ಮುಂಬೈ: 90 ಅಡಿ ಉದ್ದ, 6,000 ಕೆಜಿ ಕಬ್ಬಿಣದ ಸೇತುವೆಯನ್ನು ಕದ್ದ ನಾಲ್ವರ ಬಂಧನ

ಸ್ಥಳದಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾಗಳಿಲ್ಲದ ಕಾರಣ, ಪೊಲೀಸರು ಹತ್ತಿರದ ಪ್ರದೇಶಗಳಲ್ಲಿ ಅಳವಡಿಸಲಾಗಿರುವ ಕಣ್ಗಾವಲು ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಜೂನ್ 11 ರಂದು ಸೇತುವೆಯಿದ್ದೆಡೆ ದೊಡ್ಡ ವಾಹನವೊಂದು ಹೋಗುತ್ತಿರುವುದು ಕಂಡು ಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮುಂಬೈ: 90 ಅಡಿ ಉದ್ದ, 6,000 ಕೆಜಿ ಕಬ್ಬಿಣದ ಸೇತುವೆಯನ್ನು ಕದ್ದ ನಾಲ್ವರ ಬಂಧನ
ಪ್ರಾತಿನಿಧಿಕ ಚಿತ್ರ

Updated on: Jul 08, 2023 | 5:31 PM

ಮುಂಬೈ: ಪಶ್ಚಿಮ ಉಪನಗರದಲ್ಲಿ (western suburb) ಚರಂಡಿಯ ಮೇಲಿದ್ದ 6,000 ಕೆಜಿ ತೂಕದ ಕಬ್ಬಿಣದ ಸೇತುವೆಯನ್ನು ಕದ್ದ ಆರೋಪದ ಮೇಲೆ ಮುಂಬೈ ಪೊಲೀಸರು (Mumbai Police) ನಾಲ್ವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. ಬೃಹತ್ ವಿದ್ಯುತ್ ಕೇಬಲ್‌ಗಳನ್ನು ಕೊಂಡೊಯ್ಯುವುದಕ್ಕಾಗಿ ಮಲಾಡ್‌ನಲ್ಲಿ (ಪಶ್ಚಿಮ)ದಲ್ಲಿ 90 ಅಡಿ ಉದ್ದದ ಸೇತುವೆಯನ್ನು ನಿರ್ಮಿಸಲಾಗಿತ್ತು ಎಂದು ಬಂಗೂರ್ ನಗರ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ. ಚರಂಡಿ ಮೇಲೆ ಶಾಶ್ವತ ಸೇತುವೆ ನಿರ್ಮಿಸಿದ ಬಳಿಕ ತಾತ್ಕಾಲಿಕವಾಗಿ ನಿರ್ಮಿಸಿದ್ದ ಸೇತುವೆಯನ್ನು ಕೆಲ ತಿಂಗಳ ಹಿಂದೆ ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಆದಾಗ್ಯೂ, ಜೂನ್ 26 ರಂದು ತಾತ್ಕಾಲಿಕ ಸೇತುವೆ ಕಾಣೆಯಾಗಿದೆ ಎಂದು ಗಮನಕ್ಕೆ ಬಂದ ನಂತರ ನಿರ್ಮಾಣ ಕಂಪನಿಯು ಪೊಲೀಸ್ ದೂರು ದಾಖಲಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ತಮ್ಮ ತನಿಖೆಯ ಸಮಯದಲ್ಲಿ, ಸೇತುವೆಯು ಜೂನ್ 6 ರಂದು ಅದರ ಸ್ಥಳದಲ್ಲಿ ಕೊನೆಯದಾಗಿ ಕಂಡುಬಂದಿದೆ ಎಂದು ಪೊಲೀಸರು ಕಂಡುಕೊಂಡರು.

ಸ್ಥಳದಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾಗಳಿಲ್ಲದ ಕಾರಣ, ಪೊಲೀಸರು ಹತ್ತಿರದ ಪ್ರದೇಶಗಳಲ್ಲಿ ಅಳವಡಿಸಲಾಗಿರುವ ಕಣ್ಗಾವಲು ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಜೂನ್ 11 ರಂದು ಸೇತುವೆಯಿದ್ದೆಡೆ ದೊಡ್ಡ ವಾಹನವೊಂದು ಹೋಗುತ್ತಿರುವುದು ಕಂಡು ಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ನಾನು ದಣಿದಿಲ್ಲ, ನಿವೃತ್ತಿಯೂ ಆಗಿಲ್ಲ: ಅಜಿತ್ ಪವಾರ್ ಟೀಕೆಗೆ ಖಡಕ್ ಪ್ರತಿಕ್ರಿಯೆ ನೀಡಿದ ಶರದ್ ಪವಾರ್

ನಂತರ ಪೊಲೀಸರು ಅದರ ನೋಂದಣಿ ಸಂಖ್ಯೆಯಿಂದ ವಾಹನವನ್ನು ಪತ್ತೆಹಚ್ಚಿದರು. ಸೇತುವೆಯನ್ನು ಕೆಡವಲು ಮತ್ತು 6,000 ಕೆಜಿ ತೂಕದ ಕಬ್ಬಿಣವನ್ನು ಕದಿಯಲು ಬಳಸಲಾದ ಗ್ಯಾಸ್ ಕಟಿಂಗ್ ಯಂತ್ರಗಳನ್ನು ವಾಹನ ಹೊಂದಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.

ಹೆಚ್ಚಿನ ತನಿಖೆ ಮಾಡಿದಾಗ ಸೇತುವೆಯನ್ನು ನಿರ್ಮಿಸುವ ಗುತ್ತಿಗೆಯನ್ನು ಪಡೆದ ಸಂಸ್ಥೆಯ ಉದ್ಯೋಗಿಯೊಬ್ಬರು ಇದರಲ್ಲಿ ಭಾಗಿಯಾಗಿರುವುದು ತಿಳಿದು ಬಂತು. ಕಳೆದ ವಾರ ಪೊಲೀಸರು ಸಿಬ್ಬಂದಿ ಮತ್ತು ಆತನ ಮೂವರು ಸಹಚರರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಸ್ಥಳದಿಂದ ಕಳವು ಮಾಡಲಾದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