ಬೀದಿಬದಿ ಇನ್ನು ಮುಂದೆ ಮಾಂಸಾಹಾರ ಮಾರುವಂತಿಲ್ಲ: ಅಹಮದಾಬಾದ್ ನಗರಾಡಳಿತ ಕಟ್ಟಪ್ಪಣೆ
ಧಾರ್ಮಿಕ ಸ್ಥಳಗಳು, ಉದ್ಯಾನವನಗಳು, ಸಾರ್ವಜನಿಕ ಸ್ಥಳಗಳು ಮತ್ತು ಶಿಕ್ಷಣ ಸಂಸ್ಥೆಗಳು ಇರುವ ಸ್ಥಳಗಳಿಂದ 100 ಮೀಟರ್ ವ್ಯಾಪ್ತಿಯಲ್ಲಿ ಇಂಥ ವಾಹನಗಳು ನಿಲ್ಲುವಂತಿಲ್ಲ ಎಂದು ನಗರ ಯೋಜನಾ ಸಮಿತಿ ತಿಳಿಸಿದೆ.
ಅಹಮದಾಬಾದ್: ಗುಜರಾತ್ನ ಪ್ರಮುಖ ನಗರ ಅಹಮದಾಬಾದ್ನ ವ್ಯಾಪ್ತಿಯಲ್ಲಿ ನಾಳೆಯಿಂದ (ನ.16) ರಸ್ತೆಬದಿಗಳಲ್ಲಿ ಮಾಂಸಾಹಾರ ಮಾರುವಂತಿಲ್ಲ ಎಂದು ನಗರಾಡಳಿತ ಕಟ್ಟಪ್ಪಣೆ ಮಾಡಿದೆ. ಧಾರ್ಮಿಕ ಮತ್ತು ಶಿಕ್ಷಣ ಸಂಸ್ಥೆಗಳ ಸಮೀಪವೂ ಮಾಂಸಾಹಾರ ಮಾರಬಾರದು ಎಂದು ನಗರಾಡಳಿತ ಸೂಚಿಸಿದೆ. ನಗರದ ಸಾರ್ವಜನಿಕ ಸ್ಥಳಗಳನ್ನು ಮಾಂಸಾಹಾರ ಮುಕ್ತಗೊಳಿಸುವ ಬಗ್ಗೆ ಅಹಮದಾಬಾದ್ ನಗರಪಾಲಿಕೆಯು ಸೋಮವಾರ ನಿರ್ಧರಿಸಿತ್ತು. ಮುಖ್ಯರಸ್ತೆಗಳಲ್ಲಿರುವ ಮೊಟ್ಟೆ ಮತ್ತು ಮಾಂಸಾಹಾರ ಮಾರುವ ಗಾಡಿಗಳನ್ನು ತೆಗೆಸುವಂತೆ ಅಧಿಕಾರಿಗಳಿಗೆ ನಗರಾಡಳಿತವು ಸೂಚನೆ ನೀಡಿದೆ. ನಾಳೆ ಮುಂಜಾನೆಯಿಂದಲೇ ಇಂಥ ವಾಹನಗಳನ್ನು ತೆಗೆಯಲಾಗುವುದು. ಧಾರ್ಮಿಕ ಸ್ಥಳಗಳು, ಉದ್ಯಾನವನಗಳು, ಸಾರ್ವಜನಿಕ ಸ್ಥಳಗಳು ಮತ್ತು ಶಿಕ್ಷಣ ಸಂಸ್ಥೆಗಳು ಇರುವ ಸ್ಥಳಗಳಿಂದ 100 ಮೀಟರ್ ವ್ಯಾಪ್ತಿಯಲ್ಲಿ ಇಂಥ ವಾಹನಗಳು ನಿಲ್ಲುವಂತಿಲ್ಲ ಎಂದು ನಗರ ಯೋಜನಾ ಸಮಿತಿಯ ಅಧ್ಯಕ್ಷ ದೇವಾಂಗ್ ದಾನಿ ಹೇಳಿದ್ದಾರೆ.
ಗುಜರಾತ್ನ ಅಸ್ಮಿತೆ ಮತ್ತು ಕರ್ಣಾವತಿ ನಗರದ ಪರಂಪರೆಯನ್ನು ಗಮನದಲ್ಲಿರಿಸಿಕೊಂಡು ನಗರಾಡಳಿತವು ಈ ನಿರ್ಧಾರಕ್ಕೆ ಬಂದಿದೆ. ನಗರಾಡಳಿತ ಸಂಸ್ಥೆಯ ಕಂದಾಯ ಸಮಿತಿ ಅಧ್ಯಕ್ಷ ಜೈನಿಕ್ ವಕೀಲ್ ಈ ಸಂಬಂಧ ನಗರಪಾಲಿಕೆ ಆಯುಕ್ತರು ಮತ್ತು ಸ್ಥಾಯಿ ಸಮಿತಿಗೆ ನ.13ರಂದು ಪತ್ರ ಬರೆದಿದ್ದರು. ರಸ್ತೆಬದಿಯಲ್ಲಿ ಮಾಂಸಾಹಾರ ಮಾರಾಟ ನಿಷೇಧಿಸಬೇಕು. ನಗರದ ಸಾರ್ವಜನಿಕ ರಸ್ತೆಗಳನ್ನು ಅತಿಕ್ರಮಿಸುತ್ತಿರುವ ಮಾಂಸಾಹಾರಿ ವಾಹನಗಳನ್ನು ದೂರ ಇರಿಸಬೇಕು ಎಂದು ಆಗ್ರಹಿಸಿದ್ದರು.
