ದೆಹಲಿ: ಬಜರಂಗದಳದ ಮೇಲೆ ನಿಷೇಧ ಹೇರುವಂಥ ಸಂಗತಿಗಳು ಫೇಸ್ಬುಕ್ನ ಸತ್ಯಪರಿಶೀಲನಾ ತಂಡಕ್ಕೆ ಗೋಚರಿಸಿಲ್ಲವೆಂದು ಕಂಪನಿಯ ಭಾರತೀಯ ಘಟಕದ ಮುಖ್ಯಸ್ಥ ಅಜಿತ್ ಮೋಹನ್ ಬುಧವಾರ ಸಂಸದೀಯ ಸಮಿತಿಯ ಮುಂದೆ ಹೇಳಿದರು.
ಅಮೆರಿಕದ ವಾಲ್ಸ್ಟ್ರೀಟ್ ಜರ್ನಲ್ ದಿನಪತ್ರಿಕೆಯು, ಬಜರಂಗದಳಕ್ಕೆ ವೇದಿಕೆ ಕಲ್ಪಿಸಿಕೊಡುವುದನ್ನು ನಿರ್ಬಂಧಿಸಿದರೆ ಫೇಸ್ಬುಕ್ನ ವಹಿವಾಟು ಮತ್ತು ಸಿಬ್ಬಂದಿಗೆ ಅಪಾಯವಾಗುವ ಸಾಧ್ಯತೆ ಇದೆ. ಅದಕ್ಕಾಗಿ ಫೇಸ್‌ಬುಕ್ ಬಜರಂಗದಳದ ಚಟುವಟಿಕೆಗಳಿಗೆ ನಿಷೇಧ ಹೇರುತ್ತಿಲ್ಲ ಎಂದು ವರದಿ ಮಾಡಿದ ಹಿನ್ನೆಲೆಯಲ್ಲಿ ಇದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಶಶಿ ತರೂರ್ ನೇತೃತ್ವದ ಸಂಸದೀಯ ಸಮಿತಿಯು ನಾಗರಿಕರ ದತ್ತಾಂಶ ಸುರಕ್ಷತೆಗೆ ಸಂಬಂಧಿಸಿದ ವಿಷಯವನ್ನು ಚರ್ಚಿಸಲು ಮೋಹನ್ ಅವರನ್ನು ಕರೆಸಿಕೊಂಡ ಸಂದರ್ಭದಲ್ಲಿ ಭಾರತೀಯ ಸಾರ್ವಜನಿಕ ನೀತಿ ನಿರ್ದೇಶಕ ಶಿವನಾಥ ತುಕ್ರಲ್ ಕೂಡ ಹಾಜರಿದ್ದರು.
ಅವರನ್ನು ಮತ್ತಷ್ಟು ಪ್ರಶ್ನಿಸಿದ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ‘ಫೇಸ್ಬುಕ್ನಲ್ಲಿ ಬಜರಂಗದಳ ಸಾಮಾಜಿಕ ಮಾಧ್ಯಮ ನೀತಿಗಳನ್ನು ಉಲ್ಲಂಘಿಸಿರುವುದು ನಿಜವಲ್ಲದಿದ್ದರೆ ಫೇಸ್‌ಬುಕ್, ವಾಲ್ ಸ್ಟ್ರೀಟ್ ಜರ್ನಲ್ ವರದಿಯನ್ನು ಯಾಕೆ ನಿರಾಕರಿಸಲಿಲ್ಲ’ ಎಂದು ಪ್ರಶ್ನಿಸಿದರು.
Published On - 2:17 pm, Thu, 17 December 20