ಶೌಚ ಗುಂಡಿಗಳನ್ನು ಸ್ವಚ್ಛಗೊಳಿಸುವಾಗ ಯಾವುದೇ ಸಾವು ಸಂಭವಿಸಿಲ್ಲ: ಕೇಂದ್ರ ಸರ್ಕಾರ
Manual Scavenging: ಶೌಚಗುಂಡಿ ಸ್ವಚ್ಛಗೊಳಿಸುವಾಗ ಸಾವನ್ನಪ್ಪಿರುವ ಯಾವುದೇ ಪ್ರಕರಣಗಳು ಸರ್ಕಾರದ ಗಮನಕ್ಕೆ ಬಂದಿಲ್ಲ. ಆದರೆ, ಸೆಪ್ಟಿಕ್ ಟ್ಯಾಂಕ್ ಮತ್ತು ಚರಂಡಿಗಳನ್ನು ಸ್ವಚ್ಛಗೊಳಿಸುವಂಥ ಅಪಾಯಕಾರಿ ಕೆಲಸಗಳನ್ನು ಮಾಡುವಾಗ ಸಾವುಗಳು ಸಂಭವಿಸಿರುವುದು ವರದಿಯಾಗಿದೆ ಎಂದು ಹೇಳಿದ್ದರು.

ದೆಹಲಿ: ಶೌಚ ಗುಂಡಿಗಳನ್ನು ಸ್ವಚ್ಛಗೊಳಿಸುವಾಗ (manual scavenging) ಯಾವುದೇ ಸಾವು ಸಂಭವಿಸಿಲ್ಲ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ರಾಮದಾಸ್ ಅಠಾವಳೆ ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುವ ವೇಳೆ ಅಠಾವಳೆ ಅವರು, ‘ದೇಶದಲ್ಲಿ 69,692 ಮಂದಿ ಶೌಚ ಗುಂಡಿ ಸ್ವಚ್ಚಗೊಳಿಸುವವರು ಇದ್ದಾರೆ. ಮಲ ಹೊರುವುದು ಮತ್ತು ಕೈಯಿಂದ ಮಲದ ಗುಂಡಿಗಳನ್ನು ಸ್ವಚ್ಛಗೊಳಿಸುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದರು. ಉದ್ಯೋಗ ನಿಷೇಧ ಮತ್ತು ಅವರ ಪುನರ್ವಸತಿ ಕಾಯ್ದೆ, 2013 ರ ಅಡಿಯಲ್ಲಿ ಶೌಚ ಗುಂಡಿಗಳನ್ನು ಸ್ವಚ್ಛಗೊಳಿಸುವುದನ್ನು ನಿಷೇಧಿಸಲಾಗಿದೆ.
ಶೌಚಗುಂಡಿ ಸ್ವಚ್ಛಗೊಳಿಸುವಾಗ ಸಾವನ್ನಪ್ಪಿರುವ ಯಾವುದೇ ಪ್ರಕರಣಗಳು ಸರ್ಕಾರದ ಗಮನಕ್ಕೆ ಬಂದಿಲ್ಲ. ಆದರೆ, ಸೆಪ್ಟಿಕ್ ಟ್ಯಾಂಕ್ ಮತ್ತು ಚರಂಡಿಗಳನ್ನು ಸ್ವಚ್ಛಗೊಳಿಸುವಂಥ ಅಪಾಯಕಾರಿ ಕೆಲಸಗಳನ್ನು ಮಾಡುವಾಗ ಸಾವುಗಳು ಸಂಭವಿಸಿರುವುದು ವರದಿಯಾಗಿದೆ ಎಂದು ಹೇಳಿದ್ದರು.
ಅಠಾವಳೆ ಅವರ ಉತ್ತರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಾಮಾಜಿಕ ಕಾರ್ಯಕರ್ತರು ಸರ್ಕಾರದ ಪ್ರತಿಕ್ರಿಯೆಯನ್ನು ನಿರಾಸಕ್ತಿಯ ಕೊರತೆ ಎಂದು ಬಣ್ಣಿಸಿದ್ದಾರೆ.
ಶೌಚಗುಂಡಿ ಸ್ವಚ್ಛ ಮಾಡುವ ಪದ್ಧತಿ ನಿರ್ಮೂಲನೆಗಾಗಿ ಕಾರ್ಯವೆಸಗುತ್ತಿರುವ ಸಫಾಯಿ ಕರ್ಮಚಾರಿ ಆಂದೋಲನದ ರಾಷ್ಟ್ರೀಯ ಸಂಚಾಲಕ ಬೆಜವಾಡಾ ವಿಲ್ಸನ್, ಚರಂಡಿ ಸ್ವಚ್ಛಗೊಳಿಸುವಾಗ 340 ಜನರು ಸಾವನ್ನಪ್ಪಿದ್ದಾರೆ ಎಂದು ಸಚಿವರು ಸ್ವತಃ ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.
