ಪ್ರಾಣಿಹತ್ಯೆ ಮಾಡದೆ ಮಾಂಸಾಹಾರ: ಲ್ಯಾಬ್ನಲ್ಲಿ ಉತ್ಪಾದಿಸಿದ ಮಾಂಸ ಮಾರಾಟಕ್ಕೆ ಸಿಂಗಾಪುರ ಸರ್ಕಾರ ಅನುಮತಿ
ಪ್ರಾಣಿ ಹತ್ಯೆ ಮಾಡದೆ ಪ್ರಾಣಿಗಳ ದೇಹದಿಂದ ತೆಗೆದ ಕೋಶಗಳನ್ನು ಬಳಸಿ ಲ್ಯಾಬ್ಗಳಲ್ಲಿ ಉತ್ಪಾದಿಸುವ ಈ ಮಾಂಸದ ಉತ್ಪಾದನಾ ವೆಚ್ಚ ದುಬಾರಿ ಆಗಿದೆ.
ಸಿಂಗಾಪುರ: ಪ್ರಾಣಿಹತ್ಯೆ ಮಾಡದೆ ಮಾಂಸಾಹಾರ ಸೇವಿಸಬಹುದೇ? ಎಂಬ ಪ್ರಶ್ನೆಗೆ ಸಿಂಗಾಪುರ ಜನರು ಈಗ ಯೆಸ್ ಎಂದು ಉತ್ತರಿಸುತ್ತಾರೆ. ಅಮೆರಿಕ ಮೂಲದ ಈಟ್ ಜಸ್ಟ್ ಎಂಬ ಸ್ಟಾರ್ಟ್ ಅಪ್ ಲ್ಯಾಬ್ನಲ್ಲಿ ಮಾಂಸ ಉತ್ಪಾದನೆ ಮಾಡಿದ್ದು, ಇದನ್ನು ಮಾರಾಟ ಮಾಡಲು ಸಿಂಗಾಪುರ ಸರ್ಕಾರ ಅನುಮತಿ ನೀಡಿದೆ.
ಆರೋಗ್ಯದ ಬಗ್ಗೆ ಇರುವ ಕಾಳಜಿ, ಪ್ರಾಣಿಗಳ ಮೇಲಿನ ಒಲವು ಮತ್ತು ಪರಿಸರ ಪ್ರೀತಿಯಿಂದ ಪ್ರಾಣಿ ಹತ್ಯೆ ಮಾಡಿ ತಿನ್ನುವ ಮಾಂಸಾಹಾರಕ್ಕೆ ಬೇಡಿಕೆ ಕಡಿಮೆಯಾಗುತ್ತಿದೆ. ಇಂತಿರುವಾಗ ಬಿಯಾಂಡ್ ಮೀಟ್ ಇಂಕ್, ಇಂಪಾಸಿಬಲ್ ಫುಡ್ಸ್ ಮೊದಲಾದ ಕಂಪನಿಗಳು ಸಸ್ಯಜನ್ಯ ಮಾಂಸವನ್ನು ಪ್ರಚುರಪಡಿಸಿವೆ.
ಪ್ರಾಣಿ ಹತ್ಯೆ ಮಾಡದೆ ಪ್ರಾಣಿಗಳ ದೇಹದಿಂದ ತೆಗೆದ ಕೋಶಗಳನ್ನು ಬಳಸಿ ಉತ್ಪಾದಿಸುವ ಈ ಮಾಂಸದ ಉತ್ಪಾದನಾ ವೆಚ್ಚ ದುಬಾರಿ.
ಲ್ಯಾಬ್ಗಳಲ್ಲಿ ಉತ್ಪಾದಿಸುವ ಈ ಪ್ರಾಣಿ ಮಾಂಸವು ಸೇವನೆಗೆ ಯೋಗ್ಯವಾಗಿದೆ. ಈ ಮಾಂಸಗಳಿಂದ ನಗಟ್ಸ್ ತಯಾರಿಸಿ ₹50ಕ್ಕೆ ಮಾರಾಟ ಮಾಡಲಾಗುತ್ತಿದೆ ಈಟ್ ಜಸ್ಟ್ ಹೇಳಿದೆ.
ಜಗತ್ತಿನಾದ್ಯಂತ ಸುಮಾರು 24ಕ್ಕಿಂತಲೂ ಹೆಚ್ಚು ಕಂಪನಿಗಳ ಲ್ಯಾಬ್ಗಳಲ್ಲಿ ಮೀನು, ಬೀಫ್ ಮತ್ತು ಕೋಳಿ ಮಾಂಸ ತಯಾರಿಸುವ ಪ್ರಯೋಗಗಳು ನಡೆಯುತ್ತಿವೆ. 2029ರ ವೇಳೆಗೆ ಜಗತ್ತಿನಲ್ಲಿ ₹140 ಶತಕೋಟಿ ವೆಚ್ಚದ ಪರ್ಯಾಯ ಮಾಂಸ ಮಾರುಕಟ್ಟೆ ತಲೆ ಎತ್ತಬಹುದು ಎಂದು ಬಾರ್ಕ್ಲೇಸ್ ಅಂದಾಜಿಸಿದೆ.
ಹೇಗಿರುತ್ತೆ ಲ್ಯಾಬ್ನಲ್ಲಿ ಉತ್ಪಾದಿಸಿದ ಮಾಂಸ?
ಪ್ರಾಣಿಗಳನ್ನು ಹತ್ಯೆ ಮಾಡದೆ ಅವುಗಳ ಸ್ಟೆಮ್ ಸೆಲ್ ಬಳಸಿ ಮಾಂಸ ಉತ್ಪಾದನೆ ಮಾಡಲಾಗುತ್ತದೆ. ಜೀವಕೋಶ (ಸೆಲ್) ಹಾಗೂ ಟಿಶ್ಯೂಗಳ ನಡುವೆ ಜೀವ ತುಂಬುವ ಈ ಸ್ಟೆಮ್ ಸೆಲ್ಗಳಿಗೆ ಅಮಿನೊ ಆ್ಯಸಿಡ್ ಮತ್ತು ಕಾರ್ಬೊಹೈಡ್ರೇಟ್ಸ್ ಒದಗಿಸಿ ಲ್ಯಾಬ್ಗಳಲ್ಲಿ ಬೆಳೆಸಲಾಗುತ್ತದೆ. ನೋಡಲು ಈ ಮಾಂಸ ಪ್ರಾಣಿಗಳ ಮಾಂಸದಂತೆಯೇ ಇರುತ್ತದೆ. ರುಚಿಯಲ್ಲಿಯೂ ವ್ಯತ್ಯಾಸವೇನು ಇರುವುದಿಲ್ಲವಂತೆ.