ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿರಿಸಿಕೊಂಡಿದ್ದ ವ್ಯಕ್ತಿಯ ಎನ್​ಕೌಂಟರ್

ಮುಂಬೈನ ಪೊವೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿ ಇರಿಸಿಕೊಂಡ ವ್ಯಕ್ತಿ ರೋಹಿತ್ ಆರ್ಯ ಎಂಬಾತ ಪೊಲೀಸರೊಂದಿಗಿನ ಘರ್ಷಣೆಯಲ್ಲಿ ಸಾವನ್ನಪ್ಪಿದ್ದಾನೆ. ಪೊಲೀಸರು ಆತನಿಗೆ ಗುಂಡು ಹಾರಿಸಿ ಎನ್​ಕೌಂಟರ್ ಮಾಡಿದ್ದಾರೆ. ಮಾನಸಿಕ ಅಸ್ವಸ್ಥ ಎನ್ನಲಾದ ರೋಹಿತ್ ಆರ್ಯ, ವೆಬ್ ಸರಣಿಯ ಆಡಿಷನ್‌ಗಳನ್ನು ನಡೆಸುವ ನೆಪದಲ್ಲಿ 17 ಮಕ್ಕಳು, ವೃದ್ಧ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಆರ್‌ಎ ಸ್ಟುಡಿಯೋಗೆ ಕರೆಸಿ ಒತ್ತೆಯಾಳಾಗಿರಿಸಿಕೊಂಡಿದ್ದರು.

ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿರಿಸಿಕೊಂಡಿದ್ದ ವ್ಯಕ್ತಿಯ ಎನ್​ಕೌಂಟರ್
Rohit Arya

Updated on: Oct 30, 2025 | 7:25 PM

ಮುಂಬೈ, ಅಕ್ಟೋಬರ್ 30: ಮುಂಬೈನಲ್ಲಿ ಇಂದು ಸಿನಿಮೀಯ ಘಟನೆಯೊಂದು ನಡೆದಿತ್ತು. ವೆಬ್ ಸೀರೀಸ್​ಗೆ ಆಡಿಷನ್ ನಡೆಸಲಾಗುತ್ತಿದೆ ಎಂದು 17 ಮಕ್ಕಳನ್ನು ಕರೆಸಿದ್ದ ರೋಹಿತ್ ಆರ್ಯ ಎಂಬ ವ್ಯಕ್ತಿ ಮುಂಬೈನ (Mumbai) ಆರ್​ಎಸ್ ಸ್ಟುಡಿಯೋದಲ್ಲಿ ಆ ಮಕ್ಕಳು ಮತ್ತು ಇನ್ನಿಬ್ಬರನ್ನು ಒತ್ತೆಯಾಳಾಗಿರಿಸಿಕೊಂಡಿದ್ದರು. ನಂತರ ಪೊಲೀಸರಿಗೆ ವಿಡಿಯೋ ಸಂದೇಶವೊಂದನ್ನು ಕಳುಹಿಸಿದ್ದರು. ಕೊನೆಗೆ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಆ ಎಲ್ಲ ಮಕ್ಕಳನ್ನು ರಕ್ಷಿಸಿದ್ದರು. ಆದರೆ, ರೋಹಿತ್ ಆರ್ಯನ ಮೇಲೆ ಗುಂಡು ಹಾರಿಸಲಾಗಿದ್ದು, ಅವರು ಎನ್​ಕೌಂಟರ್​​ನಲ್ಲಿ ಸಾವನ್ನಪ್ಪುವ ಮೂಲಕ ಈ ಕಿಡ್ನಾಪ್ ಡ್ರಾಮಾ ಅಂತ್ಯ ಕಂಡಿದೆ.

ಮಕ್ಕಳನ್ನು ಒತ್ತೆಯಾಳಾಗಿರಿಸಿಕೊಂಡ ವಿಷಯ ತಿಳಿಯುತ್ತಿದ್ದಂತೆ ಮುಂಬೈನ ಪೊವೈ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಆರ್‌ಎ ಸ್ಟುಡಿಯೋ ಒಳಗೆ 17 ಮಕ್ಕಳು ಸೇರಿದಂತೆ ಒಟ್ಟು 19 ಜನರನ್ನು ಒತ್ತೆಯಾಳಾಗಿರಿಸಿದ್ದ ರೋಹಿತ್ ಅವರನ್ನು ಹಿಡಿಯುವ ಪ್ರಯತ್ನದಲ್ಲಿ ಪೊಲೀಸರು ಆತನ ಮೇಲೆ ಗುಂಡು ಹಾರಿಸಿ ಬಂಧಿಸಿದ್ದರು. ನಂತರ ರೋಹಿತ್​ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.


