CM ಪಟ್ಟ ಏರುವುದಕ್ಕಿಂತ ಹೆಚ್ಚಾಗಿ.. ನಿತೀಶ್ ಈ ಗುರುತರ ಜವಾಬ್ದಾರಿ ನಿಭಾಯಿಸಬೇಕಿದೆ!
ಬಿಹಾರದಲ್ಲಿ ಎನ್ಡಿಎ ಗೆಲುವನ್ನೇನೊ ಸಾಧಿಸಿತು. ಆದರೆ ಪ್ರಮುಖ ಪ್ರಾದೇಶಿಕ ಪಕ್ಷ ಜೆಡಿಯುವಿಗಿಂತ ಮೈತ್ರಿಕೂಟದ ಬಿಜೆಪಿಯೇ ತನ್ನ ಪ್ರಭಾವ ವಿಸ್ತರಿಸಿದೆ. ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಈ ಚುನಾವಣೆ ಜೆಡಿಯುವಿನ ಶಕ್ತಿ ಕುಸಿದಿರುವುದನ್ನು ಸ್ಪಷ್ಟವಾಗಿ ತೋರಿಸಿದೆ. ಹಾಗಾದರೆ ನಿತೀಶರ ಜೆಡಿಯು ಭವಿಷ್ಯವೇನು? ಎಂಬ ಪ್ರಶ್ನೆಯ ಜೊತೆಜೊತೆಗೆ ಎದುರಾಳಿ ಯುವನಾಯಕ ತೇಜಸ್ವಿ ಯಾದವ್ ಸಹ ತನ್ನ ಇರುವನ್ನು ರುಜುವಾತುಪಡಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೆರಳು ಸೋಕಿಸಿಕೊಳ್ಳದೆ ತಮ್ಮದೇ ಪಕ್ಷವನ್ನು ಸದೃಢವಾಗಿ ಕಟ್ಟಲು ಸನ್ನದ್ಧರಾಗಿದ್ದಾರೆ. ಸೋ, ಬಿಜೆಪಿ ಮತ್ತು ತೇಜಸ್ವಿ ಯಾದವ್ […]
ಬಿಹಾರದಲ್ಲಿ ಎನ್ಡಿಎ ಗೆಲುವನ್ನೇನೊ ಸಾಧಿಸಿತು. ಆದರೆ ಪ್ರಮುಖ ಪ್ರಾದೇಶಿಕ ಪಕ್ಷ ಜೆಡಿಯುವಿಗಿಂತ ಮೈತ್ರಿಕೂಟದ ಬಿಜೆಪಿಯೇ ತನ್ನ ಪ್ರಭಾವ ವಿಸ್ತರಿಸಿದೆ. ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಈ ಚುನಾವಣೆ ಜೆಡಿಯುವಿನ ಶಕ್ತಿ ಕುಸಿದಿರುವುದನ್ನು ಸ್ಪಷ್ಟವಾಗಿ ತೋರಿಸಿದೆ. ಹಾಗಾದರೆ ನಿತೀಶರ ಜೆಡಿಯು ಭವಿಷ್ಯವೇನು? ಎಂಬ ಪ್ರಶ್ನೆಯ ಜೊತೆಜೊತೆಗೆ ಎದುರಾಳಿ ಯುವನಾಯಕ ತೇಜಸ್ವಿ ಯಾದವ್ ಸಹ ತನ್ನ ಇರುವನ್ನು ರುಜುವಾತುಪಡಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೆರಳು ಸೋಕಿಸಿಕೊಳ್ಳದೆ ತಮ್ಮದೇ ಪಕ್ಷವನ್ನು ಸದೃಢವಾಗಿ ಕಟ್ಟಲು ಸನ್ನದ್ಧರಾಗಿದ್ದಾರೆ. ಸೋ, ಬಿಜೆಪಿ ಮತ್ತು ತೇಜಸ್ವಿ ಯಾದವ್ ಎದುರು ನಿತೀಶ್ ಸಹ ಯುವಜನತೆಗೆ ಮನ್ನಣೆ ಕೊಟ್ಟು ಜೆಡಿಯು ಪಕ್ಷವನ್ನು ಕಟ್ಟಬೇಕಿದೆ.
ಜೆಡಿಯುವಿನಲ್ಲಿ ನಿತೀಶ್ ಕುಮಾರ್ ಅವರನ್ನು ಬಿಟ್ಟರೆ ಇತರ ನಾಯಕರ ಹೆಸರು ಮುನ್ನೆಲೆಯಲ್ಲಿ ಕೇಳುತ್ತಿಲ್ಲ. ನಿತೀಶ್ ಗೆ ಈಗ 69ನೇ ವಯಸ್ಸು. ಜೆಡಿಯು ಭವಿಷ್ಯದಲ್ಲಿ ರಾಜಕೀಯವಾಗಿ ಸ್ಥಿರತೆ ಕಾಣಲು ಪಕ್ಷದ ಇತರ ರಾಜಕೀಯ ನಾಯಕರು ಬೆಳೆಯುವುದು ಅನಿವಾರ್ಯ. ಯಾವುದೇ ರಾಜಕೀಯ ಪಕ್ಷದಲ್ಲಿ ಪ್ರಭಾವಿ ನಾಯಕರ ಸಂಖ್ಯೆ ಇದ್ದಷ್ಟೂ ಪಕ್ಷದ ಬಲ ಹೆಚ್ಚುತ್ತದೆ. ಆದರೆ ನಿತೀಶ್ ಅವರನ್ನು ಬಿಟ್ಟು ಮಿಕ್ಕ ಯಾರ ಹೆಸರೂ ಜೆಡಿಯು ಪಡಸಾಲೆಯಲ್ಲಿ ಸುದ್ದಿ ಮಾಡುತ್ತಿಲ್ಲ.
ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಆರ್ಜೆಡಿ ಹಿಂದಿನ ಕೈಗಳು ತೇಜಸ್ವಿ ಯಾದವ್ ಅವರದು. ತಮ್ಮ ಪಕ್ಷದ ಹಿಂದಿನ ತಪ್ಪುಗಳನ್ನು ಮುಕ್ತವಾಗಿ ಒಪ್ಪಿಕೊಂಡು ಮತ್ತೊಮ್ಮೆ ಅವಕಾಶಕ್ಕಾಗಿ ಮತ ಯಾಚಿಸಿದ್ದರು ತೇಜಸ್ವಿ. ಆ ಲೆಕ್ಕಕ್ಕೆ ಆರ್ಜೆಡಿಗಿಂತ ಜೆಡಿಯುಗೆ ಉತ್ತಮ ಹಿನ್ನೆಲೆಯಿತ್ತು.
ತೇಜಸ್ವಿ ಯಾದವ್ ಅವರಿಗೆ ಸರಿಸಮನಾಗಿ ನಿಲ್ಲುವ ಯುವ ನಾಯಕರೊಬ್ಬರನ್ನು ಪಕ್ಷದ ಚುಕ್ಕಾಣಿ ಹಿಡಿಯಲು ಪಳಗಿಸದಿದ್ದರೆ ಸಂಯುಕ್ತ ಜನತಾದಳ ಇನ್ನಷ್ಟು ಕುಸಿಯುವುದು ಖಂಡಿತ. ಪ್ರಸ್ತುತ ನಿತೀಶ್ ಕುಮಾರ್ ಅವರ ಪಾಲಿಗೆ ಮುಖ್ಯಮಂತ್ರಿ ಪಟ್ಟಕ್ಕಿಂತ ಪಕ್ಷದ ನೆಲೆ ಗಟ್ಟಿಗೊಳಿಸುವುದು ದೊಡ್ಡದು. ಪಕ್ಷದ ಯುವ ನಾಯಕರನ್ನು ರಾಜಕೀಯದಾಟದಲ್ಲಿ ಪಳಗಿಸದಿದ್ದರೆ ಭವಿಷ್ಯದಲ್ಲಿ ಜೆಡಿಯು ಹೇಳಹೆಸರಿಲ್ಲದಂತಾಗುವುದು ನಿಶ್ಚಿತ ಎನ್ನುತ್ತಿದ್ದಾರೆ ಬಿಹಾರದ ರಾಜಕೀಯ ಪಂಡಿತರು.
ರಾಜಕೀಯ ಅಂದ್ರೆ ನಿತೀಶ್ ಮಗನಿಗೆ ವರ್ಜ್ಯ! ನಿತೀಶ್ ಅವರ ಪುತ್ರ ನಿಶಾಂತ್ 2017ರಲ್ಲೇ ರಾಜಕೀಯದಿಂದ ದೂರವಿರುವುದಾಗಿ ತಿಳಿಸಿದ್ದಾರೆ. ಬಿಐಟಿ ಮಸ್ರಾದಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿರುವ ಅವರು ಆಧ್ಯಾತ್ಮಿಕ ಜೀವನ ನಡೆಸುವುದಾಗಿ ಹೇಳಿಕೊಂಡಿದ್ದಾರೆ. ಹೀಗಾಗಿ ನಿತೀಶ್ ಮನೆಯಿಂದ ಹೊಸ ನಾಯಕನ ಉಗಮವಾಗುವುದಿಲ್ಲ ಎಂಬುದು ಈಗಾಗಲೇ ಖಾತ್ರಿಯಾಗಿದೆ.
ಜೆಡಿಯುವಿನ ರಾಷ್ಟ್ರೀಯ ಕಾರ್ಯದರ್ಶಿ ರಾಮಚಂದ್ರ ಪ್ರಸಾದ್ ಸಿಂಗ್, ಮಾಜಿ ರಾಜ್ಯಾಧ್ಯಕ್ಷ ವಿಜಯ್ ಕುಮಾರ್ ಚೌಧರಿ, ಯುವ ಘಟಕದ ಅಧ್ಯಕ್ಷ ಅಭಯ್ ಖುಷ್ವಾಹಾ ಮುಂತಾದ ಹೆಸರು ಕೇಳಿಬಂದರೂ ರಾಜಕೀಯ ಪಗಡೆ ಉರುಳಿಸುವ ಚಾಕಚಕ್ಯತೆಯಲ್ಲಿ ಇನ್ನೂ ನಿಪುಣರಾಗಿಲ್ಲ. ಒಂದುವೇಳೆ ವಯೋಸಹಜವಾಗಿ ನಿತೀಶ್ ಕುಮಾರ್ ಸಕ್ರಿಯ ರಾಜಕೀಯದಿಂದ ದೂರವಾಗುವ ಪ್ರಸಂಗ ಎದುರಾದರೆ ಜೆಡಿಯು ಕಗ್ಗತ್ತಲ ದಾರಿಯಲ್ಲಿ ನಡೆಯಬೇಕಾಗುತ್ತದೆ. ರಾಜಕೀಯವಾಗಿ ಬೆಳೆಯಲು ಯಾವಾಗ, ಯಾವ ದಾರಿ ಹಿಡಿಯಬೇಕು ಎಂದು ಸೂಕ್ಷ್ಮವಾಗಿ ಅರಿತಿರುವ ನಿತೀಶ್ ಜೆಡಿಯುವಿನ ಭವಿಷ್ಯ ಬೆಳಗಿಸುವರೇ ಎಂಬುದನ್ನು ಕಾದುನೋಡಬೇಕಿದೆ.
Published On - 4:33 pm, Wed, 11 November 20