ನವದೆಹಲಿ, ಏಪ್ರಿಲ್ 4: ಮಥುರಾ ಕ್ಷೇತ್ರದ ಹಾಲಿ ಬಿಜೆಪಿ ಸಂಸದೆ ಹಾಗೂ ನಟಿ ಹೇಮಮಾಲಿನಿ (Hema Malini) ವಿರುದ್ಧ ಕಾಂಗ್ರೆಸ್ ಮುಖಂಡ ಹಾಗೂ ಸಂಸದ ರಣದೀಪ್ ಸಿಂಗ್ ಸುರ್ಜೆವಾಲ (Randeep Singh Surjewala) ಅವಹೇಳನಕಾರಿ ಮಾತುಗಳನ್ನಾಡಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ಸಂಬಂಧ ರಾಷ್ಟ್ರೀಯ ಮಹಿಳಾ ಆಯೋಗ ಸುಮೊಟೊ ಕೇಸ್ ದಾಖಲಿಸಿದೆ. ಇದೇ ವೇಳೆ ಇದೇ ಪ್ರಕರಣ ಸಂಬಂಧ ಹರಿಯಾಣದ ರಾಜ್ಯ ಮಹಿಳಾ ಆಯೋಗ ಕೂಡ ಸುರ್ಜೆವಾಲಗೆ ನೋಟೀಸ್ ಜಾರಿ ಮಾಡಿದೆ. ಹರ್ಯಾಣದ ಒಂದು ಕಾರ್ಯಕ್ರಮದಲ್ಲಿ ರಣದೀಪ್ ಸುರ್ಜೆವಾಲ ಅವರು ಮಾತನಾಡಿರುವ ವಿಡಿಯೋವೊಂದನ್ನು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಶೇರ್ ಮಾಡಿದ್ದರು. ಇದು ಮಹಿಳೆಯರನ್ನು ತುಚ್ಛವಾಗಿ ಕಾಣುವ ರಾಹುಲ್ ಗಾಂಧಿಯ ಕಾಂಗ್ರೆಸ್ ಎಂದು ಮಾಳವೀಯ ಕಿಡಿಕಾರಿದ್ದರು.
‘ರಣದೀಪ್ ಸುರ್ಜೆವಾಲ ಅವರಿಂದ ಬಂದ ಅವಹೇಳನಕಾರಿ ಹೇಳಿಕೆಯನ್ನು ರಾಷ್ಟ್ರೀಯ ಮಹಿಳಾ ಆಯೋಗ ಬಲವಾಗಿ ಖಂಡಿಸುತ್ತದೆ. ಮಹಿಳೆಯ ಘನತೆಗೆ ಕುಂದು ತರುವಂತಿದೆ ಈ ಹೇಳಿಕೆ. ಎನ್ಸಿಡಬ್ಲ್ಯೂ ಮುಖ್ಯಸ್ಥೆ ರೇಖಾ ಶರ್ಮಾ ಅವರು ಮುಖ್ಯ ಚುನಾವಣಾ ಆಯುಕ್ತರಿಗೆ ಅಧಿಕೃತವಾಗಿ ಪತ್ರ ಬರೆದಿದ್ದು, ಸುರ್ಜೆವಾಲ ವಿರುದ್ದ ತತ್ಕ್ಷಣವೇ ಕ್ರಮ ಜಾರಿ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಕ್ರಮ ಕೈಗೊಂಡ ವರದಿಯನ್ನು ಮೂರು ದಿನದಲ್ಲಿ ಸಲ್ಲಿಸಬೇಕೆಂದು ಮನವಿ ಮಾಡಿದ್ದಾರೆ,’ ಎಂದು ಮಹಿಳಾ ಆಯೋಗ ಗುರುವಾರ (ಏ. 4) ಹೇಳಿಕೆ ಬಿಡುಗಡೆ ಮಾಡಿದೆ.
‘ಶಾಸಕರು, ಸಂಸದರನ್ನು ಯಾಕೆ ಆರಿಸಿ ಕಳುಹಿಸಲಾಗುತ್ತದೆ? ನಮ್ಮ ಧ್ವನಿಯಾಗಲಿ, ನಮ್ಮ ವಿಚಾರ ಒಪ್ಪಿಸಲಿ ಎಂದು ಅವರನ್ನು ಆರಿಸಿ ಕಳುಹಿಸುತ್ತೇವೆ. ಹೇಮ ಮಾಲಿನಿಯಂತೆ ನೆಕ್ಕಲು ಕಳುಹಿಸಲಾಗುತ್ತದಾ?’ ಎಂದು ರಣದೀಪ್ ಸುರ್ಜೆವಾಲ ಹೇಳಿರುವ ವಿಡಿಯೋವನ್ನು ಅಮಿತ್ ಮಾಳವೀಯ ಹಂಚಿಕೊಂಡಿದ್ದರು. ಮಹಿಳೆಯರನ್ನು ಇಷ್ಟು ತುಚ್ಛವಾಗಿ ಯಾರು ಆಲೋಚಿಸುತ್ತಾರೆ. ಇದೇ ಸುರ್ಜೆವಾಲರ ಸಹೋದ್ಯೋಗಿಯು ಬಿಜೆಪಿ ನಾಯಕಿಯ ರೇಟ್ ಕೇಳುತ್ತಿದ್ದರು ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಅಮೇಥಿ ಆಯ್ತು, ವಯನಾಡ್ನಲ್ಲೂ ವಂಚಿಸ್ತಾರೆ: ರಾಹುಲ್ ಗಾಂಧಿಯನ್ನು ಕುಟುಕಿದ ಸ್ಮೃತಿ ಇರಾನಿ
ಇದೇ ವೇಳೆ, ರಣದೀಪ್ ಸಿಂಗ್ ಸುರ್ಜೆವಾಲ ಅವರು ಅಮಿತ್ ಮಾಳವೀಯ ಹಂಚಿಕೊಂಡಿರುವ ವಿಡಿಯೋವನ್ನು ತಿರುಚಲಾಗಿದೆ ಎಂದು ಹೇಳಿದ್ದಾರೆ. ತಾನು ಹೇಮಮಾಲಿನಿ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ. ತಮ್ಮ ಮಾತುಗಳನ್ನು ವಿಡಿಯೋದಲ್ಲಿ ಎಡಿಟ್ ಮಾಡಿ ತಿರುಚಲಾಗಿದೆ ಎಂದಿರುವ ಅವರು, ತಾನು ಹೇಮಮಾಲಿನಿಯನ್ನು ಗೌರವಿಸುವುದಾಗಿ ಅದೇ ಕಾರ್ಯಕ್ರಮದಲ್ಲಿ ಹೇಳಿದ್ದ ವಿಡಿಯೋ ತುಣುಕೊಂದನ್ನು ಪೋಸ್ಟ್ ಮಾಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