ರಾಜಕೀಯ ಬಿಟ್ಟು ವೇದ, ಉಪನಿಷತ್ ಅಧ್ಯಯನ ಮಾಡುವೆ; ನಿವೃತ್ತಿ ಪ್ಲಾನ್ ಬಿಚ್ಚಿಟ್ಟ ಅಮಿತ್ ಶಾ

ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ನಿವೃತ್ತಿ ಪ್ಲಾನ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ ಉಳಿದ ಜೀವನವನ್ನು ವೇದಗಳು, ಉಪನಿಷತ್ತುಗಳ ಅಧ್ಯಯನ ಮತ್ತು ನೈಸರ್ಗಿಕ ಕೃಷಿಗೆ ಮೀಸಲಿಡಲು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ. ಸಹಕಾರ ಸಚಿವಾಲಯವು ಪ್ರಧಾನಿ ಮೋದಿ ಅವರ 'ಸಹಕಾರದ ಮೂಲಕ ಸಮೃದ್ಧಿ' ಎಂಬ ದೃಷ್ಟಿಕೋನಕ್ಕೆ ಅನುಗುಣವಾಗಿ ರೈತರನ್ನು ಸಬಲೀಕರಣಗೊಳಿಸುವ ಮೂಲಕ ಗ್ರಾಮೀಣ ಆರ್ಥಿಕತೆಯ ಜೊತೆಗೆ ದೇಶದ ಆರ್ಥಿಕತೆಯನ್ನು ಬಲಪಡಿಸುತ್ತಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

ರಾಜಕೀಯ ಬಿಟ್ಟು ವೇದ, ಉಪನಿಷತ್ ಅಧ್ಯಯನ ಮಾಡುವೆ; ನಿವೃತ್ತಿ ಪ್ಲಾನ್ ಬಿಚ್ಚಿಟ್ಟ ಅಮಿತ್ ಶಾ
Amit Shah

Updated on: Jul 09, 2025 | 6:00 PM

ನವದೆಹಲಿ, ಜುಲೈ 9: ಕೇಂದ್ರ ಸಚಿವ ಅಮಿತ್ ಶಾ ಇಂದು (ಬುಧವಾರ) ತಮ್ಮ ನಿವೃತ್ತಿ ಪ್ಲಾನ್ ಬಗ್ಗೆ ಆಸಕ್ತಿಕರ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ. “ನಿವೃತ್ತಿಯ ನಂತರ ನನ್ನ ಉಳಿದ ಜೀವನವನ್ನು ವೇದಗಳು, ಉಪನಿಷತ್ತುಗಳು ಮತ್ತು ನೈಸರ್ಗಿಕ ಕೃಷಿಯನ್ನು (Natural Farming) ಅಧ್ಯಯನ ಮಾಡಲು ಮೀಸಲಿಡಬೇಕೆಂದು ನಾನು ನಿರ್ಧರಿಸಿದ್ದೇನೆ” ಎಂದು ಅಮಿತ್ ಶಾ (Amit Shah)  ಹೇಳಿದ್ದಾರೆ. ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಇತರ ಸಹಕಾರಿ ಕಾರ್ಮಿಕರ ಮಹಿಳೆಯರೊಂದಿಗೆ ‘ಸಹಕಾರ್ ಸಂವಾದ’ದಲ್ಲಿ ಪಾಲ್ಗೊಂಡು ಅಮಿತ್ ಶಾ ಈ ಮಾತುಗಳನ್ನಾಡಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ನಿವೃತ್ತಿ ಜೀವನವನ್ನು ರಾಜಕೀಯದಿಂದ ದೂರವಿದ್ದು ಕಳೆಯುವುದಾಗಿ ಹೇಳಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಗೆ ಆಪ್ತರಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ನಿವೃತ್ತಿಯ ಬಳಿಕ ರಾಜಕೀಯದಿಂದ ದೂರ ಸರಿಯುವ ಇಚ್ಛೆ ವ್ಯಕ್ತಪಡಿಸಿದ್ದಾರೆ. “ನಾನು ನಿವೃತ್ತಿ ಹೊಂದಿದಾಗ ನನ್ನ ಜೀವನದ ಉಳಿದ ಭಾಗವನ್ನು ವೇದಗಳು, ಉಪನಿಷತ್ತುಗಳು ಮತ್ತು ನೈಸರ್ಗಿಕ ಕೃಷಿಗೆ ಮೀಸಲಿಡುತ್ತೇನೆ” ಎಂದು ಅಹಮದಾಬಾದ್‌ನಲ್ಲಿ ನಡೆದ ‘ಸಹಕಾರ್ ಸಂವಾದ’ ಕಾರ್ಯಕ್ರಮದಲ್ಲಿ ಅಮಿತ್ ಶಾ ಹೇಳಿದ್ದಾರೆ. ಅಮಿತ್ ಶಾ ಆಗಾಗ ಓದುವ ಪ್ರೀತಿಯನ್ನು ವ್ಯಕ್ತಪಡಿಸುತ್ತಲೇ ಇರುತ್ತಾರೆ. ಅವರು ನನ್ನ ಬಳಿ 8,000 ಪುಸ್ತಕಗಳಿವೆ. ಆದರೆ, ಅವುಗಳನ್ನು ಓದಲು ಸಮಯವಿಲ್ಲ ಎಂದು ಹೇಳಿಕೊಂಡಿದ್ದರು. ಅಮಿತ್ ಶಾ ಅವರಿಗೆ ಶಾಸ್ತ್ರೀಯ ಸಂಗೀತದ ಬಗ್ಗೆಯೂ ಒಲವು ಇದೆ.


