ಸೀಶೆಲ್ಸ್‌ಗೆ ಪ್ರಧಾನಿ ಮೋದಿ ಐತಿಹಾಸಿಕ ಭೇಟಿ: 194 ವರ್ಷದ ವಿಶ್ವದ ಅತ್ಯಂತ ಹಳೆಯ ಆಮೆ ‘ಜೊನಾಥನ್’ ಭೇಟಿಯಾಗಲಿರುವ ಪ್ರಧಾನಿ
ಪ್ರಧಾನಿ ಮೋದಿ ಸೀಶೆಲ್ಸ್‌ಗೆ ಐತಿಹಾಸಿಕ ಮೂರು ದಿನಗಳ ಭೇಟಿ ನೀಡಿದ್ದು, ಭಾರತ-ಸೀಶೆಲ್ಸ್ ರಾಜತಾಂತ್ರಿಕ ಸಂಬಂಧಗಳ 50ನೇ ವಾರ್ಷಿಕೋತ್ಸವದ ಮುಖ್ಯ ಅತಿಥಿಯಾಗಿದ್ದಾರೆ. ಈ ಭೇಟಿಯಲ್ಲಿ 194 ವರ್ಷದ ವಿಶ್ವದ ಅತ್ಯಂತ ಹಳೆಯ ಆಮೆ 'ಜೊನಾಥನ್' ಅನ್ನು ಪ್ರಧಾನಿ ಮೋದಿ ಭೇಟಿಯಾಗಲಿದ್ದಾರೆ. ಕಡಲ ಭದ್ರತೆ, ನೀಲಿ ಆರ್ಥಿಕತೆ ಮತ್ತು ಹವಾಮಾನ ಬದಲಾವಣೆ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಚರ್ಚೆಗಳು ನಡೆಯಲಿವೆ.

ನವದೆಹಲಿ, ಜೂನ್ 27: ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಜೂನ್ 27 ರಿಂದ 29 ರವರೆಗೆ ಮೂರು ದಿನಗಳ ಕಾಲ ಸೀಶೆಲ್ಸ್ ದೇಶಕ್ಕೆ ಐತಿಹಾಸಿಕ ಭೇಟಿ ನೀಡಲಿದ್ದಾರೆ. ಭಾರತ ಮತ್ತು ಸೀಶೆಲ್ಸ್ ನಡುವಿನ ರಾಜತಾಂತ್ರಿಕ ಬಾಂಧವ್ಯದ 50ನೇ ವಾರ್ಷಿಕೋತ್ಸವ ಹಾಗೂ ಸೀಶೆಲ್ಸ್ ರಾಷ್ಟ್ರೀಯ ದಿನಾಚರಣೆಯ ಸುವರ್ಣ ಮಹೋತ್ಸವದ ಅಂಗವಾಗಿ ಪ್ರಧಾನಿ ಮೋದಿ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿದೆ. ಈ ಭೇಟಿಯ ಅತ್ಯಂತ ಆಸಕ್ತಿದಾಯಕ ಮತ್ತು ವಿಶಿಷ್ಟ ಆಕರ್ಷಣೆಯೆಂದರೆ, ವಿಶ್ವದ ಅತ್ಯಂತ ಹಳೆಯ ಆಮೆ ‘ಜೊನಾಥನ್’ ಅನ್ನು ಪ್ರಧಾನಿ ಭೇಟಿಯಾಗಲಿದ್ದಾರೆ.
ಗಿನ್ನೆಸ್ ದಾಖಲೆಯ ವೀರ ‘ಜೊನಾಥನ್’ ಯಾರು? ಜೊನಾಥನ್ ಜನಿಸಿದ್ದು ಸುಮಾರು 1832 ರಲ್ಲಿ. ಅಂದರೆ ಬ್ರಿಟನ್‌ನ ರಾಣಿ ವಿಕ್ಟೋರಿಯಾ ಸಿಂಹಾಸನ ಏರುವ ಮುನ್ನ, ಭಾರತದಲ್ಲಿ ಮಹಾತ್ಮ ಗಾಂಧೀಜಿ ಜನಿಸುವ ಮುನ್ನವೇ ಈ ಆಮೆ ಜನ್ಮತಾಳಿತ್ತು. ಭೂಮಿಯ ಮೇಲಿನ ಅತ್ಯಂತ ಹಳೆಯ ಜೀವಂತ ಭೂಮಂಡಲ ಪ್ರಾಣಿ ಎಂಬ ಹೆಗ್ಗಳಿಕೆಗೆ ಪಾತ್ರನಾಗಿ ಗಿನ್ನೆಸ್ ವಿಶ್ವ ದಾಖನೆ ಬರೆದಿದೆ.
