ಭಾರತೀಯರಲ್ಲಿ ದೇಶಪ್ರೇಮದ ಕಿಚ್ಚು ತುಂಬಿದವರು ನೇತಾಜಿ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

| Updated By: ರಶ್ಮಿ ಕಲ್ಲಕಟ್ಟ

Updated on: Jan 24, 2022 | 1:21 PM

ಬೋಸ್ ಅವರು ಬ್ರಿಟಿಷ್ ಸೈನ್ಯದಲ್ಲಿ ಶಸ್ತ್ರಾಸ್ತ್ರಗಳನ್ನು ಬಳಸಲು ಕಲಿತರು ಮತ್ತು ಬ್ರಿಟಿಷ್ ಸೈನ್ಯದಲ್ಲಿ ಹೋರಾಡಿದ ಭಾರತೀಯ ಜನರಲ್ಲಿ ದೇಶಭಕ್ತಿಯ ಕಿಚ್ಚು ತುಂಬಿದರು ಎಂದ ಮೋಹನ್ ಭಾಗವತ್.

ಭಾರತೀಯರಲ್ಲಿ ದೇಶಪ್ರೇಮದ ಕಿಚ್ಚು ತುಂಬಿದವರು ನೇತಾಜಿ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
ಮೋಹನ್ ಭಾಗವತ್
Follow us on

ಇಂಫಾಲ್: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಅವರು ಭಾನುವಾರ ಇಂಫಾಲ್‌ನಲ್ಲಿ ಮಾಡಿದ ಭಾಷಣದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್  (Netaji Subhash Chandra Bose)ಅವರ ಜೀವನ ಮತ್ತು ಹೋರಾಟಗಳನ್ನು ಶ್ಲಾಘಿಸಿದರು. ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನಾಚರಣೆ ಸಂದರ್ಭದಲ್ಲಿ ಮಾತನಾಡಿದ ಭಾಗವತ್, ಭಾರತದ ಜನರಲ್ಲಿ ದೇಶಭಕ್ತಿಯ ಕಿಚ್ಚನ್ನು ತುಂಬಿದವರು ಬೋಸ್ ಎಂದಿದ್ದಾರೆ. ಆರ್‌ಎಸ್‌ಎಸ್ ಮುಖ್ಯಸ್ಥರು ಇಂದಿನಿಂದ ಈಶಾನ್ಯ ರಾಜ್ಯಕ್ಕೆ ನಾಲ್ಕು ದಿನಗಳ ಭೇಟಿಯನ್ನು ಪ್ರಾರಂಭಿಸಲಿದ್ದಾರೆ. ಅವರ ಪ್ರವಾಸದ ವೇಳಾಪಟ್ಟಿಯ ಎಲ್ಲಾ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲವಾದರೂ, ಅವರು ರಾಜ್ಯದ ಇತರ ಸಚಿವದಿರೊಂಗೆ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಅವರನ್ನು ಭೇಟಿಯಾಗಲಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ವರದಿ ತಿಳಿಸಿದೆ. ಅಧಿಕೃತ ಆದೇಶದಲ್ಲಿ ಝೆಡ್ ಪ್ಲಸ್ ಭದ್ರತೆ ಇರುವ ಭಾಗವತ್ ಅವರನ್ನು ಸರ್ಕಾರವು “ರಾಜ್ಯ ಅತಿಥಿ” ಎಂದು ಘೋಷಿಸಿದೆ.  “ಬೋಸ್ ಅವರು ಬ್ರಿಟಿಷ್ ಸೈನ್ಯದಲ್ಲಿ ಶಸ್ತ್ರಾಸ್ತ್ರಗಳನ್ನು ಬಳಸಲು ಕಲಿತರು ಮತ್ತು ಬ್ರಿಟಿಷ್ ಸೈನ್ಯದಲ್ಲಿ ಹೋರಾಡಿದ ಭಾರತೀಯ ಜನರಲ್ಲಿ ದೇಶಭಕ್ತಿಯ ಕಿಚ್ಚು ತುಂಬಿದರು. ಅವರು ಪ್ರಬಲ ಇಂಗ್ಲಿಷರಿಗೆ ಸವಾಲು ಹಾಕಿದರು. ಅವರು ಇಲ್ಲಿಗೆ ಬರುವ ಮೂಲಕ ಸ್ವತಂತ್ರ ಭಾರತವನ್ನು ಘೋಷಿಸಿದರು” ಎಂದು ಭಾಗವತ್ ಹೇಳಿದರು.

