ದೆಹಲಿ ಮಾಡೆಲ್ ಮುಸ್ಕಾನ್ ಕೊಲೆಗಾರ ಇಮ್ರಾನ್ ಖಾನ್ ಕರಾಳ ಮುಖ ಬಯಲು: ಪೋಕ್ಸೋ ಕೇಸ್, ಡ್ರಗ್ಸ್ ಅಷ್ಟೇ ಅಲ್ಲ, ರೌಡಿ ಶೀಟರ್‌ ಈತ

ಪ್ರಸಿದ್ಧ ಕಂಟೆಂಟ್ ಕ್ರಿಯೇಟರ್ ಮುಸ್ಕಾನ್ ಶರ್ಮಾ ಕೊಲೆ ಪ್ರಕರಣದ ಆರೋಪಿ ಇಮ್ರಾನ್ ಖಾನ್‌ನನ್ನು ದೆಹಲಿ ಪೊಲೀಸರು ಎನ್‌ಕೌಂಟರ್ ಬಳಿಕ ಬಂಧಿಸಿದ್ದಾರೆ. ಮಾದಕ ವ್ಯಸನಿ ಹಾಗೂ ಕಿರುಕುಳ ನೀಡುತ್ತಿದ್ದ ಇಮ್ರಾನ್ ಖಾನ್, ಮುಸ್ಕಾನ್‌ನನ್ನು ಚಾಕುವಿನಿಂದ ಇರಿದು, ಕತ್ತು ಹಿಸುಕಿ ಹತ್ಯೆ ಮಾಡಿದ್ದ. ಪ್ರೇಮ ವೈಫಲ್ಯ, ಹಿಂಸೆ ಆರೋಪಿಯ ಹಿನ್ನೆಲೆಯಾಗಿತ್ತು. ಪೊಲೀಸರ ಕಾರ್ಯಾಚರಣೆಯಿಂದ ಆರೋಪಿಯ ಬಂಧನವಾಗಿದೆ.

ದೆಹಲಿ ಮಾಡೆಲ್ ಮುಸ್ಕಾನ್ ಕೊಲೆಗಾರ ಇಮ್ರಾನ್ ಖಾನ್ ಕರಾಳ ಮುಖ ಬಯಲು: ಪೋಕ್ಸೋ ಕೇಸ್, ಡ್ರಗ್ಸ್ ಅಷ್ಟೇ ಅಲ್ಲ, ರೌಡಿ ಶೀಟರ್‌ ಈತ
ಇಮ್ರಾನ್ ಖಾನ್ ಬಂಧನ

Updated on: Aug 29, 2026 | 2:09 PM

ದೆಹಲಿ, ಆ.29: 21 ವರ್ಷದ ಪ್ರಸಿದ್ಧ ಕಂಟೆಂಟ್ ಕ್ರಿಯೇಟರ್ ಹಾಗೂ ಇನ್ಫ್ಲುಯೆನ್ಸರ್ ಮುಸ್ಕಾನ್ ಶರ್ಮಾ (Muskan Sharma) ಅವರನ್ನು ಕೊಲೆ ಮಾಡಿದ್ದ ಆರೋಪಿಯನ್ನು ದೆಹಲಿ ಪೊಲೀಸರು ರಜೌರಿ ಗಾರ್ಡನ್ ಬಳಿ ನಡೆದ ಗುಂಡಿನ ಚಟುವಟಿಕೆ (ಎನ್‌ಕೌಂಟರ್) ನಂತರ ಬಂಧಿಸಿದ್ದಾರೆ. ಬಂಧಿತ 26 ವರ್ಷದ ಆರೋಪಿ ಇಮ್ರಾನ್ ಖಾನ್  ಕಾಲಿಗೆ ಮೂರು ಗುಂಡುಗಳು ತಗಲಿದ್ದು, ಆತನನ್ನು ಚಿಕಿತ್ಸೆಗಾಗಿ ಗುರು ಗೋವಿಂದ್ ಸಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಿಲಕ್ ನಗರದಲ್ಲಿರುವ ಮುಸ್ಕಾನ್ ಅವರ ಮನೆಗೆ ಬಂದ ಆರೋಪಿ ಇಮ್ರಾನ್ ಖಾನ್, ಆಕೆ ಮನೆಯಲ್ಲಿ ಒಬ್ಬಳೇ ಇದ್ದಾಗ ಜಗಳ ತೆಗೆದಿದ್ದಾನೆ. ತಾನೇ ಮನೆಯಿಂದ ತಂದಿದ್ದ ಚಾಕುವಿನಿಂದ ಮುಸ್ಕಾನ್ ಎದೆ ಹಾಗೂ ಹೊಟ್ಟೆಯ ಭಾಗಕ್ಕೆ 3 ಬಾರಿ ಇರಿದು, ಕುತ್ತಿಗೆ ಹಿಸುಕಿ ಭೀಕರವಾಗಿ ಹತ್ಯೆ ಮಾಡಿದ್ದಾನೆ.

ಕೊಲೆ ಮಾಡಿದ ನಂತರ ಮುಸ್ಕಾನ್ ಅವರ ಮೊಬೈಲ್ ಫೋನ್ ತೆಗೆದುಕೊಂಡು ಚಾಟ್‌ಗಳನ್ನು ಅಳಿಸಲು ಯತ್ನಿಸಿದ್ದಾನೆ. ಆದರೆ, ಪಾಸ್‌ವರ್ಡ್ ಲಾಕ್ ತೆರೆಯಲು ಸಾಧ್ಯವಾಗದಿದ್ದಾಗ ಮೊಬೈಲ್ ಅನ್ನು ಚರಂಡಿಗೆ ಎಸೆದು ಪರಾರಿಯಾಗಿದ್ದ. ಪೊಲೀಸರು ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಆರೋಪಿ ಸಾಯಂಕಾಲ 6 ಗಂಟೆಗೆ ಮುಸ್ಕಾನ್ ಮನೆಯಿಂದ ಹೊರಹೋಗುವ ದೃಶ್ಯಾವಳಿಗಳು ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿದ್ದವು.

