ತಾಲಿಬಾನ್ ಬೆಂಬಲಿಸಿ ಹೇಳಿಕೆ ನೀಡಿದ ಎಸ್​ಪಿ ಸಂಸದನ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 18, 2021 | 5:53 PM

ಸಂಸದನ ವಿರುದ್ಧ ಸೆಕ್ಷನ್ 153ಎ (ವಿವಿಧ ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆಯ ಆಧಾರದ ಮೇಲೆ ದ್ವೇಷ ಹೆಚ್ಚಿಸುವುದು) ಮತ್ತು ಸೆಕ್ಷನ್ 295ಎ (ಧಾರ್ಮಿಕ ಭಾವನೆಗಳಿಗೆ ಧಕ್ಕೆ) ಅನ್ವಯ ಪ್ರಕರಣ ದಾಖಲಿಸಲಾಗಿದೆ.

ತಾಲಿಬಾನ್ ಬೆಂಬಲಿಸಿ ಹೇಳಿಕೆ ನೀಡಿದ ಎಸ್​ಪಿ ಸಂಸದನ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು
ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಸಂಸದ ಶಫೀಕ್​ಉರ್ ರೆಹಮಾನ್ ಬರ್ಖ್
Follow us on

ದೆಹಲಿ: ಅಫ್ಘಾನಿಸ್ತಾನವನ್ನು ತಾಲಿಬಾನ್ ತನ್ನ ವಶಕ್ಕೆ ತೆಗೆದುಕೊಂಡ ವಿದ್ಯಮಾನವನ್ನು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸಮೀಕರಿಸಿ ಹೇಳಿಕೆ ನೀಡಿದ್ದ ಸಮಾಜವಾದಿ ಪಕ್ಷದಿಂದ ಆಯ್ಕೆಯಾಗಿರುವ ಉತ್ತರ ಪ್ರದೇಶದ ಸಂಭಾಲ್ ಕ್ಷೇತ್ರದ ಸಂಸದ ಷಫೀಕ್​ಉರ್ ರೆಹಮಾನ್ ಬರ್ಖ್​ ಅವರ ವಿರುದ್ಧ ಬುಧವಾರ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ.

ಬಿಜೆಪಿ ನಾಯಕ ರಾಜೇಶ್​ ಸಿಂಘಲ್ ನೀಡಿದ್ದ ದೂರು ಆಧರಿಸಿ ಭಾರತೀಯ ದಂಡ ಸಂಹಿತೆಯ 124 ಎ (ದೇಶದ್ರೋಹ) ವಿಧಿಯ ಅನ್ವಯ ಶಫೀಕ್​ಉರ್ ರೆಹಮಾನ್ ಬರ್ಖ್​ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್​ ವರಿಷ್ಠಾಧಿಕಾರಿ ಚಕ್ರೇಶ್ ಮಿಶ್ರಾ ಮಾಹಿತಿ ನೀಡಿದ್ದಾರೆ. ಬರ್ಖ್​ ನೀಡಿರುವ ಹೇಳಿಕೆಯು ದೇಶದ್ರೋಹದ ವ್ಯಾಪ್ತಿಗೆ ಬರುತ್ತದೆ ಎಂದು ಸಿಂಘಲ್ ಹೇಳಿದ್ದಾರೆ.

ಸಂಸದನ ವಿರುದ್ಧ ಸೆಕ್ಷನ್ 153ಎ (ವಿವಿಧ ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆಯ ಆಧಾರದ ಮೇಲೆ ದ್ವೇಷ ಹೆಚ್ಚಿಸುವುದು) ಮತ್ತು ಸೆಕ್ಷನ್ 295ಎ (ಧಾರ್ಮಿಕ ಭಾವನೆಗಳಿಗೆ ಧಕ್ಕೆ) ಅನ್ವಯ ಪ್ರಕರಣ ದಾಖಲಿಸಲಾಗಿದೆ.

ಬರ್ಖ್​ ಜೊತೆಗೆ ಇನ್ನಿಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಮೊಹಮದ್ ಮಖೀನ್ ಮತ್ತು ಚೌಧರಿ ಫೈಜಾನ್ ಅಪಾದಿತರು. ಇವರು ವಿರುದ್ಧವೂ ಬರ್ಖ್​ ಅವರ ಮೇಲೆ ದಾಖಲಿಸಿರುವ ವಿಧಿಗಳನ್ನೇ ಬಳಸಲಾಗಿದೆ. ಸಂಸದನ ಹೇಳಿಕೆಯ ನಂತರ ಸಮಾಜವಾದಿ ಪಕ್ಷದ ಕಾರ್ಯಕರ್ತರಾದ ಮಖೀನ್ ಮತ್ತು ಫೈಜನ್ ಸಾಮಾಜಿಕ ಮಾಧ್ಯಮಗಳಲ್ಲಿ ತಾಲಿಬಾನ್ ಬೆಂಬಲಿಸಿ ಪೋಸ್ಟ್​ಗಳನ್ನು ಹಾಕಿದ್ದರು.

