Covaxin Vaccine: ಕೊವ್ಯಾಕ್ಸಿನ್ ಕೊರೊನಾ ಲಸಿಕೆ ಶೇ.77.8ರಷ್ಟು ಪರಿಣಾಮಕಾರಿ; 3ನೇ ಹಂತದ ವೈದ್ಯಕೀಯ ಪರೀಕ್ಷೆಯಲ್ಲಿ ಸಾಬೀತು
ಕೊರೊನಾ ಸೋಂಕಿನ ಲಕ್ಷಣ ಹೊಂದಿದವರಲ್ಲಿ ಲಸಿಕೆಯು ಶೇ.77.8ರಷ್ಟು ಪರಿಣಾಮಕಾರಿಯಾಗಿದ್ದರೆ, ಗಂಭೀರ ಲಕ್ಷಣ ಹೊಂದಿದ ಪ್ರಕರಣಗಳಲ್ಲಿ ಶೇ.93.4ರಷ್ಟು ಪರಿಣಾಮಕಾರಿ ಎನ್ನುವುದು ಸಾಬೀತಾಗಿದೆ. ಈ ಬಗ್ಗೆ ಸ್ವತಃ ಭಾರತ್ ಬಯೋಟೆಕ್ ಸಂಸ್ಥೆ ಅಂಕಿ ಅಂಶಗಳನ್ನು ಹಂಚಿಕೊಂಡಿದ್ದು, ಕೊವ್ಯಾಕ್ಸಿನ್ ಲಸಿಕೆ ಪರಿಣಾಮಕಾರಿ ಎನ್ನುವುದರಲ್ಲಿ ಸಂದೇಹವೇ ಇಲ್ಲ ಎಂದು ಹೇಳಿಕೊಂಡಿದೆ.
ದೆಹಲಿ: ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿದ ಕೊವ್ಯಾಕ್ಸಿನ್ ಕೊರೊನಾ ಲಸಿಕೆಯ ಮೂರನೇ ಹಂತದ ವೈದ್ಯಕೀಯ ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ಈ ವರದಿಯಲ್ಲಿ ಕೊವ್ಯಾಕ್ಸಿನ್ ಲಸಿಕೆಯು ಶೇ.77.8ರಷ್ಟು ಪರಿಣಾಮಕಾರಿ ಎನ್ನುವುದನ್ನು ತಿಳಿಸಲಾಗಿದೆ. ಹೈದರಾಬಾದ್ನಲ್ಲಿರುವ ಭಾರತ್ ಬಯೋಟೆಕ್ ಸಂಸ್ಥೆ ಈ ಬಗ್ಗೆ ಮಾಹಿತಿ ನೀಡಿದ್ದು, ಕೊವ್ಯಾಕ್ಸಿನ್ ಲಸಿಕೆ ಸುರಕ್ಷಿತ ಎನ್ನುವುದು ಸಾಬೀತಾಗಿದೆ. ಭಾರತದಲ್ಲಿ ನಡೆಸಲ್ಪಟ್ಟ ಸುದೀರ್ಘ ವೈದ್ಯಕೀಯ ಪರೀಕ್ಷೆಯಲ್ಲಿ ಕೊವ್ಯಾಕ್ಸಿನ್ ಲಸಿಕೆ ಯಶಸ್ವಿಯಾಗಿದೆ ಎಂದು ಹೇಳಿಕೊಂಡಿದೆ. medRxiv ಎಂಬ ಜರ್ನಲ್ನಲ್ಲಿ ಅಧ್ಯಯನಕ್ಕೆ ಸಂಬಂಧಿಸಿದ ದತ್ತಾಂಶಗಳನ್ನು ನೀಡಲಾಗಿದೆ.
ನವೆಂಬರ್ 16, 2020ರಿಂದ ಜನವರಿ 7, 2021ರ ತನಕ ಸುಮಾರು 25,798 ಮಂದಿ ಪರೀಕ್ಷೆಗೆ ಒಳಪಟ್ಟಿದ್ದು, ಅದರಲ್ಲಿ 24,419ಜನರಿಗೆ ಎರಡೂ ಡೋಸ್ಗಳನ್ನು ನೀಡಲಾಗಿದೆ. ಇದರಲ್ಲಿ ಕೊರೊನಾ ಸೋಂಕಿನ ಲಕ್ಷಣ ಹೊಂದಿದವರಲ್ಲಿ ಲಸಿಕೆಯು ಶೇ.77.8ರಷ್ಟು ಪರಿಣಾಮಕಾರಿಯಾಗಿದ್ದರೆ, ಗಂಭೀರ ಲಕ್ಷಣ ಹೊಂದಿದ ಪ್ರಕರಣಗಳಲ್ಲಿ ಶೇ.93.4ರಷ್ಟು ಪರಿಣಾಮಕಾರಿ ಎನ್ನುವುದು ಸಾಬೀತಾಗಿದೆ. ಈ ಬಗ್ಗೆ ಸ್ವತಃ ಭಾರತ್ ಬಯೋಟೆಕ್ ಸಂಸ್ಥೆ ಅಂಕಿ ಅಂಶಗಳನ್ನು ಹಂಚಿಕೊಂಡಿದ್ದು, ಕೊವ್ಯಾಕ್ಸಿನ್ ಲಸಿಕೆ ಪರಿಣಾಮಕಾರಿ ಎನ್ನುವುದರಲ್ಲಿ ಸಂದೇಹವೇ ಇಲ್ಲ ಎಂದು ಹೇಳಿಕೊಂಡಿದೆ.
