ಮೀಠೀ ನದಿಗೆ ಸಚಿನ್ ವಾಜೆಯನ್ನು ಕರೆದೊಯ್ದ ಎನ್​ಐಎ: ಹಾರ್ಡ್​ಡಿಸ್ಕ್, ವಾಹನದ ನಂಬರ್​ ಪ್ಲೇಟ್ ಪತ್ತೆ

ಮೀಠೀ ನದಿಯಲ್ಲಿ ಪತ್ತೆಯಾದ ಸಿಪಿಯು ಮೇಲ್ನೋಟಕ್ಕೆ ಮಹಾರಾಷ್ಟ್ರ ಸರ್ಕಾರಿ ಕಚೇರಿಗಳಲ್ಲಿರುವ ಕಂಪ್ಯೂಟರ್​ಗಳ ಸಿಪಿಯು ವಿನ್ಯಾಸವನ್ನೇ ಹೋಲುತ್ತದೆ. ಪ್ರಕರಣಕ್ಕೆ ಸಂಬಂಧಿಸಿದ ಒಟ್ಟು 11 ವಸ್ತುಗಳನ್ನು ಎನ್​ಐಎ ವಶಕ್ಕೆ ತೆಗೆದುಕೊಂಡಿದೆ.

ಮೀಠೀ ನದಿಗೆ ಸಚಿನ್ ವಾಜೆಯನ್ನು ಕರೆದೊಯ್ದ ಎನ್​ಐಎ: ಹಾರ್ಡ್​ಡಿಸ್ಕ್, ವಾಹನದ ನಂಬರ್​ ಪ್ಲೇಟ್ ಪತ್ತೆ
ಮೀಠೀ ನದಿಯಲ್ಲಿ ಪತ್ತೆಯಾದ ನಂಬರ್​ ಪ್ಲೇಟ್
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on: Mar 28, 2021 | 7:32 PM

ಮುಂಬೈ: ಬಂಧಿತ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರನ್ನು ಭಾನುವಾರ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್​ನ ಮೀಠೀ ನದಿಯ ಬಳಿಗೆ ಕರೆದೊಯ್ದು ರಾಷ್ಟ್ರೀಯ ತನಿಖಾ ದಳದ (The National Investigation Agency – NIA) ಸಿಬ್ಬಂದಿ ತನಿಖೆ ನಡೆಸಿದರು. ವಾಜೆ ಸೂಚನೆಯಂತೆ ನದಿಗೆ ಇಳಿದ ಮುಳುಗುಪಡೆ ಸಿಬ್ಬಂದಿ ಕಂಪ್ಯೂಟರ್​ ಸಿಪಿಯುಗಳು, ವಾಹನದ ನಂಬರ್​ಪ್ಲೇಟ್, ಎರಡು ಡಿವಿಆರ್ ಮತ್ತು ಒಂದು ಲ್ಯಾಪ್​ಟ್ಯಾಪ್ ಪತ್ತೆಹಚ್ಚಿ ದಡಕ್ಕೆ ತಂದರು.

ಉದ್ಯಮಿ ಮುಕೇಶ್ ಆಂಬಾನಿ ಮನೆ ಎದುರು ಸ್ಫೋಟಕ ತುಂಬಿದ್ದ ವಾಹನ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್​ಐಎ ಸಿಬ್ಬಂದಿ ಮಾರ್ಚ್ 13ರಂದು ಸಚಿನ್ ವಾಜೆ ಅವರನ್ನು ಬಂಧಿಸಿತ್ತು. ಏಪ್ರಿಲ್ 3ರವರೆಗೆ ವಾಜೆಯನ್ನು ನ್ಯಾಯಾಲಯವು ಎನ್​ಐಎ ವಶಕ್ಕೆ ಒಪ್ಪಿಸಿದೆ. ಥಾಣೆಯ ವ್ಯಾಪಾರಿ ಮನ್​ಸುಖ್ ಹಿರೇನ್ ಕೊಲೆ ಪ್ರಕರಣದಲ್ಲಿಯೂ ವಾಜೆ ಆರೋಪಿಯಾಗಿದ್ದಾರೆ. ಬಂಧನಕ್ಕೂ ಮೊದಲು ಹಿರೇನ್ ಸಾವಿನ ಪ್ರಕರಣದ ತನಿಖೆಯನ್ನು ವಾಜೆ ನಡೆಸುತ್ತಿದ್ದರು.

ಪ್ರಕರಣಗಳಿಗೆ ಸಂಬಂಧಿಸಿದ ಸಾಕ್ಷಿಗಳನ್ನು ವಾಜೆ ನದಿಗೆ ಎಸೆದು ಹಾಳು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ನದಿಯ ಬಳಿ ವಸ್ತುಗಳನ್ನು ಹುಡುಕಿ ದಡಕ್ಕೂ ತರುವುದೂ ಸೇರಿದಂತೆ ಇಡೀ ಪ್ರಕರಣದ ತನಿಖೆಯ ಪ್ರತಿ ಹಂತವನ್ನೂ ಎನ್​ಐಎ ವಿಡಿಯೊ ರೆಕಾರ್ಡ್​ ಮಾಡಿಕೊಳ್ಳುತ್ತಿದೆ. ಭಾನುವಾರ ಮಧ್ಯಾಹ್ನ 3.15ಕ್ಕೆ ನಡೆದ ಕಾರ್ಯಾಚರಣೆಯಲ್ಲಿ ಎನ್​ಐಎ ಕರೆತಂದಿದ್ದ 11 ಮುಳುಗುತಜ್ಞರು ನದಿಯ ತಳಮುಟ್ಟಿ ಸಾಕ್ಷ್ಯಗಳನ್ನು ಜಾಲಾಡಿದರು.

ಮೀಠೀ ನದಿಯಲ್ಲಿ ಪತ್ತೆಯಾದ ಸಿಪಿಯು ಮೇಲ್ನೋಟಕ್ಕೆ ಮಹಾರಾಷ್ಟ್ರ ಸರ್ಕಾರಿ ಕಚೇರಿಗಳಲ್ಲಿರುವ ಕಂಪ್ಯೂಟರ್​ಗಳ ಸಿಪಿಯು ವಿನ್ಯಾಸವನ್ನೇ ಹೋಲುತ್ತದೆ. ಪ್ರಕರಣಕ್ಕೆ ಸಂಬಂಧಿಸಿದ ಒಟ್ಟು 11 ವಸ್ತುಗಳನ್ನು ಎನ್​ಐಎ ವಶಕ್ಕೆ ತೆಗೆದುಕೊಂಡಿದೆ.

ಇದನ್ನೂ ಓದಿ: ವ್ಯಕ್ತಿ ವ್ಯಕ್ತಿತ್ವ: ಹಿಂದೂ ಮುಸ್ಲಿಂ ಸಾಮರಸ್ಯ, ಸೈಬರ್ ಕ್ರೈಂ ಪತ್ತೆಹಚ್ಚುವಲ್ಲಿ ಏಷ್ಯಾಕ್ಕೇ ಪ್ರಥಮ; ಸಚಿನ್ ವಾಜೆಯ ವೈವಿಧ್ಯಮಯ ವ್ಯಕ್ತಿತ್ವ

ಇದನ್ನೂ ಓದಿ: ‘ಸೂಪರ್ ಕಾಪ್‘ ಆಗಲು ನಾನೇ ಮುಕೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ಇಟ್ಟಿದ್ದೆ; ತಪ್ಪೊಪ್ಪಿಗೆ ಹೇಳಿಕೆ ನೀಡಿದ ಸಚಿನ್ ವಾಜೆ