ವರದಿಗಾರರ ಪ್ರಶ್ನೆಗಳಿಗೆ ಉತ್ತರಿಸುವಾಗ ಲೋಕಸಭಾ ಸದಸ್ಯ ಬರ್ಖ್​, ‘ತಾಲಿಬಾನ್​ಗೆ ಅವರ ದೇಶವನ್ನು ಮುಕ್ತಿಗೊಳಿಸಬೇಕೆನ್ನುವ ಆಶಯವಿತ್ತು. ಇದು ಅಫ್ಘಾನಿಸ್ತಾನದ ಆಂತರಿಕ ವಿಚಾರ ಎಂದು ಅಭಿಪ್ರಾಯಪಟ್ಟಿದ್ದರು. ಅಫ್ಘಾನಿಸ್ತಾನದಲ್ಲಿ ರಷ್ಯಾ ಅಥವಾ ಅಮೆರಿಕಕ್ಕೆ ನೆಲೆಯೂರಲು ಬಿಡದ ಶಕ್ತಿ ತಾಲಿಬಾನ್. ಈಗ ಅವರಿಗೆ ತಮ್ಮ ದೇಶವನ್ನು ಮುನ್ನಡೆಸಬೇಕು ಎನಿಸಿದೆ ಎಂದು ಅವರು ವಿಶ್ಲೇಷಿಸಿದ್ದರು.

ಭಾರತವು ಬ್ರಿಟಿಷರ ಅಧೀನದಲ್ಲಿದ್ದಾಗ ಇಡೀ ದೇಶವು ಸ್ವಾತಂತ್ರ್ಯಕ್ಕಾಗಿ ಹೋರಾಡಿತ್ತು. ಈಗ ಅವರಿಗೂ ಸ್ವಾತಂತ್ರ್ಯ ಬೇಕು ಎನಿಸಿದೆ. ಇದು ಅವರ ವೈಯಕ್ತಿಕ ವಿಚಾರ. ನಾವು ಹೇಗೆ ಮಧ್ಯಪ್ರವೇಶಿಸಲು ಸಾಧ್ಯ ಎಂದು ಪ್ರಶ್ನಿಸಿದ್ದರು. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತಕ್ಕೆ ಅನುಮೋದನೆ ನೀಡಿದ್ದ ಬರ್ಖ್, ತಮಗೆ ಬೇಕಾದ ರೀತಿಯಲ್ಲಿ ತಮ್ಮ ದೇಶವನ್ನು ಮುಂದಕ್ಕೆ ಕೊಂಡೊಯ್ಯಲು ಅಫ್ಘಾನಿಗಳಿಗೆ ಸ್ವಾತಂತ್ರ್ಯವಿದೆ ಎಂದಿದ್ದರು.

ಬರ್ಖ್​ ಅವರ ಈ ಹೇಳಿಕೆಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಉತ್ತರ ಪ್ರದೇಶ ಶಾಸನಸಭೆಯಲ್ಲಿಯೇ ಕಟುವಾಗಿ ಟೀಕಿಸಿದ್ದರು. ಅವರು ನಾಚಿಕೆಯಿಲ್ಲದೆ ತಾಲಿಬಾನಿಗಳ ಕ್ರೌರ್ಯವನ್ನು ಬೆಂಬಲಿಸುತ್ತಿದ್ದಾರೆ. ಸಂಸದೀಯ ಪ್ರಜಾಪ್ರಭುತ್ವವಾಗಿ ನಾವು ಎತ್ತ ಸಾಗುತ್ತಿದ್ದೇವೆ? ಮಾನವೀಯತೆಗೆ ಕಪ್ಪುಚುಕ್ಕೆಯಾಗಿರುವವರನ್ನು ಬೆಂಬಲಿಸುತ್ತಿದ್ದೇವೆಯೇ ಎಂದು ಅವರು ಪ್ರಶ್ನಿಸಿದರು.

(MP Shafiqur Rehman Barq from Uttar Pradesh supports Taliban Act booked for sedition)

ಇದನ್ನೂ ಓದಿ: TV9 Kannada Digital Live: ಅಮೆರಿಕವೆಂಬ ವಿದೇಶಿ ಶಕ್ತಿಯನ್ನು ಓಡಿಸಿದ ತಾಲಿಬಾನಿಗಳದ್ದು ನಿಜವಾದ ದೇಶಭಕ್ತಿ; ಸುಧೀಂದ್ರ ಕುಲಕರ್ಣಿ

ಇದನ್ನೂ ಓದಿ: Taliban In Afghanistan: ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಆಡಳಿತ ಇದ್ದರೆ ಇಡೀ ಜಗತ್ತಿಗೆ ಕೊರೊನಾ ಇದ್ದಂತೆ ಏಕೆ?