ಮುರ್ಷಿದಾಬಾದ್​ನಲ್ಲಿ ಸ್ಕೂಲ್​ ವ್ಯಾನ್​ಗೆ ಪ್ಯಾಸೆಂಜರ್ ರೈಲು ಡಿಕ್ಕಿ, ಇಬ್ಬರು ವಿದ್ಯಾರ್ಥಿಗಳು ಸೇರಿ 3 ಮಂದಿ ಸಾವು, ಐವರಿಗೆ ಗಾಯ

Murshidabad Train Tragedy: ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದೆ. ತೆರೆದ ಲೆವೆಲ್ ಕ್ರಾಸಿಂಗ್‌ನಲ್ಲಿ ರೈಲು ಶಾಲಾ ವ್ಯಾನ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಐವರು ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರೈಲ್ವೆ ಸಿಬ್ಬಂದಿಯ ನಿರ್ಲಕ್ಷ್ಯದ ಬಗ್ಗೆ ತನಿಖೆ ನಡೆಯುತ್ತಿದೆ. ಈ ಘಟನೆ ಪೋಷಕರಲ್ಲಿ ಆತಂಕ ಮೂಡಿಸಿದೆ.

ಮುರ್ಷಿದಾಬಾದ್​ನಲ್ಲಿ ಸ್ಕೂಲ್​ ವ್ಯಾನ್​ಗೆ ಪ್ಯಾಸೆಂಜರ್ ರೈಲು ಡಿಕ್ಕಿ, ಇಬ್ಬರು ವಿದ್ಯಾರ್ಥಿಗಳು ಸೇರಿ 3 ಮಂದಿ ಸಾವು, ಐವರಿಗೆ ಗಾಯ
ವ್ಯಾನ್

Updated on: Jul 17, 2026 | 10:13 AM

ಮುರ್ಷಿದಾಬಾದ್, ಜುಲೈ 17: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದ ಭೀಕರ ರೈಲು ಅಪಘಾತ(Train Accident)ದಲ್ಲಿ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಕನಿಷ್ಠ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಲೆವೆಲ್ ಕ್ರಾಸಿಂಗ್‌ನಲ್ಲಿ ಚಲಿಸುತ್ತಿದ್ದ ಪ್ಯಾಸೆಂಜರ್ ರೈಲೊಂದು ಶಾಲಾ ಮಕ್ಕಳಿದ್ದ ವ್ಯಾನ್​ ಹಾಗೂ ಸೈಕ್ಲಿಸ್ಟ್‌ಗೆ ಜೋರಾಗಿ ಡಿಕ್ಕಿ ಹೊಡೆದಿದ್ದರಿಂದ ಈ ಘೋರ ದುರಂತ ಸಂಭವಿಸಿದೆ.

ಬರ್ಹಾಂಪೋರ್ ಪೊಲೀಸ್ ಠಾಣಾ ವ್ಯಾಪ್ತಿಯ ಕರ್ಣಸುಬರ್ಣ ಮತ್ತು ಗೋಬಿಂದಾಪುರ ರೈಲ್ವೆ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್‌ನಲ್ಲಿ ಶುಕ್ರವಾರ ಬೆಳಗ್ಗೆ ಈ ಅಪಘಾತ ನಡೆದಿದೆ. ನಿಮ್ಟಿತಾ-ಕಟ್ವಾ ಮಾರ್ಗದಲ್ಲಿ ಚಲಿಸುತ್ತಿದ್ದ ಪ್ಯಾಸೆಂಜರ್ ರೈಲು ಬರುತ್ತಿದ್ದಾಗ, ಕ್ರಾಸಿಂಗ್ ಗೇಟ್ ತೆರೆದೇ ಇತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗೇಟ್ ಇಲ್ಲದ ಕಾರಣ ಶಾಲಾ ವ್ಯಾನ್ ಹಾಗೂ ಸೈಕಲ್ ಸವಾರ ಹಳಿ ದಾಟಲು ಮುಂದಾದಾಗ ವೇಗವಾಗಿ ಬಂದ ರೈಲು ಭೀಕರವಾಗಿ ಡಿಕ್ಕಿ ಹೊಡೆದಿದೆ.

ವಿಡಿಯೋ

ಐವರು ವಿದ್ಯಾರ್ಥಿಗಳ ಸ್ಥಿತಿ ಗಂಭೀರ
ಅಪಘಾತದ ರಭಸಕ್ಕೆ ಶಾಲಾ ವ್ಯಾನ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಇಬ್ಬರು ವಿದ್ಯಾರ್ಥಿಗಳು ಹಾಗೂ ಮತ್ತೊಬ್ಬರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಘಟನೆಯಲ್ಲಿ ಕನಿಷ್ಠ ಐದಕ್ಕೂ ಹೆಚ್ಚು ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ.

ತುರ್ತು ಚಿಕಿತ್ಸೆ: ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಮತ್ತು ಪೊಲೀಸರು ರಕ್ಷಣಾ ಕಾರ್ಯ ನಡೆಸಿ ಗಾಯಾಳುಗಳನ್ನು ಕರ್ಣಸುಬರ್ಣ ಬ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರವಾಗಿ ಗಾಯಗೊಂಡು ಪರಿಸ್ಥಿತಿ ಗಂಭೀರವಾಗಿರುವ ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮುರ್ಷಿದಾಬಾದ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಲಾಗಿದೆ.

ರೈಲ್ವೆ ಅಧಿಕಾರಿಗಳು ಮತ್ತು ಸ್ಥಳೀಯ ಪೊಲೀಸರು ಜಂಟಿಯಾಗಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಗೇಟ್ ತೆರೆದಿರಲು ರೈಲ್ವೆ ಸಿಬ್ಬಂದಿಯ ನಿರ್ಲಕ್ಷ್ಯ ಕಾರಣವೇ ಅಥವಾ ಚಾಲಕನ ಬೇಜವಾಬ್ದಾರಿತನವೇ ಎಂಬ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಮಕ್ಕಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us