ಇದು ಅಲ್ಡಾಬ್ರಾ ದೈತ್ಯ ಆಮೆ ಪ್ರಭೇದಕ್ಕೆ ಸೇರಿದ್ದು, 250 ಕಿಲೋಗ್ರಾಂಗಳಿಗಿಂತ ಹೆಚ್ಚು ತೂಕ ಹಾಗೂ ಒಂದು ಮೀಟರ್‌ಗಿಂತ ಹೆಚ್ಚು ಉದ್ದವಿದೆ. ಈ ಪ್ರಭೇದದ ಸರಾಸರಿ ಆಯಸ್ಸು 150 ವರ್ಷಗಳಾದರೆ, ಜೊನಾಥನ್ ಅದನ್ನು ಮೀರಿ 194 ವರ್ಷಗಳಿಂದ ಆರೋಗ್ಯವಾಗಿ ಬದುಕುತ್ತಿದ್ದಾನೆ.
ಮತ್ತಷ್ಟು ಓದಿ: ಸೆಶೆಲ್ಸ್ ರಾಷ್ಟ್ರೀಯ ದಿನಾಚರಣೆಗೆ ಪ್ರಧಾನಿ ಮೋದಿ ಮುಖ್ಯ ಅತಿಥಿ; ಜೂನ್ 27ರಿಂದ ದ್ವೀಪ ರಾಷ್ಟ್ರಕ್ಕೆ ಪ್ರವಾಸ
ಸೀಶೆಲ್ಸ್‌ನ ಸ್ವಾತಂತ್ರ್ಯದ 50ನೇ ವರ್ಷದ ಸಂಭ್ರಮದ ಮೆರವಣಿಗೆಯಲ್ಲಿ ಪಿಎಂ ಮೋದಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಭಾರತೀಯ ನೌಕಾಪಡೆಯ ಹಡಗುಗಳು ಮತ್ತು ರಕ್ಷಣಾ ಸಿಬ್ಬಂದಿಯ ತುಕಡಿಯೂ ಈ ಮೆರವಣಿಗೆಯಲ್ಲಿ ಭಾಗವಹಿಸುತ್ತಿದೆ. ಸೀಶೆಲ್ಸ್ ಅಧ್ಯಕ್ಷ ಡಾ. ಪ್ಯಾಟ್ರಿಕ್ ಹರ್ಮಿನಿ ಅವರೊಂದಿಗೆ ಪ್ರಧಾನಿ ಮೋದಿ ಉನ್ನತ ಮಟ್ಟದ ಮಾತುಕತೆ ನಡೆಸಲಿದ್ದಾರೆ. ಕಡಲ ಭದ್ರತೆ, ನೀಲಿ ಆರ್ಥಿಕತೆ (Blue Economy), ರಕ್ಷಣಾ ಸಹಕಾರ ಮತ್ತು ಹವಾಮಾನ ಬದಲಾವಣೆಯ ತಡೆಗೆ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆಗಳು ನಡೆಯಲಿವೆ.
ಸೀಶೆಲ್ಸ್ ರಾಷ್ಟ್ರೀಯ ಸಸ್ಯೋದ್ಯಾನಕ್ಕೆ ಭೇಟಿ ನೀಡಲಿರುವ ಪ್ರಧಾನಿ, ಅಲ್ಲಿ ಉಭಯ ದೇಶಗಳ ಪರಿಸರ ಕಾಳಜಿಯ ಸಂಕೇತವಾಗಿ ವಿಶೇಷ ಮರ ನೆಡುವ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




