ವಿಶ್ವದ ಏಕೈಕ ಸಂಸ್ಕೃತ ಪತ್ರಿಕೆ ಸುಧರ್ಮಾ ಸಂಪಾದಕ ಕೆ.ವಿ. ಸಂಪತ್ ಕುಮಾರ್ ವಿಧಿವಶ
ಸುಧರ್ಮಾ ಪತ್ರಿಕೆ ಸಂಪಾದಕ ಕೆ.ವಿ. ಸಂಪತ್ ಕುಮಾರ್ ಅಯ್ಯಂಗಾರ್(64) ತೀವ್ರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.
ಮೈಸೂರು: ಸುಧರ್ಮಾ ಪತ್ರಿಕೆ ಸಂಪಾದಕ ಕೆ.ವಿ. ಸಂಪತ್ ಕುಮಾರ್ ಅಯ್ಯಂಗಾರ್(64) ತೀವ್ರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. 2019ರ ಪದ್ಮಶ್ರೀ ಪುರಸ್ಕೃತರಾಗಿದ್ದ ಸಂಪತ್ ಕುಮಾರ್, ಸುಧರ್ಮಾ ಎಂಬ ಪತ್ರಿಕೆ ವಿಶ್ವದ ಏಕೈಕ ಸಂಸ್ಕೃತ ದೈನಿಕವಾಗಿದ್ದು ಪತ್ರಿಕೆಯ ಸಂಪಾದಕರಾಗಿದ್ದರು.
ಸಂಪತ್ ಕುಮಾರ್ ಕಳೆದ ನಾಲ್ಕು ದಶಕಗಳಿಂದ ಸುಧರ್ಮಾವನ್ನು ಮುನ್ನಡೆಸುತ್ತ ಬಂದಿದ್ದರು. ಸಂಸ್ಕೃತ ಭಾಷೆ ಉಳಿವಿಗೆ ಶ್ರಮಿಸಿದ್ದರು. ಇವರ ಸಂಸ್ಕೃತ ಸೇವೆ ಗುರುತಿಸಿ ಕೇಂದ್ರ ಸರ್ಕಾರ ಸಂಪತ್ ಕುಮಾರ್ ಮತ್ತು ಅವರ ಪತ್ನಿ ವಿದುಶಿ ಕೆ.ಎಸ್. ಜಯಲಕ್ಷ್ಮಿ ಅವರಿಗೆ 2020 ರಲ್ಲಿ ಪದ್ಮಶ್ರೀ ನೀಡಿ ಗೌರವಿಸಿತ್ತು. ಮಧ್ಯಾಹ್ನ ಸಂಸ್ಕೃತ ಪತ್ರಿಕೆಯ ಕೆಲಸದಲ್ಲಿರುವಾಗಲೇ ಸಂಪತ್ ಕುಮಾರ್ ವಿಧಿವಶರಾಗಿದ್ದಾರೆ.
ಸಂಪತ್ ಕುಮಾರ್ ಅವರ ತಂದೆ ಪಂಡಿತ್ ಕೆ.ಎನ್. ವರದರಾಜ ಅಯ್ಯಂಗಾರ್ 1970 ರಲ್ಲಿ ಸುಧರ್ಮವನ್ನು ಪ್ರಾರಂಭಿಸಿದರು. ಇವರಿಂದ ಸಂಪತ್ ಈ ಪತ್ರಿಕೆಯನ್ನು ಮುನ್ನಡೆಸುತ್ತಾ ಬಂದರು. ಹಾಗೂ ತಮ್ಮ ಓದುಗರಿಗೆ ಸಂಸ್ಕೃತ ಪತ್ರಿಕೆ ತಲುಪುವಂತೆ ನೋಡಿಕೊಂಡರು. ಹಾಗೂ ಸಂಸ್ಕೃತ ಉಳಿವಿಗಾಗಿ ಹಗಲಿರುಳು ದುಡಿದರು. ಹಾಗೂ ಅವರು ಈ ಪತ್ರಿಕೆಗಾಗಿ ವರದಿಗಾರ, ಪ್ರೂಫ್-ರೀಡರ್, ಸಂಪಾದಕ ಮತ್ತು ಪ್ರಕಾಶಕರಾಗಿ ಕೆಲಸ ಮಾಡಿದ್ದಾರೆ.