“ಈಗ, ಅವರು ತಾಂತ್ರಿಕವಾಗಿ ಹೇಳಿಕೆಯನ್ನು ನೀಡುತ್ತಿದ್ದು ಶೌಚಗುಂಡಿ ಸ್ವಚ್ಛಮಾಡುವುದನ್ನು ಒಣ ಶೌಚಾಲಯ ಎಂದು ಪರಿಗಣಿಸುತ್ತಿದ್ದಾರೆ. ಆದ್ದರಿಂದ, ಒಣ ಶೌಚಾಲಯಗಳಲ್ಲಿ ಜನರು ಸಾಯುವುದಿಲ್ಲ ಆದರೆ ಇಲ್ಲಿ ಸೆಪ್ಟಿಕ್ ಟ್ಯಾಂಕ್‌ಗಳಲ್ಲಿ ಜನರು ಸಾಯುತ್ತಾರೆ ಎಂದು ಅವರು ತಮ್ಮ ಹೇಳಿಕೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಬೇಕು. ಸರ್ಕಾರ ಎಲ್ಲವನ್ನೂ ನಿರಾಕರಿಸುತ್ತಿದೆ ಮತ್ತು ಅದೇ ರೀತಿಯಲ್ಲಿ ಶೌಚಗುಂಡಿ ಸ್ವಚ್ಛಗೊಳಿಸುವವರವರು ಸಾವುಗಳನ್ನು ನಿರಾಕರಿಸುತ್ತಿದ್ದಾರೆ, ”ಎಂದು ವಿಲ್ಸನ್ ಪಿಟಿಐಗೆ ತಿಳಿಸಿದರು.
“ಇದು ಸರ್ಕಾರದ ಕಡೆಯಿಂದ ನ್ಯಾಯಸಮ್ಮತವಾಗಿಲ್ಲ. ನಾವು ಈ ಜನರನ್ನು ಕೊಲ್ಲುವಾಗ ಅದಕ್ಕೆ ಈ ರೀತಿಯ ತಪ್ಪುಗಳು ಕಾರಣ ಎಂದು ಹೇಳುವ ಧೈರ್ಯ ಇರಬೇಕು. ಈ ಜನರಿಗೆ ಘನತೆಯ ಮೂಲಭೂತ ಹಕ್ಕನ್ನು ಸರ್ಕಾರ ನಿರಾಕರಿಸುತ್ತಿದೆ ಮತ್ತು ಸಾವುಗಳನ್ನು ಸಹ ಲೆಕ್ಕಿಸುತ್ತಿಲ್ಲ. ಇದು ಅಸ್ಪೃಶ್ಯತೆಯ ಆಧುನಿಕ ರೂಪವಾಗಿದೆ – ದಲಿತರ ಜೀವನವನ್ನು ಕಡೆಗಣಿಸುತ್ತದೆ ”ಎಂದು ವಿಲ್ಸನ್ ಹೇಳಿದರು.
ಸಾವಿನ ಸಂಖ್ಯೆಯನ್ನು ಹೇಗಾದರೂ ಕಡಿಮೆ ವರದಿ ಮಾಡಲಾಗುತ್ತಿದೆ ಮತ್ತು ಅದನ್ನು ಸರ್ಕಾರ ಸಂಪೂರ್ಣವಾಗಿ ನಿರಾಕರಿಸುತ್ತಿರುವುದು ಅತ್ಯಂತ ಖಂಡನೀಯ ಎಂದು ದಲಿತ ಆದಿವಾಸಿ ಶಕ್ತಿ ಅಧಿಕಾರಿ ಮಂಚ್ ಕಾರ್ಯದರ್ಶಿ ಸಂಜೀವ್ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ.
“ದೆಹಲಿಯಲ್ಲಿ ಮಾತ್ರ, ಇಂತಹ ಅನೇಕ ಸಾವುಗಳು ಸಂಭವಿಸಿವೆ. ಅವರ ಸಾವನ್ನು ಸರ್ಕಾರ ಒಪ್ಪಿಕೊಳ್ಳದಿರುವುದು ತುಂಬಾ ದುಃಖಕರ. ಪ್ರಾಣ ಕಳೆದುಕೊಂಡವರ ಸಾವಿನಲ್ಲೂ ಘನತೆಯನ್ನು ಕಸಿದುಕೊಳ್ಳುತ್ತಿದ್ದಾರೆ, ”ಎಂದು ಅವರು ಹೇಳಿದರು.
ಇದನ್ನೂ ಓದಿ: ನಿರ್ದಿಷ್ಟ ಸಮುದಾಯದ ಮಹಿಳೆಯರನ್ನು ‘ನೇರ ಹರಾಜು’ ನಡೆಸುತ್ತಿರುವ ಯೂಟ್ಯೂಬ್ ಚಾನೆಲ್ ವಿರುದ್ಧ ಕ್ರಮ ಕೈಗೊಳ್ಳಿ : ಐಟಿ ಸಚಿವರಿಗೆ ಪ್ರಿಯಾಂಕಾ ಚತುರ್ವೇದಿ ಪತ್ರ (No death has been reported due to manual scavenging says Centre )
Published On - 9:27 pm, Fri, 30 July 21




