ನನ್ನ ಮಗನಿಗೆ ಮೋದಿ ಸರ್ಕಾರದ ಸಂಪುಟದಲ್ಲಿ ಮಂತ್ರಿ ಸ್ಥಾನ ನೀಡದಿರುವುದು ನಿರಾಸೆ ಮೂಡಿಸಿದೆ: ನಿಶದ್ ಪಕ್ಷದ ಮುಖಂಡ ಸಂಜಯ ನಿಶದ್
ತಮ್ಮ ಅಸಮಾಧಾನ ಮತ್ತು ದೃಷ್ಟಿಕೋನವನ್ನು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ತಿಳಿಸಿರುವುದಾಗಿ ಸಂಜಯ ನಿಶದ್ ಮಾಧ್ಯಮದವರಿಗೆ ಹೇಳಿದರು.
ಗೋರಖ್ಪುರ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬುಧವಾರದಂದು ತಮ್ಮ ಸಂಪುಟ ಪುನಾರಚನೆ ಮಾಡಿದ ನಂತರ ಎನ್ಡಿಎ ಭಾಗವಾಗಿರುವ ಕೆಲ ಪಕ್ಷಗಳಿಂದ ಅಪಸ್ವರ ಕೇಳಿಬರಬಹುದೆಂಬ ನಿರೀಕ್ಷೆ ನಿಜವಾಗಿದೆ. ಎನ್ಡಿಎ ಮೈತ್ರಿಕೂಟದ ಸದಸ್ಯ ಪಕ್ಷವಾಗಿರುವ ನಿಶದ್ ಪಾರ್ಟಿಯ ಮುಖ್ಯಸ್ಥ ಸಂಜಯ ನಿಶದ್ ಅವರು ತಮ್ಮ ಮಗ ಮತ್ತು ಸಂಸದ ಪ್ರವೀಣ್ ನಿಶದ್ ಅವರಿಗೆ ಸಚಿವ ಸ್ಥಾನ ನೀಡದಿರುವ ಬಗ್ಗೆ ನಿರಾಶೆ ವ್ಯಕ್ತಪಡಿಸಿಸಿದ್ದಾರೆ. ಅಪ್ನಾ ದಳ್ (ಸೋನೆಲಾಲ್) ಪಕ್ಷದ ಸಂಸದೆ ಅನುಪ್ರಿಯಾ ಪಟೇಲ್ ಅವರಿಗೆ ಮಂತ್ರಿ ಸ್ಥಾನವನ್ನು ನೀಡುವುದಾದರೆ ತಮ್ಮ ಮಗನಿಗೆ ಯಾಕಿಲ್ಲ ಎಂದು ಅವರು ಕೇಳಿದ್ದಾರೆ.
‘ಮೋದಿ ಅವರ ಸಚಿವ ಸಂಪುಟದಲ್ಲಿ ಅಪ್ನಾ ದಳ್ (ಸೋನೆಲಾಲ್) ಪಕ್ಷದ ಸಂಸದೆ ಅನುಪ್ರಿಯಾ ಪಟೇಲ್ ಸ್ಥಾನ ಗಿಟ್ಟಿಸುವುದಾದರೆ, ಪ್ರವೀಣ್ ನಿಶದ್ಗೆ ಯಾಕೆ ನೀಡಿಲ್ಲ. ಬಿಜೆಪಿ ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳದಿದ್ದರೆ ನಿಶದ್ ಸಮುದಾಯದ ಜನರು ಅದರಿಂದ ವಿಮುಖರಾಗಲು ಆರಂಭಿಸುತ್ತಾರೆ. ಮುಂಬರಲಿರುವ ವಿಧಾನ ಸಭೆ ಚುನಾವಣೆಯಲ್ಲಿ ಅದು ತನ್ನ ತಪ್ಪಿನ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ,’ ಎಂದು ಸಂಜಯ ನಿಶದ್ ಗುರುವಾರದಂದು ಗೋರಖ್ಪುರ್ನಲ್ಲಿ ಹೇಳಿದರು.
‘ಪ್ರವೀಣ್ 160ಕ್ಕಿಂತ ಹೆಚ್ಚಿನ ವಿಧಾನ ಸಭೆ ಕ್ಷೇತ್ರಗಳಲ್ಲಿ ಜನಪ್ರಿಯರಾಗಿದ್ದಾರೆ, ಅದರೆ ಅನುಪ್ರಿಯಾ ಅವರು ಕೆಲವೇ ಕ್ಷೇತ್ರಗಳಲ್ಲಿ ಜನಾನುರಾಗ ಗಳಿಸಿದ್ದಾರೆ,’ ಎಂದು ಅವರು ಹೇಳಿದ್ದಾರೆ.
ತಮ್ಮ ಅಸಮಾಧಾನ ಮತ್ತು ದೃಷ್ಟಿಕೋನವನ್ನು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ತಿಳಿಸಿರುವುದಾಗಿ ಅವರು ಮಾಧ್ಯಮದವರಿಗೆ ಹೇಳಿದರು.
