ನೀಟ್ ಮರು-ಪರೀಕ್ಷೆಗೂ ಮುನ್ನವೇ ಆಘಾತ; ರಾಜಸ್ಥಾನದ ಸೀಕರ್‌ನಲ್ಲಿ ಮತ್ತೊಬ್ಬ ವಿದ್ಯಾರ್ಥಿ ಸಾವು!

ರಾಜಸ್ಥಾನದ ಸೀಕರ್‌ನಲ್ಲಿ NEET ಪರೀಕ್ಷೆಗೆ ಸಿದ್ಧವಾಗುತ್ತಿದ್ದ 22ರ ಉಮೇಶ್ ಮಾಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜೂನ್ 21ರ ನೀಟ್ ಮರುಪರೀಕ್ಷೆಯ ಒತ್ತಡ, ಜೊತೆಗೆ ಇದು ಮೂರನೇ ಪ್ರಯತ್ನವಾಗಿದ್ದರಿಂದ ಆತ ಆತಂಕಕ್ಕೊಳಗಾಗಿದ್ದ ಎನ್ನಲಾಗಿದೆ. ನೀಟ್ ಪರೀಕ್ಷೆಯ ಗೊಂದಲಗಳ ನಡುವೆ ಸೀಕರ್‌ನಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ನಡೆದ ಎರಡನೇ ವಿದ್ಯಾರ್ಥಿ ಸಾವು ಇದಾಗಿದೆ.

ನೀಟ್ ಮರು-ಪರೀಕ್ಷೆಗೂ ಮುನ್ನವೇ ಆಘಾತ; ರಾಜಸ್ಥಾನದ ಸೀಕರ್‌ನಲ್ಲಿ ಮತ್ತೊಬ್ಬ ವಿದ್ಯಾರ್ಥಿ ಸಾವು!
ನೀಟ್ ಮರು-ಪರೀಕ್ಷೆಗೂ ಮುನ್ನ ಮತ್ತೊಬ್ಬ ವಿದ್ಯಾರ್ಥಿ ಸಾವು
Image Credit source: Pinterest

Updated on: Jun 16, 2026 | 11:22 AM

ರಾಜಸ್ಥಾನದ ಪ್ರಮುಖ ಕೋಚಿಂಗ್ ಹಬ್ ಆಗಿರುವ ಸೀಕರ್ (Sikar) ಜಿಲ್ಲೆಯಲ್ಲಿ ಮಂಗಳವಾರದಂದು ದುರಂತ ಘಟನೆಯೊಂದು ಬೆಳಕಿಗೆ ಬಂದಿದೆ. ಜೂನ್ 21 ರಂದು ದೇಶಾದ್ಯಂತ ನೀಟ್ ಮರು-ಪರೀಕ್ಷೆ ನಡೆಯಲಿದ್ದು, ಅದಕ್ಕೆ ಸಜ್ಜಾಗುತ್ತಿದ್ದ 22 ವರ್ಷದ ನೀಟ್ ಅಭ್ಯರ್ಥಿ ಉಮೇಶ್ ಮಾಲಿ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಯುವಕನನ್ನು ಜುಂಜುನು ಜಿಲ್ಲೆಯ ನವಲಗಢ ಪ್ರದೇಶದ ಕಾರಿ ಗ್ರಾಮದ ನಿವಾಸಿ ಉಮೇಶ್ ಮಾಲಿ ಎಂದು ಗುರುತಿಸಲಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಪ್ರವೇಶ ಪಡೆಯುವ ಕನಸಿನಿಂದ ಅವರು ಸಿಕಾರ್‌ನ ಪಿಪ್ರಾಲಿ ರಸ್ತೆಯಲ್ಲಿರುವ ವಸತಿ ನಿಲಯದಲ್ಲಿ ವಾಸಿಸುತ್ತಿದ್ದರು. ಮೂಲಗಳ ಪ್ರಕಾರ, ಉಮೇಶ್ ಅವರಿಗೆ ಇದು ಮೂರನೇ ಪ್ರಯತ್ನವಾಗಿತ್ತು ಎನ್ನಲಾಗಿದೆ. ಘಟನಾ ಸ್ಥಳದಿಂದ ಪೊಲೀಸರು ಆತ್ಮಹತ್ಯೆ ಪತ್ರವನ್ನು (Suicide Note) ವಶಪಡಿಸಿಕೊಂಡಿದ್ದು, ಅದರಲ್ಲೇನಿದೆ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಕೊಠಡಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ:

ಪೊಲೀಸ್ ಮಾಹಿತಿಯ ಪ್ರಕಾರ, ಉಮೇಶ್ ತನ್ನ ಕೋಣೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿರುವುದನ್ನು ಕುಟುಂಬ ಸದಸ್ಯರು ಮೊದಲು ಗಮನಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಉದ್ಯೋಗ್ ನಗರ ಪೊಲೀಸ್ ಠಾಣೆಯ ಪ್ರಭಾರಿ ರಾಜೇಶ್ ಬುಡಾನಿಯಾ ಮತ್ತು ತಂಡವು ಪರಿಶೀಲನೆ ನಡೆಸಿದೆ. ನಂತರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಶ್ರೀ ಕಲ್ಯಾಣ್ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕ್ರಿಯೆ ಮುಗಿದ ನಂತರ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ದುರಂತಕ್ಕೂ ಮುನ್ನ ನಡೆದಿದ್ದೇನು?

