15,000 ಜನರನ್ನು ಕೊಲ್ಲುವ ಪಿತೂರಿ; ಮುಂಬೈನಲ್ಲಿ ಮೊಹರಂ ಮೆರವಣಿಗೆ ವೇಳೆ ಸಿಕ್ಕಿದ್ದ ವ್ಯಕ್ತಿ ಬಾಯ್ಬಿಟ್ಟ ಭಯಾನಕ ವಿಚಾರ

Mumbai man wanted to kill 15,000 people: ಮುಂಬೈನಲ್ಲಿ ಮೊಹರಂ ಮೆರವಣಿಗೆ ವೇಳೆ ವಿಷಕಾರಿ ಮಾತ್ರೆ ವಿತರಿಸುತ್ತಿದ್ದೆನ್ನಲಾದ ವ್ಯಕ್ತಿಯೊಬ್ಬ ಸಿಕ್ಕಿಬಿದ್ದಿದ್ದಾನೆ. ಫಯಾಜ್ ಪ್ರೇಮ್​ಜಿ ಎನ್ನುವ ಈ ವ್ಯಕ್ತಿ 15,000 ಮಂದಿಯನ್ನು ಕೊಲ್ಲಲು ಯೋಜಿಸಿದ್ದ ಭಯಾನಕ ಸಂಗತಿ ಬೆಳಕಿಗೆ ಬಂದಿದೆ. ಮೆರವಣಿಗೆ ವೇಳೆ ಈತ ವಿತರಿಸಿದ್ದ ಮಾತ್ರ ಸೇವಿಸಿ 10ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡರೆನ್ನಲಾಗಿದೆ.

15,000 ಜನರನ್ನು ಕೊಲ್ಲುವ ಪಿತೂರಿ; ಮುಂಬೈನಲ್ಲಿ ಮೊಹರಂ ಮೆರವಣಿಗೆ ವೇಳೆ ಸಿಕ್ಕಿದ್ದ ವ್ಯಕ್ತಿ ಬಾಯ್ಬಿಟ್ಟ ಭಯಾನಕ ವಿಚಾರ
ಅಪರಾಧದ ಸಾಂದರ್ಭಿಕ ಚಿತ್ರ
Image Credit source: Getty Images

Updated on: Jun 28, 2026 | 1:40 PM

ಮುಂಬೈ, ಜೂನ್ 28: ಇಲ್ಲಿನ ಬೈಕುಲ್ಲಾ ಪ್ರದೇಶದಲ್ಲಿ ಮೊಹರಂ ಮೆರವಣಿಗೆಯಲ್ಲಿ (Muharram Procession) ಭಾಗವಹಿಸಿದ್ದ ಜನರಿಗೆ “ನೋವು ನಿವಾರಕ” (Painkiller) ಎಂದು ಸುಳ್ಳು ಹೇಳಿ, ವಿಷಕಾರಿ ಮಾತ್ರೆಗಳನ್ನು ವಿತರಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಫಯಾಜ್ ಪ್ರೇಮ್​ಜಿ (Fayyaz Premji) ಎನ್ನುವ ಈತ ನೀಡಿದ್ದ ಮಾತ್ರೆ ನುಂಗಿ ಹಲವರು ಅಸ್ವಸ್ಥಗೊಂಡಿದ್ದಾರೆ. ಅದೃಷ್ಟವಶಾತ್, ಸಾವಿರಾರು ಜನರು ಈತನ ಸಾವಿನ ಪಾಶಕ್ಕೆ ಸಿಲುಕುವುದರಿಂದ ಬಚಾವಾಗಿದ್ದಾರೆ. ಈತನ ಪೊಲೀಸ್ ವಿಚಾರಣೆ ವೇಳೆ, ಈ ಭಯಾನಕ ಸಂಗತಿ ಬೆಳಕಿಗೆ ಬಂದಿದೆ.

ಬೈಕುಲ್ಲಾ ಪ್ರದೇಶದಲ್ಲಿರುವ ರೀಯಾ ರಸ್ತೆಯಲ್ಲಿನ ರೆಹಮತಾಬಾದ್ ಸ್ಮಶಾನದ ಸಮೀಪ ಮೊಹರಂ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸಲ್ಮಾನ್ ಎಂಬ ವ್ಯಕ್ತಿ, ಆರೋಪಿ ನೀಡಿದ ಮಾತ್ರೆ ಸೇವಿಸಿದ ನಂತರ ವಾಂತಿ ಮತ್ತು ಹೊಟ್ಟೆ ನೋವಿನಿಂದ ಅಸ್ವಸ್ಥಗೊಂಡಿದ್ದನು. ಆತನಿಗೆ ತಕ್ಷಣ ಚಿಕಿತ್ಸೆ ನೀಡಲಾಗಿದ್ದು, ಪ್ರಸ್ತುತ ಆತ ಅಪಾಯದಿಂದ ಪಾರಾಗಿದ್ದಾನೆ. ಹತ್ತಕ್ಕೂ ಹೆಚ್ಚು ಜನರು ಈತ ನೀಡಿದ ಮಾತ್ರೆ ಸೇವಿಸಿ ಅಸ್ವಸ್ಥಗೊಂಡಿರುವುದು ತಿಳಿದುಬಂದಿದೆ.