ತ್ರಿಪುರಾದಲ್ಲಿ ಆರ್​​ಎಸ್​​ಎಸ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವತ್ ಅವರು ಭಾನುವಾರ ನೇತಾಜಿಗೆ ಪುಷ್ಪ ನಮನ ಸಲ್ಲಿಸಿದರು.

ಆಜಾದ್ ಹಿಂದ್ ಫೌಜ್ ಸಂಸ್ಥಾಪಕ ಬೋಸ್ ಅವರು ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. “ಶತ್ರುವಿನ ಶತ್ರು ಮಿತ್ರ” ಎಂಬ ತತ್ವದ ಮೇಲೆ ಕೆಲಸ ಮಾಡಿದ ಅವರು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಜರ್ಮನಿ ಮತ್ತು ಜಪಾನ್‌ನ ಸಹಕಾರವನ್ನು ಕೋರಿದರು. ಭಾರತೀಯ ರಾಷ್ಟ್ರೀಯ ಸೇನೆಯು (ಮುಖ್ಯವಾಗಿ ಭಾರತೀಯ ಯುದ್ಧ ಕೈದಿಗಳನ್ನು ಒಳಗೊಂಡಿತ್ತು) ಬ್ರಿಟಿಷ್ ಆಳ್ವಿಕೆಯಿಂದ ಭಾರತವನ್ನು ವಿಮೋಚನೆಗೊಳಿಸಲು ಭಾರತದ ಕಡೆಗೆ ಸಾಗಿತು. ಆಜಾದ್ ಹಿಂದ್ ಫೌಜ್ ಮೊದಲ ಬಾರಿಗೆ ಮಾರ್ಚ್ 1944 ರಲ್ಲಿ ಭಾರತದ ನೆಲದಲ್ಲಿ ನಿಂತಿದ್ದರೆ, ಎರಡನೆಯ ಮಹಾಯುದ್ಧದಲ್ಲಿ ಜಪಾನ್ ಮತ್ತು ಜರ್ಮನಿಯ ಸೋಲು ಅದನ್ನು ಹಿಂದೆ ಹೋಗುವಂತೆ ಒತ್ತಾಯಿಸಿತು. ಆಗಸ್ಟ್ 18, 1945 ರಂದು ಬೋಸ್ ವಿಮಾನ ಅಪಘಾತದಲ್ಲಿ ಕೊಲ್ಲಲ್ಪಟ್ಟರು ಎಂದು ವರದಿಯಾಗಿದೆ. ಅವರ ಸಾವು ಇಂದಿಗೂ ನಿಗೂಢವಾಗಿದೆ.

ಬೋಸ್ ಅವರ 125 ನೇ ಜನ್ಮದಿನದ ಸ್ಮರಣಾರ್ಥವಾಗಿ, ರಾಷ್ಟ್ರ ರಾಜಧಾನಿಯಲ್ಲಿ ಬೋಸ್ ಅವರ ಭವ್ಯವಾದ ಪ್ರತಿಮೆಯನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನೇತಾಜಿ ಅವರ ಹೊಲೋಗ್ರಾಮ್ ಪ್ರತಿಮೆಯನ್ನು ಇಂಡಿಯಾ ಗೇಟ್‌ನಲ್ಲಿ ಭಾನುವಾರ ಅನಾವರಣಗೊಳಿಸಿದರು. ಇದು ನಿಜವಾದ ಪ್ರತಿಮೆಯ ಕೆಲಸ ಪೂರ್ಣಗೊಳ್ಳುವವರೆಗೆ ಅಲ್ಲಿರಲಿದೆ.

ಇದನ್ನೂ ಓದಿ:ಇಂಡಿಯಾ ಗೇಟ್‌ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಹೊಲೋಗ್ರಾಮ್ ಪ್ರತಿಮೆ ಅನಾವರಣಗೊಳಿಸಿದ ಮೋದಿ

Published On - 1:00 pm, Mon, 24 January 22