ದಲಿತ ಸಿಎಂ ಕೂಗು ಸದ್ಯ ಅಪ್ರಸ್ತುತ; ಕಾಂಗ್ರೆಸ್‌ನಲ್ಲಿ ಒಳಜಗಳವಿಲ್ಲ: ಬಿ ಕೆ ಕೋಳಿವಾಡ
ಪರಮೇಶ್ವರ್ ಹಾಗೂ ಮುನಿಯಪ್ಪ ಹೈಕಮಾಂಡ್ ಭೇಟಿಯಾಗಿದ್ದಾರೆ. ಅವರು ಪಕ್ಷ ಸಂಘಟನೆ ಬಗ್ಗೆ ಭೇಟಿ ಮಾಡಿದ್ದಾರೆ. ಅದು ಬಿಟ್ಟು ದಲಿತ ಸಿಎಂ ವಿಚಾರವಾಗಿ ಅಲ್ಲ ಎಂದು ಕೋಳಿವಾಡ್ ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಆಗುವ ಸಾಮರ್ಥ್ಯ ಇರೋರು ಹಲವಾರು ಇದ್ದಾರೆ. ಹತ್ತಕ್ಕೂ ಹೆಚ್ಚು ಹಿರಿಯ ನಾಯಕರು ಸಮರ್ಥರು ಇದ್ದಾರೆ. ಆದರೆ, ನಿನ್ನೆ ಸಿದ್ದರಾಮಯ್ಯ ಹೇಳಿಕೆ ನನಗೆ ಬಹಳ ಸಂತೋಷ ತಂದಿದೆ. ನಮ್ಮಲ್ಲಿ ಯಾವುದೇ ಒಳ ಜಗಳವಿಲ್ಲ ಎಂದು ಹೇಳಿದ್ದಾರೆ. ನನ್ನನ್ನು ಸೇರಿದಂತೆ ರಾಜ್ಯಾದ್ಯಂತ ಇರೋ ಕಾಂಗ್ರೆಸ್ ಕಾರ್ಯಕರ್ತರಿಗೆ ಇದು ಖುಷಿ ತಂದಿದೆ. ಇಬ್ಬರು ಒಂದಾಗಿ ಕೆಲಸ ಮಾಡ್ತಾರೆ. ಇಬ್ಬರು ಒಂದಾಗಿ ಹೋದ್ರೆ ಮುಂದೆ ನಿಶ್ಚಿತವಾಗಿ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಮಾಜಿ ಸ್ಪೀಕರ್ ಹಾಗೂ ಕಾಂಗ್ರೆಸ್ ಶಿಸ್ತು ಸಮಿತಿ ಸದಸ್ಯ ಬಿ.ಕೆ. ಕೋಳಿವಾಡ ಇಂದು (ಜೂನ್ 30) ಹೇಳಿಕೆ ನೀಡಿದ್ದಾರೆ.
ದಲಿತ ಸಿಎಂ ಕೂಗು ಸದ್ಯ ಅಪ್ರಸ್ತುತ. ಮುನಿಯಪ್ಪ, ಪರಮೇಶ್ವರ್ ಪಕ್ಷದ ನಿಷ್ಠರು. ಯಾವುದೇ ಕಾರಣಕ್ಕೆ ಪಕ್ಷದ ಆದೇಶ ಅವರು ಮಿರಲ್ಲ. ಹೀಗಾಗಿ ದಲಿತ ಸಿಎಂ ಬಗ್ಗೆ ಹೈಕಮಾಂಡ್ ನಿರ್ಣಯ ತೆಗೆದುಕೊಳ್ಳುತ್ತೆ. ಪರಮೇಶ್ವರ್ ಹಾಗೂ ಮುನಿಯಪ್ಪ ಹೈಕಮಾಂಡ್ ಭೇಟಿಯಾಗಿದ್ದಾರೆ. ಅವರು ಪಕ್ಷ ಸಂಘಟನೆ ಬಗ್ಗೆ ಭೇಟಿ ಮಾಡಿದ್ದಾರೆ. ಅದು ಬಿಟ್ಟು ದಲಿತ ಸಿಎಂ ವಿಚಾರವಾಗಿ ಅಲ್ಲ ಎಂದು ಕೋಳಿವಾಡ್ ಹೇಳಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಸದನ ಅಧಿವೇಶನ ನಡೆಸದೆ ಇರುವುದಕ್ಕೆ ಕೋಳಿವಾಡ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಅಲ್ಲಿ ಅಧಿವೇಶನ ನಡೆಸಿಲ್ಲ. ಸುವರ್ಣ ಸೌಧವನ್ನು ಉತ್ತರ ಕರ್ನಾಟಕ ಭಾಗದ ಸಮಸ್ಯೆ ಚರ್ಚೆ ಮಾಡಲು ಕಟ್ಟಲಾಗಿದೆ. ಆದರೆ ಅಲ್ಲಿ ಸರ್ಕಾರ ಅಧಿವೇಶನವನ್ನು ನಡೆಸುತ್ತಿಲ್ಲ. ನಾನು ಸ್ಪೀಕರ್ ಅಗಿದ್ದಾಗ ತಪ್ಪದೆ ಅಲ್ಲಿ ಅಧಿವೇಶನ ನಡಿಸಿದ್ದೇನೆ. ಹೀಗಾಗಿ ಸರ್ಕಾರ ಕೂಡಲೆ ಬೆಳಗಾವಿಯಲ್ಲಿ ಅಧಿವೇಶನ ನಡೆಸಲಿ ಎಂದು ರಾಜ್ಯ ಸರ್ಕಾರವನ್ನು ಕೋಳಿವಾಡ್ ಒತ್ತಾಯಿಸಿದ್ದಾರೆ. ಬಿಜೆಪಿ ಸರ್ಕಾರ ಕೊರೊನಾ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂದೂ ಟೀಕಿಸಿದ್ದಾರೆ.
ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಬಹಿರಂಗ ಹೇಳಿಕೆ ನೀಡಿದವರ ವಿರುದ್ಧ ಶಿಸ್ತುಕ್ರಮ ಜರುಗಿಸುವುದಾಗಿ ನಗರದಲ್ಲಿ ಕಾಂಗ್ರೆಸ್ ಶಿಸ್ತು ಸಮಿತಿ ಸದಸ್ಯ ಕೆ.ಬಿ.ಕೋಳಿವಾಡ ಹೇಳಿದರು. ಮುಖ್ಯಮಂತ್ರಿ ಅಭ್ಯರ್ಥಿ ಕುರಿತು ಹೇಳಿಕೆ ನೀಡಿರುವ ಶಾಸಕರಿಗೆ ನೊಟೀಸ್ ಜಾರಿ ಮಾಡಲಾಗುವುದು. ಶಿಸ್ತು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲೇಬೇಕು, ಶಿಸ್ತು ಸಮಿತಿ ಬಗ್ಗೆ ಯಾರೂ ಲಘುವಾಗಿ ಪರಿಗಣಿಸಬೇಡಿ ಎಂದು ಈ ಮೊದಲು ಕೂಡ ಸಲಹೆ ಮಾಡಿದ್ದರು.
ಸಿಎಂ ಅಭ್ಯರ್ಥಿ ಬಗ್ಗೆ ಹೇಳಿದವರ ವಿರುದ್ಧ ಶಿಸ್ತುಕ್ರಮ ಜರುಗಿಸುವ ಬಗ್ಗೆ ಕೆಪಿಸಿಸಿ ಶಿಸ್ತು ಸಮಿತಿ ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ಇನ್ನೊಂದು ವಾರದಲ್ಲಿ ಮತ್ತೊಮ್ಮೆ ಸಭೆ ನಡೆಸಲು ಸಮಿತಿ ನಿರ್ಧರಿಸಿದೆ. ಶಾಸಕರಿಗೆ ನೋಟಿಸ್ ನೀಡಿ ಸಭೆಗೆ ಕರೆಸಬೇಕು. ಈಗ ಕ್ರಮಕೈಗೊಳ್ಳದಿದ್ದರೆ ಸಮಿತಿ ಬಗ್ಗೆ ಉಳಿದ ಶಾಸಕರೂ ಲಘುವಾಗಿ ಪರಿಗಣಿಸುವ ಅಪಾಯವಿದೆ ಎಂದು ಅವರು ತಿಳಿಸಿದ್ದರು.
ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೆಪಿಸಿಸಿ ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್, ಕೆಲವು ಶಾಸಕರು ನೀಡಿರುವ ಹೇಳಿಕೆಗಳ ಬಗ್ಗೆ ಚರ್ಚಿಸಿದ್ದೇವೆ. ಶಾಸಕರು ಏನು ಹೇಳಿದ್ದಾರೆಂಬ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಹೀಗಾಗಿ ಮುಂದಿನ ವಾರಕ್ಕೆ ಸಭೆಯನ್ನು ಮುಂದೂಡಿದ್ದೇವೆ. ಮುಂದಿನ ಮುಖ್ಯಮಂತ್ರಿ ಕುರಿತು ಹೀಗೆ ಬಹಿರಂಗ ಹೇಳಿಕೆಗಳನ್ನು ನೀಡುವುದು ಕಾಂಗ್ರೆಸ್ ಪಕ್ಷಕ್ಕೆ ಮಾರಕ ಎಂದು ಹೇಳಿದ್ದರು.
ಇದನ್ನೂ ಓದಿ: ಮುಂದಿನ ಸಿಎಂ ಅನ್ನೋದು ಕಾಂಗ್ರೆಸ್ ಸಂಸ್ಕೃತಿ ಅಲ್ಲ -ಜಮೀರ್, ಸೌಮ್ಯಾಗೆ ಕೋಳಿವಾಡ ಟಾಂಗ್
ಮುಂದಿನ ಮುಖ್ಯಮಂತ್ರಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದವರಿಗೆ ನೊಟೀಸ್: ಕೋಳಿವಾಡ