AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನ್​​ ಕಿ ಬಾತ್ 135ನೇ ಸಂಚಿಕೆ: ಮೇಕ್​​ ಇನ್​​ ಇಂಡಿಯಾ ಸಾಧನೆ ಬಣ್ಣಿಸಿದ ಮೋದಿ

Mann Ki Baat: ತಮ್ಮ 135ನೇ 'ಮನ ಕಿ ಬಾತ್' ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ರಕ್ಷಣಾ ಮತ್ತು ವಿಮಾನಯಾನ ಕ್ಷೇತ್ರದಲ್ಲಿ 'ಮೇಕ್ ಇನ್ ಇಂಡಿಯಾ' ಅಡಿ ಸಾಧಿಸಿದ ಐತಿಹಾಸಿಕ ಮೈಲಿಗಲ್ಲುಗಳನ್ನು ಪ್ರಶಂಸಿಸಿದ್ದಾರೆ. ನೀರಿನ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರೂ ಭಾಗಿಯಾಗಬೇಕು ಎಂದು ಕರೆ ನೀಡಿರುವ ಅವರು, ನಾಗಾಲ್ಯಾಂಡ್‌ನಲ್ಲಿ ನಡೆಸಲಾಗುತ್ತಿರುವ 'ಬೇಬಿ ಲೀಗ್' ಫುಟ್‌ಬಾಲ್ ಟೂರ್ನಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮನ್​​ ಕಿ ಬಾತ್ 135ನೇ ಸಂಚಿಕೆ: ಮೇಕ್​​ ಇನ್​​ ಇಂಡಿಯಾ ಸಾಧನೆ ಬಣ್ಣಿಸಿದ ಮೋದಿ
ಮನ್​​ ಕಿ ಬಾತ್ 135ನೇ ಸಂಚಿಕೆImage Credit source: Narendra Modi X Account
ಪ್ರಸನ್ನ ಹೆಗಡೆ
|

Updated on:Jun 28, 2026 | 1:01 PM

Share

ನವದೆಹಲಿ, ಜೂನ್​​ 28: ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್​​ ಕಿ ಬಾತ್​​ನ 135ನೇ ಸಂಚಿಕೆಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಮೇಕ್​​ ಇನ್​​ ಇಂಡಿಯಾ ಅಡಿ ದೇಶದ ಸಾಧನೆಗಳನ್ನು ಬಣ್ಣಿಸಿದ್ದಾರೆ. 2026ರ ಮೊದಲಾರ್ಧದಲ್ಲಿ ಭಾರತವು ರಾಷ್ಟ್ರೀಯ ಭದ್ರತೆ, ಸ್ವಾವಲಂಬನೆ, ರಕ್ಷಣಾ ಕ್ಷೇತ್ರ, ವಿಮಾನಯಾನ, ಸಾಮಾಜಿಕ ಭದ್ರತೆ, ಪರಿಸರ ಸಂರಕ್ಷಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಹತ್ವದ ಸಾಧನೆಗಳನ್ನು ಮಾಡಿದೆ ಎಂದವರು ಸಂತಸ ವ್ಯಕ್ತಪಡಿಸಿದ್ದಾರೆ.

‘ಭಾರತದ ರಕ್ಷಣಾ ಕ್ಷೇತ್ರದ ಮತ್ತೊಂದು ಮೈಲಿಗಲ್ಲು’

