AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಂದೇಡ್ ಆಸ್ಪತ್ರೆಯಲ್ಲಿ 48 ಗಂಟೆಗಳಲ್ಲಿ 31 ಸಾವು; ಕೊಳಕಾಗಿದ್ದ ಶೌಚಾಲಯವನ್ನು ಡೀನ್ ಕೈಯಲ್ಲೇ ಸ್ವಚ್ಛ ಮಾಡಿಸಿದ ಸಂಸದ

ಡೀನ್ ಶೌಚಾಲಯವನ್ನು ತೊಳೆಯುತ್ತಿರುವಾಗ ಸಂಸದರು ನೀರಿನ ಪೈಪ್ ಹಿಡಿದಿರುವುದನ್ನು ವಿಡಿಯೊಗಳು ತೋರಿಸುತ್ತವೆ. ಕಂಟೇನರ್, ಬಾಟಲಿ ಮತ್ತು ಟಾಯ್ಲೆಟ್ ಬ್ರಷ್ ಅನ್ನು ಕಿಟಕಿಯ ಮೇಲೆ ಹಾಕುತ್ತಿರುವುದು ವಿಡಿಯೊದಲ್ಲಿದೆ. ನಂತರ ಪಾಟೀಲ್ ಅವರು ಶೌಚಾಲಯಕ್ಕೆ ನೀರನ್ನು ಸಿಂಪಡಿಸುವುದನ್ನು ಕಾಣಬಹುದು. ವಾಕೋಡೆ ಅವರು ವೈಪರ್‌ನೊಂದಿಗೆ ಹಿಡಿದಿದ್ದು, ಕೊಳಕು ನೀರನ್ನು ಕಮೋಡ್‌ಗೆ ಬಿಡುವಂತೆ ಸಂಸದರು ಹೇಳುತ್ತಿರುವುದು ವಿಡಿಯೊದಲ್ಲಿದೆ.

ನಾಂದೇಡ್ ಆಸ್ಪತ್ರೆಯಲ್ಲಿ 48 ಗಂಟೆಗಳಲ್ಲಿ 31 ಸಾವು; ಕೊಳಕಾಗಿದ್ದ ಶೌಚಾಲಯವನ್ನು ಡೀನ್ ಕೈಯಲ್ಲೇ ಸ್ವಚ್ಛ ಮಾಡಿಸಿದ ಸಂಸದ
ನಾಂದೇಡ್‌ನ ಸರ್ಕಾರಿ ಆಸ್ಪತ್ರೆಯ ಶೌಚಾಲಯ ಸ್ವಚ್ಛಗೊಳಿಸುತ್ತಿರುವುದು
ರಶ್ಮಿ ಕಲ್ಲಕಟ್ಟ
|

Updated on: Oct 03, 2023 | 6:14 PM

Share

ಮುಂಬೈ ಅಕ್ಟೋಬರ್ 03: ಮಹಾರಾಷ್ಟ್ರದ ನಾಂದೇಡ್‌ನ (Nanded)ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಕಳೆದ  48 ಗಂಟೆಗಳಲ್ಲಿ 31 ಜನರು ಸಾವಿಗೀಡಾಗಿದ್ದಾರೆ. ಈ ಸಾವುಗಳು ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ನಂತರ, ಶಿವಸೇನೆ (ಶಿಂಧೆ ಬಣ) ಸಂಸದ ಹೇಮಂತ್ ಪಾಟೀಲ್ ( Hemant Patil) ಅವರು ಮಂಗಳವಾರ ಶಂಕರರಾವ್ ಚವ್ಹಾಣ್ ಸರ್ಕಾರಿ ಆಸ್ಪತ್ರೆಗೆ (Shankarrao Chavan Government Hospital) ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಅಲ್ಲಿ ಕೊಳಕಾಗಿರುವ ಶೌಚಾಲಯವನ್ನು ಕಂಡ ಪಾಟೀಲ್ ಅವರು ಆಸ್ಪತ್ರೆಯ ಡೀನ್ ಶ್ಯಾಮರಾವ್ ವಾಕೋಡೆ ಅವರನ್ನು ಕರೆದು ಅದನ್ನು ಸ್ವಚ್ಛಗೊಳಿಸುವಂತೆ ಹೇಳಿದ್ದಾರೆ.

ಡೀನ್ ಶೌಚಾಲಯವನ್ನು ತೊಳೆಯುತ್ತಿರುವಾಗ ಸಂಸದರು ನೀರಿನ ಪೈಪ್ ಹಿಡಿದಿರುವುದನ್ನು ವಿಡಿಯೊಗಳು ತೋರಿಸುತ್ತವೆ. ಕಂಟೇನರ್, ಬಾಟಲಿ ಮತ್ತು ಟಾಯ್ಲೆಟ್ ಬ್ರಷ್ ಅನ್ನು ಕಿಟಕಿಯ ಮೇಲೆ ಹಾಕುತ್ತಿರುವುದು ವಿಡಿಯೊದಲ್ಲಿದೆ. ನಂತರ ಪಾಟೀಲ್ ಅವರು ಶೌಚಾಲಯಕ್ಕೆ ನೀರನ್ನು ಸಿಂಪಡಿಸುವುದನ್ನು ಕಾಣಬಹುದು. ವಾಕೋಡೆ ಅವರು ವೈಪರ್‌ನೊಂದಿಗೆ ಹಿಡಿದಿದ್ದು, ಕೊಳಕು ನೀರನ್ನು ಕಮೋಡ್‌ಗೆ ಬಿಡುವಂತೆ ಸಂಸದರು ಹೇಳುತ್ತಿರುವುದು ವಿಡಿಯೊದಲ್ಲಿದೆ.