‘ನಿರ್ಧಾರವನ್ನು ಅವರಿಗೆ ಬಿಟ್ಟಿದ್ದೇನೆ, ಆದರೆ ಪ್ರವೀಣ್ ನಿಶದ್ ಬಗ್ಗೆ ಅವರು ಕಾಳಜಿ ತೆಗೆದುಕೊಳ್ಳಲಿದ್ದಾರೆ ಎಂಬ ಭರವಸೆ ನನಗಿದೆ,’ ಎಂದು ಸಂಜಯ ಹೇಳಿದರು. ನಿಶದ್ ( NISHAD-ನಿರ್ಬಲ್ ಇಂಡಿಯನ್ ಶೋಶಿತ್ ಹಮಾರಾ ಆಮ್ ದಲ್) ಉತ್ತರ ಪ್ರದೇಶದ ವಿಧಾನ ಸಭೆಯಲ್ಲಿ ಕೇವಲ ಒಬ್ಬ ಶಾಸಕನನ್ನು ಮಾತ್ರ ಹೊಂದಿದೆ.
ಸಂಜಯ ನಿಶದ್ ಅವರ ಮಗ ಪ್ರವೀಣ್ ನಿಶದ್ ಗೊರಖ್ಪುರ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಇಲ್ಲಿ ನೆನಪಿಸಿಕೊಳ್ಳಬುಹುದಾದ ಸಂಗತಿಯೆಂದರೆ ಬಿಜೆಪಿ ಅಭ್ಯರ್ಥಿಯಾಗಿ ಈ ಕ್ಷೇತ್ರದಿಂದ ಲೊಕಸಭೆಗೆ ಆಯ್ಕೆಯಾಗಿದ್ದ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ನಂತರ ಆ ಸ್ಥಾನ ಖಾಲಿಯಾಗಿತ್ತು. ನಂತರ ನಡೆದ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಎಸ್ಪಿಯ ಬೆಂಬಲದೊಂದಿಗೆ ಪ್ರವೀಣ್ ಅವರು ಆಯ್ಕೆಯಾಗಿದ್ದರು. ಎಸ್ಪಿ ಮತ್ತು ಬಿಎಸ್ಪಿ ಆಗ ಜೊತೆಗೂಡಿ ಮೈತ್ರಿಕೂಟ ರಚಿಸಿದ್ದವು.
ಕೆಲ ದಿನನಗಳ ಹಿಂದೆ, ಬಲಿಯಾದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ್ದ ಸಂಜಯ ನಿಶದ್ ಅವರು,‘ ಬಿಜೆಪಿಯೊಂದಿಗೆ ನಮ್ಮ ಮೈತ್ರಿ ಮುಂದುವರಿಯಲಿದೆ. ನಾವು ಹಿಂದೆ ಬಿಜೆಪಿಯೊಂದಿಗೆ ಇದ್ದೆವು ಮತ್ತು ಮುಂದೆಯೂ ಇರುತ್ತೇವೆ. ಆದರೆ ನಮ್ಮ ಸಮುದಾಯ ಬಿಜೆಪಿಯಿಂದ ವಿಮುಖವಾಗುತ್ತಿದೆ. ಎಸ್ಪಿ ಮತ್ತು ಬಿಎಸ್ಪಿ ನಮ್ಮ ಸಮುದಾಯಕ್ಕೆ ದ್ರೋಹ ಬಗೆದಿದ್ದು ಎಲ್ಲರಿಗೂ ಗೊತ್ತಿದೆ ಮತ್ತು ಈಗ ಬಿಜೆಪಿಯೂ ಅದನ್ನೇ ಮಾಡುತ್ತಿದೆ ಎಂಬ ಭಾವನೆ ಸಮುದಾಯದಲ್ಲಿ ಮೂಡುತ್ತಿದೆ,’ ಎಂದು ಹೇಳಿದ್ದರು.
ಕೇವಲ ಒಬ್ಬ ಸಂಸದನನ್ನು ಇಟ್ಟಕೊಂಡು ಸಂಜಯ ನಿಶದ್ ಕೇಂದ್ರ ಸರ್ಕಾರಕ್ಕೆ ಯಾವ ಸಂದೇಶ ನಿಡಲು ಬಯಸುತ್ತಿದ್ದಾರೆ ಅನ್ನೋದು ಅವರಿಗಷ್ಟೇ ಗೊತ್ತಾಗಬೇಕು.
ಇದನ್ನೂ ಓದಿ: Modi Cabinet Reshuffle: ನೂತನ ಸಚಿವರಿಗೆ ಇಂದೇ ಖಾತೆ ಹಂಚಿಕೆ; ಯಾರಿಗೆ ಯಾವ ಖಾತೆ? ಇಲ್ಲಿದೆ ವಿವರ