ಇದನ್ನೂ ಓದಿ: ಭಾರತ ಎಂದಿಗೂ ಸರ್ವಾಧಿಕಾರವನ್ನು ಸ್ವೀಕರಿಸುವುದಿಲ್ಲ; ಅಮಿತ್ ಶಾ

ಇಂದಿನ ಸಂವಾದಕ್ಕೂ ಮುನ್ನ, ಅಮಿತ್ ಶಾ ಹಿಂದಿಯಲ್ಲಿ ಎಕ್ಸ್​ ನಲ್ಲಿ ಪೋಸ್ಟ್ ಮಾಡಿದ್ದು, “ಮೋದಿ ಅವರ ‘ಸಹಕಾರದ ಮೂಲಕ ಸಮೃದ್ಧಿ’ ಎಂಬ ದೃಷ್ಟಿಕೋನಕ್ಕೆ ಅನುಗುಣವಾಗಿ ರೈತರನ್ನು ಸಬಲೀಕರಣಗೊಳಿಸುವ ಮೂಲಕ ಸಹಕಾರ ಸಚಿವಾಲಯವು ಗ್ರಾಮೀಣ ಆರ್ಥಿಕತೆಯ ಜೊತೆಗೆ ದೇಶದ ಆರ್ಥಿಕತೆಯನ್ನು ಬಲಪಡಿಸುತ್ತಿದೆ. ಮೋದಿ ಸರ್ಕಾರದಲ್ಲಿ ಸಹಕಾರಿ ವಲಯವು ಮಹಿಳೆಯರ ಸ್ವಾವಲಂಬನೆಗೆ ಬಲವಾದ ಮಾಧ್ಯಮವಾಗಿದೆ” ಎಂದು ಹೇಳಿದ್ದರು.

ಇದನ್ನೂ ಓದಿ: ಅಣ್ಣಾಮಲೈಗೆ ತಮಿಳುನಾಡಿನ ಜೊತೆ ರಾಷ್ಟ್ರೀಯ ಹುದ್ದೆ ನೀಡುತ್ತೇವೆ; ಅಮಿತ್ ಶಾ

ಜುಲೈ 10ರಂದು ರಾಂಚಿಯಲ್ಲಿ ನಡೆಯುವ ಪೂರ್ವ ವಲಯ ಮಂಡಳಿ ಸಭೆಯ ಅಧ್ಯಕ್ಷತೆಯನ್ನು ಅಮಿತ್ ಶಾ ವಹಿಸಲಿದ್ದಾರೆ, ಇದರಲ್ಲಿ 4 ಪೂರ್ವ ರಾಜ್ಯಗಳಾದ ಜಾರ್ಖಂಡ್, ಬಿಹಾರ, ಒಡಿಶಾ ಮತ್ತು ಪಶ್ಚಿಮ ಬಂಗಾಳದ ಸುಮಾರು 70 ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. ಈ ಸಭೆಯ ಹಿನ್ನೆಲೆಯಲ್ಲಿ ರಾಂಚಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಇಂದು ಸಂಜೆ ಅಮಿತ್ ಶಾ ಜಾರ್ಖಂಡ್ ರಾಜಧಾನಿಗೆ ಆಗಮಿಸಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