ಆಸ್ಪತ್ರೆಯಲ್ಲೇ ಸೋನಮ್ ವಾಂಗ್ಚುಕ್ ಭೇಟಿಯಾದ ಜೆಪಿ ನಡ್ಡಾ, ಜಿತೇಂದ್ರ ಸಿಂಗ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಉಪವಾಸ ನಿರತರಾಗಿರುವ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರನ್ನು ಮೆದಾಂತ ಆಸ್ಪತ್ರೆಯಲ್ಲಿ ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಭೇಟಿಯಾದರು. ದೆಹಲಿ ಹೈಕೋರ್ಟ್ ಆದೇಶದ ಮೇರೆಗೆ ವಾಂಗ್ಚುಕ್ ಸಫ್ದರ್ಜಂಗ್‌ನಿಂದ ಮೆದಾಂತಕ್ಕೆ ಸ್ಥಳಾಂತರಗೊಂಡಿದ್ದರು. ಇತ್ತ, ನೀಟ್ ಪ್ರತಿಭಟನೆ 32ನೇ ದಿನಕ್ಕೆ ತಲುಪಿದ್ದು, ಬೀದಿಯಿಂದ ಸಂಸತ್ತಿನವರೆಗೆ ವಿವಾದ ತೀವ್ರಗೊಂಡಿದೆ. ಸರ್ಕಾರ ಕಠಿಣ ಕ್ರಮದ ಭರವಸೆ ನೀಡಿದೆ.

ಆಸ್ಪತ್ರೆಯಲ್ಲೇ ಸೋನಮ್ ವಾಂಗ್ಚುಕ್ ಭೇಟಿಯಾದ ಜೆಪಿ ನಡ್ಡಾ, ಜಿತೇಂದ್ರ ಸಿಂಗ್
ಸೋನಮ್ ವಾಂಗ್ಚುಕ್

Updated on: Jul 22, 2026 | 8:07 AM

ನವದೆಹಲಿ, ಜುಲೈ 22: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ನವದೆಹಲಿಯಲ್ಲಿ ಯುವಕರು ನಡೆಸುತ್ತಿರುವ ಪ್ರತಿಭಟನೆ 32 ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ದೆಹಲಿ ಹೈಕೋರ್ಟ್ ಆದೇಶದಂತೆ ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ದಾಖಲಾಗಿರುವ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್(Sonam Wangchuk) ಅವರ ಆರೋಗ್ಯ ವಿಚಾರಿಸಲು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಮತ್ತು ಪಿಎಮ್‌ಒ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಮಂಗಳವಾರ ಮೇದಾಂತ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಸಫ್ದರ್ಜಂಗ್‌ನಿಂದ ಮೇದಾಂತ ಆಸ್ಪತ್ರೆಗೆ ವಾಂಗ್ಚುಕ್ ಸ್ಥಳಾಂತರ

ಜೂನ್ 28 ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಮ್ ವಾಂಗ್ಚುಕ್ ಅವರ ಆರೋಗ್ಯ ಸ್ಥಿತಿ ಕ್ಷೀಣಿಸಿದ ಹಿನ್ನೆಲೆಯಲ್ಲಿ, ಅವರ ಪತ್ನಿ ಗೀತಾಂಜಲಿ ಆಂಗ್ಮೋ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಸೂಚನೆಯ ಮೇರೆಗೆ ವಾಂಗ್ಚುಕ್ ಅವರನ್ನು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಿಂದ ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ತಕ್ಷಣ ಭಾರಿ ಭದ್ರತೆಯ ನಡುವೆ ರವಾನಿಸಲಾಯಿತು.

ಹಿರಿಯ ವೈದ್ಯೆ ಡಾ. ಸುಶೀಲಾ ಕಟಾರಿಯಾ ಅವರ ಮೇಲ್ವಿಚಾರಣೆಯಲ್ಲಿ ವಾಂಗ್ಚುಕ್ ಅವರಿಗೆ ಮೇದಾಂತದ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯ ಹಾಸಿಗೆಯಲ್ಲಿದ್ದರೂ ಅವರು ತಮ್ಮ ಉಪವಾಸ ಸತ್ಯಾಗ್ರಹವನ್ನು ಮುಂದುವರೆಸಿದ್ದಾರೆ.

