ಗಾಂಧಿ ಪುಣ್ಯಸ್ಮರಣೆಯಂದು ಟ್ವಿಟರ್ನಲ್ಲಿ ಟ್ರೆಂಡ್ ಆದ ನಾಥೂರಾಮ್ ಗೋಡ್ಸೆ; ದೇಶವನ್ನು ಉಳಿಸಿದ್ದಕ್ಕೆ ಧನ್ಯವಾದವೆಂದ ಟ್ವಿಟಿಗರು
ಟಾಲಿವುಡ್ ಸ್ಟಾರ್ ಸಿದ್ಧಾರ್ಥ್ ನಾಥೂರಾಮ್ ಗೋಡ್ಸೆಯನ್ನು ಹೇಡಿ ಎಂದು ಕರೆದಿದ್ದಾರೆ. ಆತನೊಬ್ಬ ಉಗ್ರ, ಕೊಲೆಗೆಡುಕ, ಆತನ ಹೆಸರು ಯಾವತ್ತಿದ್ದರೂ ಭಾರತೀಯರ ಪಾಲಿಗೆ ನಾಚಿಕೆ ತರುತ್ತದೆ. ಗಾಂಧೀಜಿ ಅಮರ್ ರಹೆ ಎಂದಿದ್ದಾರೆ.
ದೆಹಲಿ: ದೇಶ ಇಂದು ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 73ನೇ ಪುಣ್ಯಸ್ಮರಣೆ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿ ಹಲವು ಗಣ್ಯರು ಗಾಂಧೀಜಿಯವರ ಸಮಾಧಿಗೆ ಗೌರವ ಸಲ್ಲಿಸಿದ್ದಾರೆ.
ಇನ್ನೊಂದು ಕಡೆ ಟ್ವಿಟರ್ನಲ್ಲಿ ನಾಥೂರಾಮ್ ಗೋಡ್ಸೆ ಹ್ಯಾಷ್ಟ್ಯಾಗ್ ಕೂಡ ಟ್ರೆಂಡ್ ಆಗುತ್ತಿದೆ. ಮಹಾತ್ಮ ಗಾಂಧೀಜಿಯವರನ್ನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆಗೆ ಹೆಚ್ಚಿನ ಸಂಖ್ಯೆಯಲ್ಲಿ ಹಿಂಬಾಲಕರಿದ್ದು, ಗೋಡ್ಸೆ ಮಾಡಿದ್ದು ಒಳ್ಳೆಯ ಕೆಲಸ ಎಂದೇ ಅವರು ಪ್ರತಿಪಾದಿಸುತ್ತಾರೆ. ಇಂದು ಕೂಡ ಅನೇಕರು ಟ್ವಿಟರ್ನಲ್ಲಿ ಅದನ್ನೇ ಹೇಳಿದ್ದಾರೆ. #NathuramGodse ಹ್ಯಾಷ್ಟ್ಯಾಗ್ನಡಿ ನಾಥೂರಾಮ್ ಗೋಡ್ಸೆ ಅಮರ್ ರಹೆ ಎಂದವರೂ ಇದ್ದಾರೆ.
ಹೀಗೇಕೆ ಸಂಭ್ರಮಿಸಲಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ.. ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದ ಮಹಾತ್ಮ ಗಾಂಧೀಜಿ ಬದುಕಿನುದ್ದಕ್ಕೂ ಶಾಂತಿ, ಅಹಿಂಸೆಯ ಜಪ ಮಾಡಿದ್ದರು. ಆದರೆ ಭಾರತ ವಿಭಜನೆ ವಿಚಾರದಲ್ಲಿ ತೀವ್ರ ವಿರೋಧ ಹೊಂದಿದ್ದವರಲ್ಲಿ ಒಬ್ಬರಾದ ನಾಥೂರಾಮ್ ಗೋಡ್ಸೆಯ ಗುಂಡೇಟಿಗೆ 1948ರ ಜನವರಿ 30ರಂದು ಗಾಂಧೀಜಿ ಬಲಿಯಾದರು. ಇಂದು ಗಾಂಧೀಜಿಯವರ 73ನೇ ಪುಣ್ಯಸ್ಮರಣೆಯಿಂದ ಹಲವರು ಗೋಡ್ಸೆಗೆ ನಮನ ಸಲ್ಲಿಸಿದ್ದಾರೆ. ಇಡೀ ರಾಷ್ಟ್ರ ವಿನಾಶವಾಗುವುದನ್ನು ಗೋಡ್ಸೆ ತಪ್ಪಿಸಿದ. ಆತನಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು ಎಂದು ಒಬ್ಬ ಟ್ವಿಟರ್ ಬಳಕೆದಾರ ಹೇಳಿದ್ದರೆ. ಇನ್ನೊಬ್ಬರು, ಅದೆಷ್ಟೋ ಹಿಂದೂಗಳು ಜೀವ ಕಳೆದುಕೊಳ್ಳುವುದನ್ನು ತಪ್ಪಿಸಿದ ಎಂದು ಬರೆದುಕೊಂಡಿದ್ದಾರೆ. ಆದರೆ ಕೆಲವರು ಈ ಕ್ರಮವನ್ನು ಖಂಡಿಸಿದ್ದಾರೆ. ರಾಷ್ಟ್ರಪಿತ ಮೃತಪಟ್ಟ ದಿನವನ್ನು ಹೀಗೇಕೆ ಸಂಭ್ರಮಿಸಲಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದಿದ್ದಾರೆ.
ಇನ್ನು ಟಾಲಿವುಡ್ ಸ್ಟಾರ್ ಸಿದ್ಧಾರ್ಥ್ ಅವರು ನಾಥೂರಾಮ್ ಗೋಡ್ಸೆಯನ್ನು ಹೇಡಿ ಎಂದು ಕರೆದಿದ್ದಾರೆ. ಆತನೊಬ್ಬ ಉಗ್ರ, ಕೊಲೆಗಡುಕ, ಆತನ ಹೆಸರು ಯಾವತ್ತಿದ್ದರೂ ಭಾರತೀಯರ ಪಾಲಿಗೆ ನಾಚಿಕೆ ತರುತ್ತದೆ. ಗಾಂಧೀಜಿ ಅಮರ್ ರಹೆ ಎಂದಿದ್ದಾರೆ. ಒಟ್ನಲ್ಲಿ ಗಾಂಧಿ ಪುಣ್ಯಸ್ಮರಣೆ ದಿನ ನಾಥೂರಾಮ್ ಗೋಡ್ಸೆಯನ್ನೂ ಜನರು ನೆನಪಿಸಿಕೊಳ್ಳುತ್ತಿದ್ದಾರೆ!