ರಸ್ತೆಬದಿಗಳಲ್ಲಿ ಮಾಂಸಾಹಾರ ಮಾರುವ ವ್ಯಾಪಾರಿಗಳಿಗೆ ದಂಡ ವಿಧಿಸುವುದಿಲ್ಲ. ಆದರೆ ಅವರ ವಾಹನಗಳನ್ನು ದೂರ ಕೊಂಡೊಯ್ಯಲು ಸೂಚಿಸಲಾಗುವುದು. ತಪ್ಪನ್ನು ಪುನರಾವರ್ತಿಸಿದರೆ ಅವರ ಗಾಡಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಕೆಟ್ಟವಾಸನೆಯ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿದ್ದವು. ಮುಖ್ಯವಾಗಿ ಮುಂಜಾನೆ ವಾಕಿಂಗ್ ಮಾಡುವವರು ಮತ್ತು ಧಾರ್ಮಿಕ ಸ್ಥಳಗಳಿಗೆ ಭೇಟಿ ಕೊಡುವವರು ಇಂಥ ವಾಹನಗಳಿಗೆ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತಿದೆ ಎಂದು ದೂರಿದ್ದರು. ಇಂಥ ವಾಹನಗಳನ್ನು ಗುರುತಿಸುವ, ಎಚ್ಚರಿಸುವ ಕೆಲಸ ಸೋಮವಾರದಿಂದಲೇ (ನ.15) ಆರಂಭವಾಗಿದೆ. ಈ ನಿಟ್ಟಿನಲ್ಲಿ ಸಹಕರಿಸುವಂತೆ ನಗರಪಾಲಿಕೆಯ ವಿವಿಧ ವಿಭಾಗಗಳಿಗೆ ಸೂಚನೆ ನೀಡಲಾಗಿದೆ ಎಂದು ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷ ಹಿತೇಶ್ ಬರೋಟ್ ಹೇಳಿದ್ದಾರೆ.
ಅಹಮದಾಬಾದ್ನಲ್ಲಿ ಮಾಂಸಾಹಾರ ಖಾದ್ಯ ಮಾರುವ ರಸ್ತೆಬದಿ ಗಾಡಿಗಳ ವಿರುದ್ಧ ಕಠಿಣ ಕ್ರಮ ಜಾರಿಯ ನಿರ್ಧಾರ ಘೋಷಣೆಗೆ ಮೊದಲೇ ಗುಜರಾತ್ನ ರಾಜಕೋಟ್, ವಡೋದರ ನಗರಗಳಲ್ಲಿ ಇಂಥದ್ದೇ ನಿಯಮಗಳು ಜಾರಿಯಾಗಿವೆ. ಆಹಾರ ಸೇವನೆಯು ಜನರ ಇಷ್ಟಕ್ಕೆ ಬಿಟ್ಟವಿಷಯ. ಯಾರು ಎಂಥ ಆಹಾರ ಸೇವಿಸಬೇಕು ಎಂಬುದನ್ನು ನಗರಾಡಳಿತ ನಿರ್ಧರಿಸಲು ಸಾಧ್ಯವಿಲ್ಲ ಎಂದು ವಿರೋಧಪಕ್ಷಗಳು ಹೇಳಿವೆ.
ಇದನ್ನೂ ಓದಿ: ಡೈರಿ ಫಾರಂಗಳನ್ನು ಮುಚ್ಚಲು, ಶಾಲಾ ಮಕ್ಕಳ ಊಟದ ಮೆನುನಿಂದ ಮಾಂಸಾಹಾರ ತೆಗೆದುಹಾಕುವ ಲಕ್ಷದ್ವೀಪ ಆಡಳಿತದ ಆದೇಶಕ್ಕೆ ಕೇರಳ ಹೈಕೋರ್ಟ್ ತಡೆ ಇದನ್ನೂ ಓದಿ: ಪ್ರಾಣಿಹತ್ಯೆ ಮಾಡದೆ ಮಾಂಸಾಹಾರ: ಲ್ಯಾಬ್ನಲ್ಲಿ ಉತ್ಪಾದಿಸಿದ ಮಾಂಸ ಮಾರಾಟಕ್ಕೆ ಸಿಂಗಾಪುರ ಸರ್ಕಾರ ಅನುಮತಿ