ಕೇರಳ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಶಂಕಿತ ಮಾವೋವಾದಿ ಶಿಬಿರಗಳ ಮೇಲೆ ಎನ್ಐಎ ದಾಳಿ
NIA raids ಪ್ರಚಾರದ ಮೂಲಕ ಪಕ್ಷದ ಸಿದ್ಧಾಂತಗಳನ್ನು ಜನರಿಗೆ ಬೋಧನೆ ಮಾಡುತ್ತಿರುವುದರ ಬಗ್ಗೆ ನಿರ್ದಿಷ್ಟ ಗುಪ್ತಚರ ಮಾಹಿತಿ ಸಿಕ್ಕ ನಂತರ ಎನ್ಐಎ ದಾಳಿಗಳನ್ನು ನಡೆಸಿದೆ.
ತಿರುವನಂತಪುರಂ: ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಯ ಅಧಿಕಾರಿಗಳು ಮಂಗಳವಾರ ತಮಿಳುನಾಡು, ಕೇರಳ ಮತ್ತು ಕರ್ನಾಟಕದಲ್ಲಿ ಶಂಕಿತ ತರಬೇತಿ ಸ್ಥಳಗಳು ಮತ್ತು ಕಾನೂನುಬಾಹಿರ ಸಿಪಿಐ (ಮಾವೋವಾದಿ) ಪಕ್ಷದ ಅಡಗುತಾಣಗಳನ್ನು ಪತ್ತೆ ಮಾಡಲು ಸರಣಿ ದಾಳಿ ನಡೆಸಿದ್ದಾರೆ. ಪ್ರಚಾರದ ಮೂಲಕ ಪಕ್ಷದ ಸಿದ್ಧಾಂತಗಳನ್ನು ಜನರಿಗೆ ಬೋಧನೆ ಮಾಡುತ್ತಿರುವುದರ ಬಗ್ಗೆ ನಿರ್ದಿಷ್ಟ ಗುಪ್ತಚರ ಮಾಹಿತಿ ಸಿಕ್ಕ ನಂತರ ದಾಳಿಗಳನ್ನು ನಡೆಸಲಾಗಿದೆ ಎಂದು ದಿ ಹಿಂದೂ ವರದಿ ಮಾಡಿದೆ. ಎನ್‌ಐಎ ಅಧಿಕಾರಿಗಳ ಪ್ರಕಾರ, ಕೇಡರ್‌ಗೆ ತರಬೇತಿ ನೀಡಲು ಬಳಸಿದ ವಿಡಿಯೊಗಳು ಸಹ ಕಂಡುಬಂದಿವೆ ಎಂದು ಅದು ಹೇಳಿದೆ. ಇತರ ವರದಿಗಳ ಪ್ರಕಾರ ಕೇರಳ, ಕರ್ನಾಟಕ ತಮಿಳುನಾಡು ಮತ್ತು ಆಂಧ್ರಪ್ರದೇಶದಾದ್ಯಂತ 20 ಸ್ಥಳಗಳಲ್ಲಿ ದಾಳಿಗಳು ನಡೆಯುತ್ತಿವೆ. ಸೆಪ್ಟೆಂಬರ್ 2016 ರಲ್ಲಿ ನಿಲಂಬೂರ್ ಅರಣ್ಯ ಪ್ರದೇಶದಲ್ಲಿ ಸಿಪಿಐ (ಮಾವೋವಾದಿ) ರಚನೆಯ ದಿನದಂದು ಸಿಪಿಐ (ಮಾವೋವಾದಿ) ಸದಸ್ಯರು ತರಬೇತಿ ಶಿಬಿರಗಳು, ಶಸ್ತ್ರಾಸ್ತ್ರ ತರಬೇತಿ, ಧ್ವಜಾರೋಹಣ ಮತ್ತು ಆಚರಣೆಗಳಿಗಾಗಿ ನಡೆಸಿದ ಸಂಚಿನ ಆರೋಪದ ಮೇಲೆ ಈ ವರ್ಷದ ಆರಂಭದಲ್ಲಿ ಕೇರಳದ ಮಲಪ್ಪುರಂ ಜಿಲ್ಲೆಯ ಎಡಕ್ಕರದಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ಮಂಗಳವಾರ, ಎನ್ಐಎ ಮಾವೋವಾದಿ ಬೆಂಬಲಿಗ ಎಂದು ಹೇಳಲಾದ ಕೊಯಮತ್ತೂರಿನ ಪುಲಿಯಕುಲಂನಲ್ಲಿರುವ ದಿನೇಶ್ ಮತ್ತು ಡ್ಯಾನಿಶ್ ಎಂಬ ಇನ್ನೊಬ್ಬ ವ್ಯಕ್ತಿಯ ಮನೆಗೆ ದಾಳಿ ನಡೆಸಿದೆ ಎಂದು ವರದಿಯಾಗಿದೆ.
2017 ರಲ್ಲಿ ಎಡಕ್ಕರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ನಂತರ ಪ್ರಕರಣದ ತನಿಖೆ ನಡೆಸುತ್ತಿದ್ದ ಭಯೋತ್ಪಾದನಾ ನಿಗ್ರಹ ದಳದಿಂದ ಈ ಪ್ರಕರಣವನ್ನು ಎನ್‌ಐಎ ಇತ್ತೀಚೆಗೆ ವಹಿಸಿಕೊಂಡಿದೆ. ಎನ್ಐಎ ಈ ಪ್ರಕರಣದಲ್ಲಿ 19 ಜನರನ್ನು ಆರೋಪಿಗಳನ್ನಾಗಿ ಪಟ್ಟಿ ಮಾಡಿದೆ, ಇದರಲ್ಲಿ ಎನ್ ಕೌಂಟರ್ ನಲ್ಲಿ ಹತರಾದ ಮೂವರು ಸೇರಿದ್ದಾರೆ. ಎನ್‌ಐಎ ಸಲ್ಲಿಸಿದ ಮೊದಲ ಮಾಹಿತಿ ವರದಿ (ಎಫ್‌ಐಆರ್) ವರದಿ ಪ್ರಕಾರ ಸಿಪಿಐ (ಮಾವೋವಾದಿ) ನಿಂದ ಆರೋಪಿಗಳು ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಸೆಪ್ಟೆಂಬರ್ 2016 ಕೊನೆಯ ವಾರದಲ್ಲಿ ಪಕ್ಷದ ರಚನೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ತರಬೇತಿ ಶಿಬಿರವನ್ನು ಆಯೋಜಿಸಿದ್ದು, ಶಸ್ತ್ರಾಸ್ತ್ರ ತರಬೇತಿ, ಧ್ವಜಾರೋಹಣ ಮಾಡಲಾಗಿತ್ತು.
ಇದನ್ನೂ ಓದಿ: IT Raid: ಡಿ ಕೆ ಶಿವಕುಮಾರ್ ಸಾಮಾಜಿಕ ಜಾಲತಾಣ ನಿರ್ವಹಣಾ ಸಂಸ್ಥೆಯ ಮೇಲೆ ಐಟಿ ಅಧಿಕಾರಿಗಳ ದಾಳಿ