ಪ್ರಪಂಚದಾದ್ಯಂತದ ಸಂಸ್ಕೃತ ವಿದ್ವಾಂಸರು ಮತ್ತು ಬೆಂಬಲಿಗರನ್ನು ತಲುಪುವ ಪ್ರಯತ್ನದಲ್ಲಿ, ಸಂಪತ್ ಕುಮಾರ್ ಇ-ಪೇಪರ್ ಅನ್ನು ಪ್ರಾರಂಭಿಸಿದರು, ಮತ್ತು ಪತ್ರಿಕೆಯನ್ನು ಡಿಜಿಟಲ್ ಆಗಿಸಿದ್ದಾರೆ.
ಆರೋಗ್ಯ ಸಚಿವ ಕೆ. ಸುಧಾಕರ್ ಸಂತಾಪ ಸುಧರ್ಮ ಪತ್ರಿಕೆಯ ಸಂಪಾದಕ ಕೆ.ವಿ.ಸಂಪತ್ ಕುಮಾರ್ ಅಯ್ಯಂಗಾರ್ ನಿಧನಕ್ಕೆ ಆರೋಗ್ಯ ಸಚಿವ ಕೆ ಸುಧಾಕರ್ ಟ್ವಿಟರ್ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಮೈಸೂರಿನಿಂದ ಪ್ರಕಟವಾಗುತ್ತಿದ್ದ ದೇಶದ ಏಕೈಕ ಸಂಸ್ಕೃತ ದೈನಿಕ ‘ಸುಧರ್ಮ’ ಪತ್ರಿಕೆ. ಪತ್ರಿಕೆಯ ಸಂಪಾದಕರಾದ ಪದ್ಮಶ್ರೀ ಶ್ರೀ ಕೆ.ವಿ.ಸಂಪತ್ ಕುಮಾರ್ ಅವರ ನಿಧನ ಸುದ್ದಿ ಆಘಾತ ಮೂಡಿಸಿದೆ. ನಮ್ಮ ಪ್ರಾಚೀನ ಜ್ಞಾನ ಸಂಪತ್ತಿನ ಖನಿಯಾಗಿರುವ ಸಂಸ್ಕೃತ ಭಾಷೆಯನ್ನು ಪ್ರಚಲಿತಗೊಳಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಅವರ ಸಾರ್ಥಕ ಬದುಕು ಸ್ತುತ್ಯರ್ಹ ಎಂದು ಟ್ವೀಟ್ ಮೂಲಕ ಅವರ ಸಾಧನೆಯನ್ನು ಸಚಿವ ಕೆ. ಸುಧಾಕರ್ ನೆನಪಿಸಿಕೊಂಡಿದ್ದಾರೆ.
ಮೃತರ ನಿವಾಸಕ್ಕೆ ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಭೇಟಿ ನೀಡಿದ್ದಾರೆ. ಇಂದು ಸಂಜೆ 6:30 ರ ಸುಮಾರಿಗೆ ಮೃತರ ಅಂತ್ಯಕ್ರಿಯೆ ನಡೆಸಲಾಗುವುದು. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ರುಧ್ರಭೂಮಿಯಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತದೆ ಎಂದು ಮೃತ ಸಂಪತ್ ಕುಮಾರ್ ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Surekha Death: ಕನ್ನಡ ಚಿತ್ರರಂಗದ ಹಿರಿಯ ನಟಿ ಸುರೇಖಾ ಹೃದಯಾಘಾತದಿಂದ ನಿಧನ
Published On - 3:29 pm, Wed, 30 June 21