ಇನ್ಮುಂದೆ ಸರ್ಕಾರಿ ಕಚೇರಿಗೆ ಹೋಗಿ ಮಾತುಕತೆ ನಡೆಸಲ್ಲ

ಸೋಮವಾರ ಸಂಸತ್ ಚಲೋ ವೇಳೆ ಪೋಲಿಸ್ ಲಾಠಿಚಾರ್ಜ್ ಮತ್ತು ನೂಕಾಟ ನಡೆದಿದ್ದರೂ, ಮಂಗಳವಾರ 5,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಬೆಂಬಲಿಗರು ಮತ್ತೆ ಜಂತರ್ ಮಂತರ್ ತಲುಪಿ ಪ್ರತಿಭಟನೆ ಮುಂದುವರೆಸಿದ್ದಾರೆ.

ಮತ್ತಷ್ಟು ಒದಿ: ದೆಹಲಿ ಪ್ರತಿಭಟನಾಕಾರರ ಮೇಲೆ ದೌರ್ಜನ್ಯ; ಉಪವಾಸ ಸತ್ಯಾಗ್ರಹ ಮುಂದುವರಿಸಲು ಸೋನಮ್ ವಾಂಗ್ಚುಕ್ ನಿರ್ಧಾರ

ಸಿಜೆಪಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಮಾತನಾಡಿ, ‘‘ನಾವು ಇನ್ಮುಂದೆ ಸರ್ಕಾರದ ಸಚಿವರ ನಿವಾಸಕ್ಕೆ ಹೋಗಿ ಯಾವುದೇ ಮಾತುಕತೆ ನಡೆಸುವುದಿಲ್ಲ. ಚರ್ಚೆ ನಡೆಸಲು ಇಚ್ಛಿಸುವ ಯಾರೇ ನಾಯಕರಾಗಿದ್ದರೂ, ಅವರೇ ನಮ್ಮ ಪ್ರತಿಭಟನಾ ಸ್ಥಳವಾದ ಜಂತರ್ ಮಂತರ್‌ಗೆ ಬರಬೇಕು.” ಎಂದಿದ್ದಾರ5ಎ.

ಬೀದಿಯಿಂದ ಸಂಸತ್ತಿನವರೆಗೆ, ತೀವ್ರಗೊಂಡ ನೀಟ್ ವಿವಾದ

ಒಂದೆಡೆ ಜಂತರ್ ಮಂತರ್‌ನಲ್ಲಿ ಭಾರಿ ಪ್ರತಿಭಟನೆ ನಡೆಯುತ್ತಿದ್ದರೆ, ಮತ್ತೊಂದೆಡೆ ಸಂಸತ್ತಿನಲ್ಲಿ ವಿಪಕ್ಷಗಳು ಸರ್ಕಾರದ ವಿರುದ್ಧ ಸರಣಿ ವಾಗ್ದಾಳಿ ನಡೆಸುತ್ತಿವೆ. ವಿಪಕ್ಷಗಳ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರ ರಾಜೀನಾಮೆಗೆ ಆಗ್ರಹಿಸಿ ಧರಣಿ ನಡೆಸಿದ್ದಾರೆ. ಪರೀಕ್ಷಾ ಅಕ್ರಮ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿರುವ ಕೇಂದ್ರ ಸರ್ಕಾರ, ವಿರೋಧ ಪಕ್ಷಗಳು ಈ ಸೂಕ್ಷ್ಮ ವಿಷಯವನ್ನು ರಾಜಕೀಯಗೊಳಿಸಿ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುತ್ತಿವೆ ಎಂದು ಪ್ರತ್ಯಾರೋಪ ಮಾಡಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us