ಇದನ್ನೂ ಓದಿ: ಸಿನಿಮೀಯ ರೀತಿಯ ಘಟನೆ: ನಟನೆ ಮಾಡಲು ಬಂದಿದ್ದ 17 ಮಕ್ಕಳ ಅಪಹರಣ

ಪೊಲೀಸರು ಆ ಮಕ್ಕಳನ್ನು ಕಾಪಾಡಲು ಸ್ಟುಡಿಯೋದ ಬಾತ್​ರೂಂ ಮೂಲಕ ಆರ್‌ಎ ಸ್ಟುಡಿಯೋವನ್ನು ಪ್ರವೇಶಿಸಿದ್ದರು. ಈ ವೇಳೆ ಆರೋಪಿ ರೋಹಿತ್ ಆರ್ಯ ಏರ್ ಗನ್‌ ಹಿಡಿದು ನಿಂತಿದ್ದರು. ಅಲ್ಲದೆ, ಅವರ ಬಳಿ ಕೆಲವು ರಾಸಾಯನಿಕ ವಸ್ತುಗಳು ಕೂಡ ಇದ್ದವು. ಪೊಲೀಸ್ ಅಧಿಕಾರಿಗಳು ಪದೇ ಪದೇ ಶರಣಾಗುವಂತೆ ಆತನಿಗೆ ಸೂಚಿಸಿದ್ದರು. ಆದರೆ ಆತ ಅದಕ್ಕೆ ಒಪ್ಪಲಿಲ್ಲ. ಶೂಟ್ ಮಾಡುವುದಾಗಿಯೂ ಪೊಲೀಸರು ಹೆದರಿಸಿದ್ದರು. ಅದಕ್ಕೂ ಆತ ಬಗ್ಗಲಿಲ್ಲ.

ಬೇರೆ ದಾರಿಯಿಲ್ಲದೆ ರೋಹಿತ್ ಆರ್ಯನಿಂದ ಮಕ್ಕಳ ಜೀವಕ್ಕೆ ಅಪಾಯವಾಗಬಹುದು ಎಂದು ಪೊಲೀಸರು ಆತನ ಮೇಲೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದರು. ಅವರನ್ನು ತಕ್ಷಣ ಚಿಕಿತ್ಸೆಗಾಗಿ ಜೋಗೇಶ್ವರಿ ಟ್ರಾಮಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ಅವರು ಸಾವನ್ನಪ್ಪಿದ್ದಾರೆ. ಮಕ್ಕಳನ್ನು ರಕ್ಷಿಸಲು ಪ್ರಯತ್ನಿಸುವಾಗ ಗುಂಡು ಹಾರಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಒತ್ತೆಯಾಳುಗಳೆಲ್ಲರನ್ನೂ ಸುರಕ್ಷಿತವಾಗಿ ಕರೆತರಲಾಯಿತು. ಈ ಘರ್ಷಣೆಗೆ ಕಾರಣವಾದ ಸಂಪೂರ್ಣ ಸಂದರ್ಭಗಳನ್ನು ನಿರ್ಧರಿಸಲು ತನಿಖೆ ನಡೆಯುತ್ತಿದೆ.


ಪ್ರಾಥಮಿಕ ತನಿಖೆಗಳು ರೋಹಿತ್ ಆರ್ಯ ಮಹಾರಾಷ್ಟ್ರದ ಸರ್ಕಾರಿ ಶಾಲಾ ಯೋಜನೆಯ ಒಪ್ಪಂದದಿಂದ ಪಾವತಿಸದ ಬಾಕಿಗೆ ಸಂಬಂಧಿಸಿದಂತೆ ತೀವ್ರ ಮಾನಸಿಕ ಒತ್ತಡವನ್ನು ಎದುರಿಸುತ್ತಿದ್ದರು ಎಂದು ಸೂಚಿಸುತ್ತವೆ. ಸುಮಾರು 2 ಕೋಟಿ ರೂಪಾಯಿಗಳು ಬಾಕಿ ಉಳಿದಿವೆ ಎಂದು ಅವರು ಹೇಳಿಕೊಂಡಿದ್ದಾರೆ. ನಾನು ಭಯೋತ್ಪಾದಕನಲ್ಲ, ನನ್ನ ಬೇಡಿಕೆಗಳನ್ನು ಈಡೇರಿಸಿದರೆ ನಾನು ಮಕ್ಕಳನ್ನು ಬಿಡುತ್ತೇನೆ ಎಂದು ಅವರು ವಿಡಿಯೋ ಮಾಡಿ ಕಳುಹಿಸಿದ್ದರು. ತಮ್ಮ ಬಾಕಿ ಪಾವತಿಗೆ ಹಿಂದೆ ಪ್ರತಿಭಟನೆಗಳನ್ನು ಕೂಡ ನಡೆಸಿದ್ದರು. ರೋಹಿತ್ ಮಾನಸಿಕವಾಗಿ ಅಸ್ವಸ್ಥರಾಗಿದ್ದರು ಎನ್ನಲಾಗಿದೆ. ಅವರು ಮಾಜಿ ಶಿಕ್ಷಣ ಸಚಿವ ದೀಪಕ್ ಕೇಸರ್ಕರ್ ನಿವಾಸದ ಬಳಿ ಉಪವಾಸ ಸತ್ಯಾಗ್ರಹವನ್ನೂ ನಡೆಸಿದ್ದರು. ಕೊನೆಗೆ ತನ್ನ ಬೇಡಿಕೆ ಈಡೇರಿಸಿಕೊಳ್ಳಲು ಮಕ್ಕಳ ನಕಲಿ ಆಡಿಷನ್ ಆಯೋಜಿಸಿ ಕಿಡ್ನಾಪ್ ಡ್ರಾಮಾ ಮಾಡಿದ್ದರು. ಆದರೆ, ಪೊಲೀಸರ ಗುಂಡೇಟಿನಿಂದ ಅವರು ಸಾವನ್ನಪ್ಪಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