ಇದನ್ನೂ ಓದಿ: ಮೊಹರಂ ಮೆರವಣಿಗೆಯಲ್ಲಿ ಮಹಾ ಸಂಚು:’ನೋವು ನಿವಾರಕ’ ಎಂದು ಇಲಿ ಪಾಷಾಣದ ಮಾತ್ರೆ ಹಂಚುತ್ತಿದ್ದ ಪಾಪಿ ಅರೆಸ್ಟ್!

ಬಂಧಿತ ಆರೋಪಿಯನ್ನು ಫಯಾಜ್ ಪ್ರೇಮ್​ಜಿ ಎಂದು ಗುರುತಿಸಲಾಗಿದೆ. ಈತ ಪೇಂಟ್ (ಬಣ್ಣದ) ವ್ಯವಹಾರವನ್ನು ನಡೆಸುತ್ತಿದ್ದನು. ವಿಚಾರಣೆ ವೇಳೆ, ಈತ ಮೆರವಣಿಗೆಯಲ್ಲಿ ಭಾಗವಹಿಸುವ ಜನರಿಗೆ ಸಾಮೂಹಿಕ ಹಾನಿ ಉಂಟುಮಾಡುವ ಉದ್ದೇಶದಿಂದ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಈತನ ಬಳಿ ಸುಮಾರು 15,000 ವಿಷಕಾರಿ ಮಾತ್ರೆಗಳಿದ್ದುವು. ಈತ ಹದಿನೈದು ಸಾವಿರ ಮಂದಿಯನ್ನು ಕೊಲ್ಲುವ ಪಿತೂರಿ ಮಾಡಿದ್ದನೆನ್ನಲಾಗಿದೆ.

ಝಿಂಕ್ ಫಾಸ್​ಫೈಡ್ ಇರುವ ಮಾತ್ರೆಗಳು

ಆರೋಪಿಯ ಬಳಿ ಇಲಿಗಳನ್ನು ಕೊಲ್ಲಲು ಬಳಸುವ ಅತ್ಯಂತ ವಿಷಕಾರಿ ರಾಸಾಯನಿಕವಾದ ‘ಝಿಂಕ್ ಫಾಸ್ಫೈಡ್’ (Zinc Phosphide) ಪತ್ತೆಯಾಗಿದೆ. ಈತ 50 ಕೆ.ಜಿ.ಯಷ್ಟು ವಿಷಕಾರಿ ರಾಸಾಯನಿಕ ಮತ್ತು ಸುಮಾರು 30,000 ಖಾಲಿ ಕ್ಯಾಪ್ಸುಲ್‌ಗಳನ್ನು ಖರೀದಿಸಿ, ಕಳೆದ 15 ದಿನಗಳಿಂದ ಮುಂಬೈನಲ್ಲೇ ಇದ್ದು, ಪ್ರತಿ ಕ್ಯಾಪ್ಸುಲ್‌ನಲ್ಲಿ ವಿಷವನ್ನು ತುಂಬಿ ಸಿದ್ಧಪಡಿಸುತ್ತಿದ್ದನೆನ್ನಲಾಗಿದೆ.

ಪೊಲೀಸರು ಸಕಾಲದಲ್ಲಿ ಕಾರ್ಯಪ್ರವೃತ್ತರಾಗಿ ಸುಮಾರು 14,900 ವಿಷಕಾರಿ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ. ಇದರಿಂದಾಗಿ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.

ಇದನ್ನೂ ಓದಿ: ಮನ್​​ ಕಿ ಬಾತ್ 135ನೇ ಸಂಚಿಕೆ: ಮೇಕ್​​ ಇನ್​​ ಇಂಡಿಯಾ ಸಾಧನೆ ಬಣ್ಣಿಸಿದ ಮೋದಿ

ಸೆಕ್ಷನ್ 123 ಅಡಿಯಲ್ಲಿ ತನಿಖೆ

ಆರೋಪಿಯ ಮೇಲೆ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 123ರ ಅಡಿಯಲ್ಲಿ (ವಿಷ ಅಥವಾ ಅಪಾಯಕಾರಿ ವಸ್ತುಗಳನ್ನು ನೀಡಿ ಹಾನಿ ಉಂಟುಮಾಡಲು ಪ್ರಯತ್ನಿಸಿದ ಆರೋಪ) ಪ್ರಕರಣ ದಾಖಲಿಸಲಾಗಿದೆ. ವರದಿಗಳ ಪ್ರಕಾರ, ಆರೋಪಿಯು ಕಳೆದ ವರ್ಷದಲ್ಲಿ ಇರಾನ್ ಮತ್ತು ಇರಾಕ್‌ಗೆ ಹಲವು ಬಾರಿ ಪ್ರಯಾಣ ಬೆಳೆಸಿರುವುದು ಪತ್ತೆಯಾಗಿದ್ದು, ಆತನ ಸಂಪರ್ಕಗಳು ಮತ್ತು ವಿದೇಶಿ ನಂಟಿನ ಕುರಿತು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.
YouTube video player

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us