ಸೋಮವಾರ ಈ ಆಸ್ಪತ್ರೆಯಲ್ಲಿ 24 ಗಂಟೆಗಳಲ್ಲಿ 24 ಸಾವುಗಳನ್ನು ವರದಿ ಆಗಿದ್ದು, ಮಂಗಳವಾರ 48 ಗಂಟೆಗಳಲ್ಲಿ ಸಂಖ್ಯೆ 31 ಕ್ಕೆ ಏರಿದೆ. 71 ರೋಗಿಗಳ ಸ್ಥಿತಿ ಚಿಂತಾಜನಕವಾಗಿದೆ. ವಕೋಡೆ ಅವರು ಸೋಮವಾರ ವೈದ್ಯಕೀಯ ನಿರ್ಲಕ್ಷ್ಯದ ಆರೋಪಗಳನ್ನು ತಿರಸ್ಕರಿಸಿದ್ದು, ಔಷಧಿಗಳು ಅಥವಾ ವೈದ್ಯರ ಕೊರತೆಯಿಲ್ಲ ಎಂದು ಹೇಳಿದರು. ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದ್ದರೂ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ಹೇಳಿದ್ದರು.

ಶಿವಸೇನೆ (ಶಿಂಧೆ ಬಣ), ಬಿಜೆಪಿ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಜಿತ್ ಪವಾರ್ ಬಣವನ್ನು ಒಳಗೊಂಡಿರುವ ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರವನ್ನು ವಿಪಕ್ಷಗಳು ತರಾಟೆಗೆ ತೆಗೆದುಕೊಂಡಿವೆ. ಬಿಜೆಪಿ ಸರ್ಕಾರ ಪ್ರಚಾರಕ್ಕಾಗಿ ಸಾವಿರಾರು ಕೋಟಿ ಖರ್ಚು ಮಾಡುತ್ತದೆ, ಆದರೆ ಮಕ್ಕಳ ಔಷಧಿಗಳನ್ನು ಖರೀದಿಸಲು ಹಣವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ  ಮಲ್ಲಿಕಾರ್ಜುನ ಖರ್ಗೆ ಸೋಮವಾರ ಈ ಬಗ್ಗೆ ಪೋಸ್ಟ್ ಮಾಡಿದ್ದು, ಮಹಾರಾಷ್ಟ್ರದ ನಾಂದೇಡ್‌ನ ಸಿವಿಲ್ ಆಸ್ಪತ್ರೆಯಲ್ಲಿ 12 ಶಿಶುಗಳು ಸೇರಿದಂತೆ 24 ರೋಗಿಗಳು ಸಾವಿಗೀಡಾದ ಸುದ್ದಿ ಅತ್ಯಂತ ನೋವಿನ, ಗಂಭೀರ ಮತ್ತು ಆತಂಕಕಾರಿಯಾಗಿದೆ ಔಷಧಿಗಳು ಮತ್ತು ಚಿಕಿತ್ಸೆಯ ಕೊರತೆಯಿಂದಾಗಿ, ಥಾಣೆಯ ಸರ್ಕಾರಿ ಆಸ್ಪತ್ರೆಯಲ್ಲಿ ಆಗಸ್ಟ್ 2023 ರಲ್ಲಿ ಇದೇ ರೀತಿಯ ಘಟನೆ ನಡೆದಿತ್ತು, ಇದರಲ್ಲಿ 18 ರೋಗಿಗಳು ಪ್ರಾಣ ಕಳೆದುಕೊಂಡರು.

ಇದನ್ನೂ ಓದಿ: ಮೋದಿಯವರ ಮನ್ ಕಿ ಬಾತ್ ಸರ್ಕಾರದ ಯೋಜನೆಗಳ ಅರಿವು ಹೆಚ್ಚಿಸುತ್ತದೆ: ವರದಿ

ವಿಸ್ತೃತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಕಾಂಗ್ರೆಸ್ ಮುಖ್ಯಸ್ಥರು ಆಗ್ರಹಿಸಿದ್ದಾರೆ.

ಸಾವಿನ ಕುರಿತು ತನಿಖೆ ನಡೆಸಲು ಸಮಿತಿಯನ್ನು ರಚಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ನಿರ್ದೇಶಕ ಡಾ.ದಿಲೀಪ್ ಮಹೈಸೇಕರ್ ತಿಳಿಸಿದ್ದಾರೆ. ಮಹಾರಾಷ್ಟ್ರ ವೈದ್ಯಕೀಯ ಶಿಕ್ಷಣ ಸಚಿವ ಹಸನ್ ಮುಶ್ರಿಫ್ ಮಂಗಳವಾರ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ. ನಾನು ನಾಂದೇಡ್‌ಗೆ ಹೋಗುತ್ತಿದ್ದೇನೆ. ಇದು ಆಗಬಾರದಿತ್ತು. ಔಷಧಿಗಳು ಅಥವಾ ವೈದ್ಯರ ಕೊರತೆ ಇರಲಿಲ್ಲ. ನಾವು ಪ್ರತಿ ಸಾವಿನ ಬಗ್ಗೆ ತನಿಖೆ ನಡೆಸುತ್ತೇವೆ. ನಿರ್ಲಕ್ಷ್ಯ ತೋರಿದವರು ಯಾರೇ ಆದರೂ ಶಿಕ್ಷೆಯಾಗುತ್ತದೆ ಎಂದು ಮುಶ್ರಿಫ್ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