ಬೀದಿಬದಿ ಮಾಂಸಾಹಾರ ಮಾರಾಟಕ್ಕೆ ನಿರ್ಬಂಧ; ಆಹಾರ ಪದ್ಧತಿ ಬಗ್ಗೆ ಸ್ಪಷ್ಟನೆ ನೀಡಿದ ಗುಜರಾತ್ ಸಿಎಂ
ಹೀಗೆ ರಸ್ತೆ ಬದಿಯಲ್ಲಿ ಗಾಡಿಗಳಲ್ಲಿ ಆಹಾರ ತಯಾರಿಸಿ ಮಾರಾಟ ಮಾಡುವ ಅನೇಕರು ಸ್ವಚ್ಛತೆ ನಿರ್ವಹಣೆ ಮಾಡುತ್ತಿಲ್ಲ. ಇದು ನಮಗೆ ಆತಂಕ ತಂದಿದೆ ಎಂದು ಗುಜರಾತ್ ಮುಖ್ಯಮಂತ್ರಿ ಹೇಳಿದ್ದಾರೆ.
ಗುಜರಾತ್ನ ಪ್ರಮುಖ ನಗರ ಅಹ್ಮದಾಬಾದ್ ಸೇರಿ ಕೆಲವು ನಗರಗಳ ವ್ಯಾಪ್ತಿಯಲ್ಲಿ ಇಂದಿನಿಂದ ಬೀದಿಬದಿಗೆ ಮಾಂಸಾಹಾರ ಮಾರಾಟ ಮಾಡುವಂತಿಲ್ಲ ಎಂಬ ಆದೇಶವನ್ನು ಸ್ಥಳೀಯ ಆಡಳಿತ ಜಾರಿ ಮಾಡಿದೆ. ಈ ಆದೇಶ ಕೆಲವು ಚರ್ಚೆಗಳನ್ನು ಹುಟ್ಟುಹಾಕಿದ ಬೆನ್ನಲ್ಲೇ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೇಳಿಕೆಯೊಂದನ್ನು ನೀಡಿದ್ದಾರೆ. ನನಮಗೆ ಯಾರ ಆಹಾರ ಪದ್ಧತಿಯ ಬಗ್ಗೆಯೂ ಏನೇನೂ ಸಮಸ್ಯೆಯಿಲ್ಲ ಎಂದಿದ್ದಾರೆ. ಆದರೆ ರಸ್ತೆ ಬದಿಯಲ್ಲಿ ಅನೈರ್ಮಲ್ಯ ಆಹಾರ ಮಾರಾಟ ಮಾಡುವ ಮತ್ತು ವಾಹನ ಸಂಚಾರಕ್ಕೆ ಅಡಚಣೆ ಮಾಡುವ ಕೈಗಾಡಿಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆಯನ್ನೂ ನೀಡಿದ್ದಾರೆ.
ಆನಂದ್ ಜಿಲ್ಲೆಯ ಬಂಧಾನಿ ಎಂಬ ಗ್ರಾಮದಲ್ಲಿ ಬಿಜೆಪಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಒಂದಷ್ಟು ಜನರು ಸಸ್ಯಾಹಾರ ತಿನ್ನುತ್ತಾರೆ. ಇನ್ನೊಂದಷ್ಟು ಮಂದಿ ಮಾಂಸಾಹಾರ ಸೇವನೆ ಮಾಡುತ್ತಾರೆ. ಯಾರ ಆಹಾರ ಪದ್ಧತಿಯ ಬಗ್ಗೆಯೂ ನಮ್ಮ ಬಿಜೆಪಿ ಸರ್ಕಾರಕ್ಕೆ ಅಸಮಧಾನವಾಗಲೀ, ತೊಂದರೆಯಾಗಲೀ ಇಲ್ಲ. ಆದರೆ ಕೆಲವು ಸ್ಥಳಗಳಲ್ಲಿ ಇರುವ, ಆಹಾರ ಮಾರಾಟ ಕೈಗಾಡಿಗಳನ್ನು ತೆಗೆಯಬೇಕೆಂದು ಬೇಡಿಕೆ ಇದೆ. ಹಾಗಾಗಿ ಈ ಆದೇಶ ಎಂದು ಭೂಪೇಂದ್ರ ಪಟೇಲ್ ತಿಳಿಸಿದ್ದಾರೆ.
ಹೀಗೆ ರಸ್ತೆ ಬದಿಯಲ್ಲಿ ಗಾಡಿಗಳಲ್ಲಿ ಆಹಾರ ತಯಾರಿಸಿ ಮಾರಾಟ ಮಾಡುವ ಅನೇಕರು ಸ್ವಚ್ಛತೆ ನಿರ್ವಹಣೆ ಮಾಡುತ್ತಿಲ್ಲ. ಇದು ನಮಗೆ ಆತಂಕ ತಂದಿದೆ. ಇನ್ನುಳಿದಂತೆ ರಸ್ತೆಯಲ್ಲಿ ಉಳಿದ ವಾಹನ ಮತ್ತು ಜನರ ಸಂಚಾರಕ್ಕೆ ಅನನುಕೂಲ ಮಾಡುವ ಕೈಗಾಡಿಗಳನ್ನು ನಿರ್ಬಂಧಿಸುವ ನಿರ್ಧಾರ ತೆಗೆದುಕೊಂಡಿದ್ದು ಸ್ಥಳೀಯ ಆಡಳಿತಗಳು ಎಂದೂ ಮುಖ್ಯಮಂತ್ರಿ ತಿಳಿಸಿದ್ದಾರೆ. ಸದ್ಯ ಬಿಜೆಪಿ ಅಧಿಕಾರದಲ್ಲಿರುವ ಅಹ್ಮದಾಬಾದ್ ನಗರಾಡಳಿತ ಹೀಗೊಂದು ರೂಲ್ಸ್ ಮಾಡಿದೆ. ರಸ್ತೆ ಬದಿಯಲ್ಲಿ ಮತ್ತು ಶಾಲೆ, ಧಾರ್ಮಿಕ ಸ್ಥಳಗಳಿಂದ 100 ಮೀಟರ್ ಅಂತರದಲ್ಲಿ ಮಾಂಸಾಹಾರ ಮಾರಾಟ ಮಾಡುವಂತಿಲ್ಲ ಎಂದು ಹೇಳಿದೆ. ಅದರ ಬೆನ್ನಲ್ಲೇ ಮುಖ್ಯಮಂತ್ರಿ ಅದನ್ನು ಈ ಹೇಳಿಕೆಗಳ ಮೂಲಕ ಸಮರ್ಥಿಸಿಕೊಂಡಿದ್ದಾರೆ. ಬರೀ ಅಹ್ಮದಾಬಾದ್ ಅಷ್ಟೇ ಅಲ್ಲ, ವಡೋದರ, ರಾಜಕೋಟ್, ಭಾವ್ನಗರಗಳಲ್ಲೂ ಸ್ಥಳೀಯ ರಾಜಕೀಯ ಮುಖಂಡರು ಇದೇ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಬೀದಿಬದಿ ಇನ್ನು ಮುಂದೆ ಮಾಂಸಾಹಾರ ಮಾರುವಂತಿಲ್ಲ: ಅಹಮದಾಬಾದ್ ನಗರಾಡಳಿತ ಕಟ್ಟಪ್ಪಣೆ