ಇತ್ತೀಚೆಗೆ ಕೊಲ್ಕತ್ತಾ ಪ್ರವಾಸದ ವೇಳೆ ಐಎನ್‌ಎಸ್ ದುನಗಿರಿ, ಐಎನ್‌ಎಸ್ ಸಂಶೋಧಕ್ ಮತ್ತು ಐಎನ್‌ಎಸ್ ಅಗ್ರಾಯ್ ಯುದ್ಧನೌಕೆಗಳನ್ನು ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದನ್ನು ನೆನಪಿಸಿಕೊಂಡ ಅವರು, ಈ ಹಡಗುಗಳ ವಿನ್ಯಾಸದಿಂದ ನಿರ್ಮಾಣದವರೆಗೆ ಎಲ್ಲವೂ ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಿಂದ ರೂಪುಗೊಂಡಿವೆ ಎಂದು ಹೇಳಿದರು. ಜೂನ್ ತಿಂಗಳಲ್ಲಿ ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಸ್ವದೇಶಿ ಲಾಂಗ್ ರೇಂಜ್ ಲ್ಯಾಂಡ್ ಅಟ್ಯಾಕ್ ಕ್ರೂಸ್ ಮಿಸೈಲ್ ಯಶಸ್ವಿ ಪರೀಕ್ಷೆ ನಡೆಸಿರುವುದನ್ನು ಭಾರತದ ರಕ್ಷಣಾ ಕ್ಷೇತ್ರದ ಮತ್ತೊಂದು ಮೈಲಿಗಲ್ಲು ಎಂದು ಪ್ರಧಾನಿ ಬಣ್ಣಿಸಿದರು. ಅದೇ ರೀತಿ, ‘ಮೇಡ್ ಇನ್ ಇಂಡಿಯಾ’ C-295 ಸಾರಿಗೆ ವಿಮಾನ ಮೊದಲ ಯಶಸ್ವಿ ಹಾರಾಟ ನಡೆಸಿರುವುದನ್ನು ಉಲ್ಲೇಖಿಸಿದ ಅವರು, ಇಂತಹ 40 ವಿಮಾನಗಳನ್ನು ಭಾರತದಲ್ಲಿಯೇ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಸೀಶೆಲ್ಸ್‌ಗೆ ಪ್ರಧಾನಿ ಮೋದಿ ಐತಿಹಾಸಿಕ ಭೇಟಿ; 194 ವರ್ಷದ ವಿಶ್ವದ ಅತ್ಯಂತ ಹಳೆಯ ಆಮೆ ‘ಜೊನಾಥನ್’ ಭೇಟಿಯಾಗಲಿರುವ ಪ್ರಧಾನಿ

ಮನವಿಗೆ ಸ್ಪಂದಿಸಿದ ಜನತೆಗೆ ಧನ್ಯವಾದ

ಪಶ್ಚಿಮ ಏಷ್ಯಾದಲ್ಲಿನ ಯುದ್ಧಸಮಾನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೆಲವು ದಿನಗಳ ಕಾಲ ಸಾಧ್ಯವಾದಷ್ಟು ಚಿನ್ನ ಖರೀದಿಸದಂತೆ ಮಾಡಿದ್ದ ಮನವಿಗೆ ದೇಶದ ಜನರು ಉತ್ತಮ ಸ್ಪಂದನೆ ನೀಡಿದ್ದಕ್ಕಾಗಿ ಇದೇ ವೇಳೆ ಪ್ರಧಾನಿ ಕೃತಜ್ಞತೆ ಸಲ್ಲಿಸಿದ್ದಾರೆ. ಅದೇ ರೀತಿ, ಒಂದೇ ಮಾರ್ಗದಲ್ಲಿ ಸಂಚರಿಸುವವರು ಕಾರ್‌ಪೂಲಿಂಗ್ ಮೂಲಕ ಒಂದೇ ವಾಹನದಲ್ಲಿ ಪ್ರಯಾಣಿಸುವ ಪ್ರವೃತ್ತಿಯೂ ಹೆಚ್ಚಾಗಿದೆ ಎಂದವರು ಹೇಳಿದ್ದಾರೆ.

