ಬೆಂಗಳೂರು: ವಿಶ್ವದ ಏಕೈಕ ಸಂಸ್ಕೃತ ದಿನಪತ್ರಿಕೆ ‘ಸುಧರ್ಮಾ’ ಸಂಪಾದಕ ಸಂಪತ್ಕುಮಾರ್ (64) ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಸಂಸ್ಕೃತದಲ್ಲಿಯೇ ಶೋಕ ಸಂದೇಶ ಕಳಿಸಿದ್ದಾರೆ. ‘ಶ್ರೀಮತಿ ಜಯಲಕ್ಷ್ಮೀ ಮಹೋದಯೇ’ ಎಂದು ತಮ್ಮ ಪತ್ರವನ್ನು ಆರಂಭಿಸಿರುವ ಮೋದಿ, ‘ಏತಸ್ಮಿನ್ ಕಠಿನಸಮಯೇ ಮಮ ಸಂವೇದನಾಃ ಕುಟುಂಬೇನ ಸಹ ಸಂತಿ’ (ಈ ಕಠಿಣ ಸಮಯದಲ್ಲಿ ಕುಟುಂಬದ ನೋವನ್ನು ಹಂಚಿಕೊಳ್ಳುತ್ತೇನೆ) ಎಂದು ಹೇಳಿದ್ದಾರೆ.
ಸರಳ ಸ್ನೇಹಶೀಲ ವ್ಯಕ್ತಿತ್ವದ ಸಂಪತ್ಕುಮಾರ್ ಸಂಸ್ಕೃತ ಭಾಷೆಯ ಪ್ರಚಾರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಸಂಸ್ಕೃತವು ಎಲ್ಲರಿಗೂ ತಲುಪುವಂತಾಗಬೇಕೆಂಬ ಉದ್ದೇಶದಿಂದ ಅವರು ಪಟ್ಟ ಪರಿಶ್ರಮ ಎಲ್ಲರಿಗೂ ಪ್ರೇರಣಾದಾಯಿಯಾಗಬೇಕು ಎಂದು ಮೋದಿ ಹೇಳಿದ್ದಾರೆ.
ಕೆ.ವಿ.ಸಂಪತ್ಕುಮಾರ್ ಅವರ ನಿಧನದ ವಿಷಯ ತಿಳಿದು ಅತ್ಯಂತ ದುಃಖ ಅನುಭವಿಸಿದೆ. ಸರಳ, ಸ್ನೇಹಶೀಲ ವ್ಯಕ್ತಿತ್ವದ ಶ್ರೀಮಂತ ಹೃದಯ ಅವರದು. ಸಂಸ್ಕೃತ ಸುದ್ದಿಪತ್ರಿಕೆ ‘ಸುಧರ್ಮಾ’ದ ನಿಯಮಿತ ಪ್ರಕಾಶನಕ್ಕಾಗಿ ಶ್ರಮಿಸಿದರು. ಸಂಸ್ಕೃತ ಭಾಷೆಯ ಬಗ್ಗೆ ಅವರಿಗಿದ್ದ ಪ್ರೀತಿಗೂ ಇದು ಸಾಕ್ಷಿಯಾಗಿತ್ತು. ಹೊಸ ತಲೆಮಾರಿನಲ್ಲಿ ಸಂಸ್ಕೃತ ಪ್ರೀತಿ ಬೆಳೆಯಬೇಕು ಎಂದು ನಿರಂತರ ಶ್ರಮಿಸಿದರು. ಅವರ ಸಾವು ಸಂಸ್ಕೃತ ಜಗತ್ತಿಗೆ ಆದ ದೊಡ್ಡ ನಷ್ಟ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.
ಈಗ ಕೆ.ವಿ.ಸಂಪತ್ಕುಮಾರ್ ಸಶರೀರರಾಗಿ ನಮ್ಮ ಜೊತೆಗೆ ಇಲ್ಲ. ಆದರೆ ಅವರಿಂದ ನಮಗೆ ಸಿಕ್ಕ ಸಂಸ್ಕಾರ ಮತ್ತು ಜೀವನ ಮೌಲ್ಯಗಳು ಎಲ್ಲರ ಕುಟುಂಬಗಳ ಜೊತೆಗೆ ಇರುತ್ತವೆ. ದಿವಂಗತರ ಆತ್ಮಕ್ಕೆ ಸದ್ಗತಿ ದೊರೆಯಲಿ. ಸಂಪತ್ ಕುಮಾರ್ ಅವರ ಗೆಳೆಯರು, ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳಿಗೆ ಈ ದುಃಖ ಸಹಿಸುವ ಶಕ್ತಿ ಬರಲಿ ಎಂದು ಮೋದಿ ಪ್ರಾರ್ಥಿಸಿದ್ದಾರೆ.
(Narendra Modi Condolence Message to Family of Sampat Kumar Editor of Sudharma Sanskrit Paper)
ಇದನ್ನೂ ಓದಿ: ವಿಶ್ವದ ಏಕೈಕ ಸಂಸ್ಕೃತ ಪತ್ರಿಕೆ ಸುಧರ್ಮಾ ಸಂಪಾದಕ ಕೆ.ವಿ. ಸಂಪತ್ ಕುಮಾರ್ ವಿಧಿವಶ
ಇದನ್ನೂ ಓದಿ: Sudhindra Haldodderi: ಸುಪ್ರಸಿದ್ಧ ವಿಜ್ಞಾನ ಬರಹಗಾರ ಸುಧೀಂದ್ರ ಹಾಲ್ದೊಡ್ಡೇರಿ ನಿಧನ
Published On - 10:17 pm, Fri, 2 July 21