ಗಮನಾರ್ಹ ವಿಚಾರವೆಂದರೆ ಭಾರತ್ ಬಯೋಟೆಕ್ ತಿಳಿಸಿರುವಂತೆ ಕೊವ್ಯಾಕ್ಸಿನ್ ಲಸಿಕೆ ಡೆಲ್ಟಾ ತಳಿಯ ಕೊರೊನಾ ವೈರಾಣುವಿನ ಮೇಲೂ ಪರಿಣಾಮ ಬೀರುತ್ತದೆ ಎನ್ನಲಾಗಿದೆ. ಡೆಲ್ಟಾ ವೈರಸ್ ವಿರುದ್ಧ ಶೇಕಡಾ 65.2ರಷ್ಟು ಪರಿಣಾಮಕಾರಿಯಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಕೊವ್ಯಾಕ್ಸಿನ್ ಆಶಾದಾಯಕ ಲಸಿಕೆಯಾಗಿ ಕಂಡುಬಂದಿದೆ. ಅಲ್ಲದೇ, ಕೊವ್ಯಾಕ್ಸಿನ್ ಲಸಿಕೆಯು ಒಟ್ಟಾರೆಯಾಗಿ ಶೇ.77.8ರಷ್ಟು ಪರಿಣಾಮಕಾರಿ ಎಂದು ಸಾಬೀತಾಗಿರುವುದು ಕೂಡಾ ಉತ್ತಮ ಬೆಳವಣಿಗೆಯಾಗಿದೆ.
ಗರ್ಭಿಣಿಯರು ಕೊರೊನಾ ಲಸಿಕೆ ಪಡೆಯಬಹುದು: ಕೇಂದ್ರ ಆರೋಗ್ಯ ಇಲಾಖೆ ಗರ್ಭಿಣಿಯರು ಕೊರೊನಾ ಲಸಿಕೆ ಪಡೆಯಬಹುದು ಎಂದು ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಬಾಣಂತಿಯರು ಲಸಿಕೆ ಪಡೆಯಲು ಈ ಮೊದಲು ಒಪ್ಪಿಗೆ ನೀಡಲಾಗಿತ್ತು. ಇದೀಗ, ಗರ್ಭಿಣಿಯರು ಕೂಡ ಲಸಿಕೆ ಪಡೆಯಬಹುದು ಎಂದು ರಾಷ್ಟ್ರೀಯ ಲಸಿಕಾ ತಾಂತ್ರಿಕ ಸಲಹಾ ತಂಡ ಶಿಫಾರಸು ಮಾಡಿದೆ. ರಾಷ್ಟ್ರೀಯ ಲಸಿಕಾ ತಾಂತ್ರಿಕ ಸಲಹಾ ತಂಡದ ಶಿಫಾರಸಿಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.
ಕೊವಿಡ್ -19 ಲಸಿಕೆ ಗರ್ಭಿಣಿಯರಿಗೆ ಉಪಯುಕ್ತವಾದ ಕಾರಣ ಅವರಿಗೆ ನೀಡಬೇಕು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಹಾನಿರ್ದೇಶಕ ಡಾ. ಬಲರಾಮ್ ಭಾರ್ಗವ ಜೂನ್ 25ರಂದು ಹೇಳಿದ್ದರು. ಗರ್ಭಿಣಿಯರಿಗೆ ಲಸಿಕೆ ನೀಡಬಹುದು ಎಂದು ಆರೋಗ್ಯ ಸಚಿವಾಲಯ ಮಾರ್ಗಸೂಚಿಯಲ್ಲಿ ಹೇಳಿತ್ತು. ಗರ್ಭಿಣಿ ಮಹಿಳೆಯರಿಗೆ ವ್ಯಾಕ್ಸಿನೇಷನ್ ಉಪಯುಕ್ತವಾಗಿದೆ, ಅದನ್ನು ನೀಡಬೇಕು ಎಂದು ಅವರು ಹೇಳಿದ್ದರು.
ಇದನ್ನೂ ಓದಿ: Covaxin Vaccine: ಮಾಲೂರಿನಲ್ಲಿ ಕೊವ್ಯಾಕ್ಸಿನ್ ತಯಾರಿ ಆರಂಭ: ತಿಂಗಳಿಗೆ 1 ಕೋಟಿಗೂ ಹೆಚ್ಚು ಡೋಸ್ ಲಸಿಕೆ ಉತ್ಪಾದನೆಗೆ ಯೋಜನೆ
ಮಾಧ್ಯಮಗಳಲ್ಲಿ ಕೊವ್ಯಾಕ್ಸಿನ್ ಲಸಿಕೆ ಬಗ್ಗೆ ಅಪಪ್ರಚಾರ: ಸ್ಪಷ್ಟನೆ ನೀಡಿದ ಭಾರತ್ ಬಯೋಟೆಕ್
Published On - 7:45 am, Sat, 3 July 21