ಮದುವೆಯಲ್ಲಿ 3,500 ಮಂದಿಗೆ ವಿಮೆಗೆ ಸಂತಸ

ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಬಹದ್ದೂರ್‌ಪುರ ಗ್ರಾಮದ ಪೇಠ್ಕರ್ ಕುಟುಂಬ ಮದುವೆ ಸಮಾರಂಭದಲ್ಲಿ ಅತಿಥಿಗಳಿಗೆ ಉಡುಗೊರೆ ನೀಡುವ ಬದಲು 3,500 ಗ್ರಾಮಸ್ಥರಿಗೆ ತಲಾ 1 ಲಕ್ಷ ರೂಪಾಯಿ ಅಪಘಾತ ವಿಮೆ ಮಾಡಿಸಿಕೊಟ್ಟಿರುವುದನ್ನು ಪ್ರಧಾನಿ ಶ್ಲಾಘಿಸಿದರು. ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಅಡಿ ವರ್ಷಕ್ಕೆ ಕೇವಲ 20 ರೂ. ಪ್ರೀಮಿಯಂ ಪಾವತಿಸಿ 2 ಲಕ್ಷದ ಅಪಘಾತ ವಿಮೆ ಪಡೆಯಬಹುದು ಎಂಬುದನ್ನೂ ಪ್ರಧಾನಿ ಜನತೆಗೆ ತಿಳಿಸಿದ್ದಾರೆ. ಹಾಗೆಯೇ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY) ಅಡಿ ವರ್ಷಕ್ಕೆ 436 ರೂ. ಪ್ರೀಮಿಯಂ ಪಾವತಿಸಿದರೆ, ಮರಣ ಹೊಂದಿದಲ್ಲಿ ಕುಟುಂಬಕ್ಕೆ 2 ಲಕ್ಷ ವಿಮಾ ಪರಿಹಾರ ದೊರೆಯುತ್ತದೆ. ಈ ಯೋಜನೆಯಡಿ ದೇಶಾದ್ಯಂತ ಸುಮಾರು 11 ಲಕ್ಷ ಕುಟುಂಬಗಳಿಗೆ 22,000 ಕೋಟಿ ನೆರವು ನೀಡಲಾಗಿದೆ ಎಂದವರು ಮಾಹಿತಿ ನೀಡಿದ್ದಾರೆ.

ನಾಗಾಲ್ಯಾಂಡ್ ಬೇಬಿ ಲೀಗ್‌ಗೆ ಪ್ರಶಂಸೆ

ನಾಗಾಲ್ಯಾಂಡ್‌ನಲ್ಲಿ 5 ರಿಂದ 12 ವರ್ಷದ ಮಕ್ಕಳಿಗಾಗಿ ನಡೆಸಲಾಗುತ್ತಿರುವ ‘ಬೇಬಿ ಲೀಗ್’ ಫುಟ್‌ಬಾಲ್ ಟೂರ್ನಿಯನ್ನು ಪ್ರಧಾನಿ ವಿಶೇಷವಾಗಿ ಪ್ರಶಂಸಿಸಿದ್ದಾರೆ.

ಜೀವಂತ ಬೇರು ಸೇತುವೆಗಳಿಗೆ ಮೆಚ್ಚುಗೆ

ಮೇಘಾಲಯದ ವಿಶ್ವಪ್ರಸಿದ್ಧ ಜೀವಂತ ಬೇರು ಸೇತುವೆಗಳು (Living Root Bridges) ಮಾನವ ಮತ್ತು ಪ್ರಕೃತಿಯ ನಡುವಿನ ಅತ್ಯುತ್ತಮ ಸಹಜ ಸಹಕಾರದ ಸಂಕೇತವಾಗಿವೆ ಎಂದು ಪ್ರಧಾನಿ ಹೇಳಿದರು. ಈ ಸೇತುವೆಗಳನ್ನು ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲು ಭಾರತ ಅರ್ಜಿ ಸಲ್ಲಿಸಿರುವುದನ್ನೂ ಅವರು ಈ ವೇಳೆ ಉಲ್ಲೇಖಿಸಿದರು.

ನೀರಿನ ಸಂರಕ್ಷಣೆಗೆ ಕರೆ

ಕಾರ್ಯಕ್ರಮದ ಕೊನೆಯಲ್ಲಿ ‘ಕ್ಯಾಚ್ ದ ರೇನ್’ ಅಭಿಯಾನವನ್ನು ಮತ್ತಷ್ಟು ಬಲಪಡಿಸುವಂತೆ ಕರೆ ನೀಡಿದ ಪ್ರಧಾನಿ, ಮಳೆನೀರಿನ ಪ್ರತಿಯೊಂದು ಹನಿಯನ್ನೂ ಸಂರಕ್ಷಿಸಬೇಕು. ನೀರಿನ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರೂ ಭಾಗಿಯಾಗಬೇಕು ಎಂದು ದೇಶದ ಜನರಿಗೆ ಮನವಿ ಮಾಡಿದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 12:59 pm, Sun, 28 June 26

Follow Us