ಪ್ರೇಮ ವೈಫಲ್ಯ, ಮಾದಕ ವ್ಯಸನ ಹಾಗೂ ಕಿರುಕುಳ

ಆರೋಪಿ ಇಮ್ರಾನ್ ಖಾನ್ ಮಾದಕ ವ್ಯಸನಿಯಾಗಿದ್ದು, ಮುಸ್ಕಾನ್ ವಿರುದ್ಧ ಅಕ್ರಮ ಸಂಬಂಧದ ಶಂಕೆ ವ್ಯಕ್ತಪಡಿಸಿ ನಿರಂತರವಾಗಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ. ಆತನ ಕಿರುಕುಳ ತಾಳಲಾರದೆ ಮುಸ್ಕಾನ್ ಜುಲೈ ತಿಂಗಳಿನಲ್ಲೇ ಸಂಬಂಧವನ್ನು ಕಡಿದುಕೊಳ್ಳಲು ನಿರ್ಧರಿಸಿದ್ದರು. ಈ ಸಂಬಂಧ ಕುಟುಂಬಸ್ಥರು ದೂರು ನೀಡಿದ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್‌ನನ್ನು ಈ ಹಿಂದೆ ರಿಹ್ಯಾಬಿಲಿಟೇಷನ್ (ಮಾದಕ ವ್ಯಸನ ಮುಕ್ತಿ ಕೇಂದ್ರ) ಗೆ ಕಳುಹಿಸಲಾಗಿತ್ತು.

ಕೇಂದ್ರದಿಂದ ಹೊರಬಂದಿದ್ದ ಆರೋಪಿ, ಜುಲೈ 20 ರಂದು ಹೋಟೆಲ್‌ ಒಂದರಲ್ಲಿ ಭೇಟಿಯಾದಾಗಲೂ ಮುಸ್ಕಾನ್‌ಗೆ ಬೆದರಿಕೆ ಹಾಕಿದ್ದ. ವೆಸ್ಟ್ ದೆಹಲಿ ಡಿಸಿಪಿ ಹರೇಶ್ವರ್ ವಿ. ಸ್ವಾಮಿ ನೇತೃತ್ವದಲ್ಲಿ ರಚನೆಯಾಗಿದ್ದ 15 ವಿಶೇಷ ಪೊಲೀಸ್ ತಂಡಗಳು ರಜೌರಿ ಗಾರ್ಡನ್‌ನ ನಾಲ್ ರೋಡ್ ಬಳಿ ಗುರುವಾರ ರಾತ್ರಿ 11.15 ಕ್ಕೆ ಆರೋಪಿಯನ್ನು ಸುತ್ತುವರೆದವು. ಪೋಲೀಸರಿಗೆ ಶರಣಾಗಲು ಸೂಚಿಸಿದಾಗ ಆರೋಪಿ ಇಮ್ರಾನ್ ಖಾನ್ ಪೊಲೀಸರ ಮೇಲೆಯೇ ಗುಂಡು ಹಾರಿಸಿದ್ದಾನೆ. ಪ್ರತಿಬಂಧಕವಾಗಿ ಪೊಲೀಸರು ನಡೆಸಿದ ಗುಂಡಿನ ಚಟುವಟಿಕೆಯಲ್ಲಿ ಆರೋಪಿಯ ಎರಡೂ ಕಾಲುಗಳಿಗೆ 3 ಗುಂಡುಗಳು ತಗಲಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ; ಖಾರ ತಿಂದ ಮಗು ಅಸ್ವಸ್ಥ: ಎಫ್‌ಡಿಎ ಅಧಿಕಾರಿಗೆ ಬಲವಂತವಾಗಿ ಎಕ್ಸ್‌ಪೈರಿ ಬಿಸ್ಕತ್ತು ತಿನ್ನಿಸಲು ಯತ್ನಿಸಿದ ಜನ

ಆರೋಪಿ ಇಮ್ರಾನ್ ಖಾನ್ ವಿರುದ್ಧ 2018 ರಲ್ಲೇ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ ಪೋಕ್ಸೋ (POCSO) ಕಾಯ್ದೆಯಡಿ ಕೇಸ್ ದಾಖಲಾಗಿತ್ತು. ಅಲ್ಲದೆ 2021 ರಲ್ಲಿ ಕೊಲೆ ಯತ್ನ ಪ್ರಕರಣವೂ ದಾಖಲಾಗಿತ್ತು. ದೆಹಲಿ ಯೂನಿವರ್ಸಿಟಿಯ ಓಪನ್ ಲರ್ನಿಂಗ್‌ನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಮುಸ್ಕಾನ್, ಬ್ರೈಡಲ್ ವೇರ್ ಬ್ರ್ಯಾಂಡ್‌ಗಳು ಮತ್ತು ಮೇಕಪ್ ಆರ್ಟಿಸ್ಟ್‌ಗಳಿಗೆ ಮಾಡೆಲ್ ಹಾಗೂ ಇನ್ಫ್ಲುಯೆನ್ಸರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಅಕಾಲಿಕ ಮರಣ ಕುಟುಂಬವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:27 pm, Sat, 29 August 26

Loading...
Unable to load recommendations.
Follow Us