂಲಕ ರಾಜ್ಯವನ್ನು ರಚಿಸಲಾಯಿತು. ಆ ಮೂಲಕ ಇದು ಭಾರತದ 10 ನೇ ದೊಡ್ಡ ರಾಜ್ಯವಾಯಿತು. ಸುಲಭ ಆಡಳಿತಕ್ಕಾಗಿ ಮತ್ತು ಈ ಪ್ರದೇಶದಲ್ಲಿ ನಕ್ಸಲಿಸಂ ಅನ್ನು ಕಡಿಮೆ ಮಾಡಲು ಪ್ರತ್ಯೇಕ ರಾಜ್ಯವನ್ನು ಮಾಡಲಾಯಿತು.
ಮಧ್ಯಪ್ರದೇಶ 1 ನವೆಂಬರ್ 1956: ರಾಜ್ಯಗಳ ಮರುಸಂಘಟನೆ ಕಾಯಿದೆಯ ಪ್ರಕಾರ, ಮಧ್ಯ ಭಾರತ, ವಿಂಧ್ಯ ಪ್ರದೇಶ ಮತ್ತು ಭೋಪಾಲ್ ರಾಜ್ಯಗಳನ್ನು ಮಧ್ಯಪ್ರದೇಶದಲ್ಲಿ ವಿಲೀನಗೊಳಿಸಲಾಯಿತು ಮತ್ತು ಮರಾಠಿ ಮಾತನಾಡುವ ದಕ್ಷಿಣ ಪ್ರದೇಶ ವಿದರ್ಭವನ್ನು ಬಾಂಬೆ ರಾಜ್ಯಕ್ಕೆ ಬಿಟ್ಟುಕೊಡಲಾಯಿತು. ವಿಸ್ತೀರ್ಣಕ್ಕೆ ಸಂಬಂಧಿಸಿದಂತೆ ಭಾರತದ ಎರಡನೇ ಅತಿದೊಡ್ಡ ರಾಜ್ಯವಾಗಿದೆ.
ಹರಿಯಾಣ 1 ನವೆಂಬರ್ 1966: ಪಂಜಾಬ್ ಮರುಸಂಘಟನೆ ಕಾಯಿದೆ (1966) ಪ್ರಕಾರ ಜಸ್ಟಿಸ್ ಜೆಸಿ ಷಾ ಅವರ ಅಧ್ಯಕ್ಷತೆಯ ಆಯೋಗವು ಅಸ್ತಿತ್ವದಲ್ಲಿರುವ ಪಂಜಾಬ್ ರಾಜ್ಯವನ್ನು ವಿಭಜಿಸಿತು ಮತ್ತು ಹೊಸ ಹರಿಯಾಣ ರಾಜ್ಯದ ಗಡಿಗಳನ್ನು ನಿರ್ಧರಿಸಿತು. ಬೆಳೆ ಉತ್ಪಾದನೆಗೆ ಸಂಬಂಧಿಸಿದಂತೆ ರಾಜ್ಯವು ಹಸಿರು ಕ್ರಾಂತಿಯ ಚಳುವಳಿಯನ್ನು ಮುನ್ನಡೆಸಿದ್ದರಿಂದ ಈ ನಿರ್ಧಾರವು ದೇಶಕ್ಕೆ ವರವಾಗಿ ಪರಿಣಮಿಸಿತು.
ಪಂಜಾಬ್ 1 ನವೆಂಬರ್ 1966 : “ಪಂಜಾಬ್” ಎಂಬ ವಿಸ್ತೃತ ರಾಜ್ಯವನ್ನು ರೂಪಿಸಲು ಪಂಜಾಬ್ ರಾಜ್ಯವನ್ನು ಪೂರ್ವ ಪಂಜಾಬ್ ರಾಜ್ಯದೊಂದಿಗೆ ರಚಿಸಲಾಯಿತು. ಭಾಷಾವಾರು ಆಧಾರದ ಮೇಲೆ ಹರಿಯಾಣವನ್ನು ಪ್ರತ್ಯೇಕಿಸಿದ ನಂತರ, ಪಂಜಾಬಿ-ಮಾತನಾಡುವ ಜನಸಂಖ್ಯೆಯನ್ನು ಪಂಜಾಬ್ ಮರುಸಂಘಟನೆ ಕಾಯಿದೆ, 1966 ರ ಅಡಿಯಲ್ಲಿ ಪಂಜಾಬ್‌ಗೆ ವಿಲೀನಗೊಳಿಸಲಾಯಿತು.
ಪುದುಚೇರಿ: 1947 ರ ಆಗಸ್ಟ್ 15 ರಂದು ಭಾರತವು ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಪಡೆದಾಗ, ಕೆಲವು ಪ್ರದೇಶಗಳು ಇನ್ನೂ ಯುರೋಪಿಯನ್ ನಿಯಂತ್ರಣದಲ್ಲಿ ಉಳಿದಿವೆ. ಪೋರ್ಚುಗೀಸರು ಗೋವಾವನ್ನು ನಿಯಂತ್ರಿಸಿದರೆ ಫ್ರೆಂಚರು ಪುದುಚೇರಿಯ ಮೇಲೆ ಹಿಡಿತ ಸಾಧಿಸಿದ್ದರು. ಫ್ರೆಂಚ್ ತನ್ನ ನಿಯಂತ್ರಣದಲ್ಲಿದ್ದ ಪ್ರದೇಶಗಳನ್ನು 1954 ನವೆಂಬರ್ 1 ರಂದು ಭಾರತಕ್ಕೆ ವರ್ಗಾಯಿಸಿತು. ಇದರ ನೆನಪಿಗಾಗಿ ನವೆಂಬರ್ 1ರಂದು ಪುದುಚೇರಿ ವಿಮೋಚನಾ ದಿನವನ್ನು ಆಚರಿಸಲಾಗುತ್ತದೆ.
ಲಕ್ಷದ್ವೀಪ: 1956 ರ ನವೆಂಬರ್ 1ರಂದು ಕೇಂದ್ರಾಡಳಿತ ಪ್ರದೇಶವನ್ನಾಗಿ ರಚಿಸಲಾಯಿತು ಮತ್ತು ಇದನ್ನು 1973 ರಲ್ಲಿ ಲಕ್ಷದ್ವೀಪ ಎಂದು ಹೆಸರಿಸಲಾಯಿತು. ಇದಕ್ಕೂ ಮುನ್ನ ಲಕ್ಕಾಡಿವ್, ಮಿನಿಕಾಯ್ ಮತ್ತು ಅಮಿಂಡಿವ್ ಎಂದು ಕರೆಯಲಾಗುತ್ತಿತ್ತು.
ಮತ್ತಷ್ಟು ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:16 am, Tue, 1 November 22