ಕುಟುಂಬಸ್ಥರು ನೀಡಿರುವ ಮಾಹಿತಿ ಪ್ರಕಾರ, ಘಟನೆ ನಡೆದ ದಿನದ ಬೆಳಿಗ್ಗೆ ಉಮೇಶ್ ತನ್ನ ತಾಯಿಯನ್ನು ಊರಿಗೆ ಬಿಡಲು ಹೋಗಿದ್ದನು. ತಾಯಿಯನ್ನು ಬಿಟ್ಟು ವಾಪಸ್ ಸೀಕರ್‌ನ ಫ್ಲಾಟ್‌ಗೆ ಮರಳಿದ್ದನು. ಆನಂತರ ಆತನ ಅಕ್ಕ ಮತ್ತು ತಮ್ಮ ಫ್ಲಾಟ್‌ಗೆ ಬಂದಾಗ ಉಮೇಶ್ ಕೋಣೆಯೊಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ತಕ್ಷಣವೇ ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ.

ಮತ್ತಷ್ಟು ಓದಿ: ‘ಎರಡು ವರ್ಷದ ಶ್ರಮ ವ್ಯರ್ಥವಾಯಿತು’: ನೀಟ್ ಪರೀಕ್ಷೆ ರದ್ದತಿಗೆ ವಿದ್ಯಾರ್ಥಿನಿ ಬೇಸರ

ಒಂದೇ ತಿಂಗಳಲ್ಲಿ ಸೀಕರ್‌ನಲ್ಲಿ ನಡೆದ ಎರಡನೇ ದುರಂತ:

ನೀಟ್ ಪರೀಕ್ಷೆಯ ಗೊಂದಲಗಳ ನಡುವೆ ಸೀಕರ್‌ನಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ನಡೆದ ಎರಡನೇ ವಿದ್ಯಾರ್ಥಿ ಸಾವು ಇದಾಗಿದೆ. ಇದಕ್ಕೂ ಮುನ್ನ, ಮೇ 3 ರಂದು ನಡೆದಿದ್ದ ನೀಟ್-ಯುಜಿ 2026 ರ ಪರೀಕ್ಷೆಯನ್ನು ಪ್ರಶ್ನೆಪತ್ರಿಕೆ ಸೋರಿಕೆ (Paper Leak) ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ರದ್ದುಗೊಳಿಸಿತ್ತು. ಪರೀಕ್ಷೆ ರದ್ದಾದ ದಿನವೇ ಪ್ರದೀಪ್ ಮೇಘವಾಲ್ ಎಂಬ ಮತ್ತೊಬ್ಬ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದನು.

ಪರೀಕ್ಷೆಯ ಅನಿಶ್ಚಿತತೆಯೇ ಕಾರಣವೇ?

ಹಿಂದಿನ ಪ್ರಕರಣದಲ್ಲಿ ಮೃತಪಟ್ಟಿದ್ದ ಪ್ರದೀಪ್ ಮೇಘವಾಲ್ ತಂದೆ ರಾಜೇಶ್ ಕುಮಾರ್ ನೀಡಿದ ಹೇಳಿಕೆಯಂತೆ, ಪ್ರದೀಪ್ ಮೇ 3ರ ಪರೀಕ್ಷೆಯನ್ನು ತುಂಬಾ ಚೆನ್ನಾಗಿ ಬರೆದಿದ್ದನು ಮತ್ತು ಆತನಿಗೆ 720 ಕ್ಕೆ 650 ಅಂಕಗಳು ಬರುವ ನಿರೀಕ್ಷೆಯಿತ್ತು. ಆದರೆ ಪರೀಕ್ಷೆ ರದ್ದಾದ ಸುದ್ದಿ ಕೇಳಿ ಆತ ತೀವ್ರ ಬೇಸರಗೊಂಡಿದ್ದನು ಎನ್ನಲಾಗಿದೆ.

ಸದ್ಯ ಪೊಲೀಸರು ಈ ಎರಡೂ ಪ್ರಕರಣಗಳಿಗೆ ನೇರ ಸಂಬಂಧ ಕಲ್ಪಿಸದಿದ್ದರೂ, ಕೋಚಿಂಗ್ ಹಬ್ ಆಗಿರುವ ಸೀಕರ್‌ನಲ್ಲಿ ಸತತವಾಗಿ ನಡೆಯುತ್ತಿರುವ ವಿದ್ಯಾರ್ಥಿಗಳ ಸಾವು ಪರೀಕ್ಷಾರ್ಥಿಗಳ ಮೇಲಿರುವ ತೀವ್ರ ಮಾನಸಿಕ ಒತ್ತಡವನ್ನು ಎತ್ತಿ ತೋರಿಸುತ್ತಿದೆ. ಪೊಲೀಸರು ಸದ್ಯ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us