ಹಾಸನ: ಪತ್ನಿ ಕಿರುಕುಳ ಆರೋಪ, ಸಾಫ್ಟ್‌ವೇರ್ ಇಂಜಿನಿಯರ್ ಪ್ರಮೋದ್ ಆತ್ಮಹತ್ಯೆ
ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದ ನಂತರ ಕರ್ನಾಟಕದಲ್ಲಿ ಅಂತಹದ್ದೇ ಕೆಲವು ಪ್ರಕರಣಗಳು ವರದಿಯಾಗುತ್ತಿವೆ. ಹೆಂಡತಿ ಕಾಟಕ್ಕೆ ಕಾನ್ಸ್‌ಟೇಬಲ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಇತ್ತೀಚೆಗೆ ಬೆಂಗಳೂರಿನಲ್ಲಿ ವರದಿಯಾಗಿತ್ತು. ಇದೀಗ ಹಾಸನದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಪತ್ನಿ ಕಾಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಾಸನ, ಜನವರಿ 1: ಹಾಸನ ನಗರದ ಸಾಫ್ಟ್‌ವೇರ್ ಇಂಜಿನಿಯರ್ ಪ್ರಮೋದ್ (35) ಆತ್ಮಹತ್ಯೆಗೆ ಶರಣಾಗಿದ್ದು, ಪತ್ನಿ ಕಾಟದಿಂದ ಬೇಸತ್ತು ಈ ಕೃತ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬೆಂಗಳೂರಿನ ಬೆಂಜ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಮೋದ್ ಡಿಸೆಂಬರ್ 29 ರಂದು ಮನೆಯಿಂದ ಹೊರಗೆ ಹೋಗಿದ್ದರು. ಆ ಬಳಿಕ ನಾಪತ್ತೆಯಾಗಿದ್ದರು. ಗೊರೂರು ಸಮೀಪ ಹೇಮಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪ್ರಮೋದ್ ಶವ ನೋಡಲು ಪತ್ನಿಯೂ ಬಂದಿದ್ದು, ಇದೇ ವೇಳೆ ಹೈಡ್ರಾಮಾ ನಡೆದಿದೆ. ತಾಯಿ ಹಾಗೂ ಮಗು ಜೊತೆ ಪತಿ ಶವ ನೋಡಲು ಪತ್ನಿ ಬಂದಿದ್ದಾರೆ. ಈ ವೇಳೆ ಪತ್ನಿ ಕುಟುಂಬ ಸದಸ್ಯರು ಹಾಗೂ ಪ್ರಮೋದ್ ಕುಟುಂಬ ಸದಸ್ಯರ ನಡುವೆ ವಾಗ್ವಾದ ನಡೆದಿದೆ. ಪತ್ನಿಯನ್ನು ಪ್ರಮೋದ್ ಕುಟುಂಬ ಸದಸ್ಯರು ಬೆನ್ನಟ್ಟಿದ್ದಾರೆ. ನಂತರ ಪತ್ನಿ ಹಾಗೂ ಆಕೆಯ ತಾಯಿಯನ್ನು ಪೊಲೀಸರು ರಕ್ಷಿಸಿ ಕರೆದೊಯ್ದರು. ಜನರನ್ನು ನಿಯಂತ್ರಣ ಮಾಡಲು ಪೊಲೀಸರು ಹರಸಾಹಸ ಪಡುವಂತಾಯಿತು.
ಪತ್ನಿ ಕಾಟಕ್ಕೆ ಬೇಸತ್ತು ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ದೇಶದಾದ್ಯಂತ ಸಂಚಲನ ಸೃಷ್ಟಿಸಿತ್ತು. ಅದರ ಬೆನ್ನಲ್ಲೇ ಕರ್ನಾಟಕದ ವಿವಿಧೆಡೆ ಅಂಥ ಮತ್ತಷ್ಟು ಪ್ರಕರಣಗಳು ವರದಿಯಾಗುತ್ತಿವೆ.
ನೇಣಿಗೆ ಶರಣಾಗಿದ್ದ ಕಾನ್ಸ್‌ಟೇಬಲ್ ತಿಪ್ಪಣ್ಣ
ಹುಳಿಮಾವು ಪೋಲಿಸ್ ಠಾಣೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ, ಜಾಪುರ ಜಿಲ್ಲೆ ಸಿಂದಗಿ ತಾಲೂಕಿನ ಹಂದಿಗನೂರು ಗ್ರಾಮದ ತಿಪ್ಪಣ್ಣ ಎಂಬವರು ಪತ್ನಿ ಹಾಗೂ ಮಾವನ ಕಾಟಕ್ಕೆ ಬೇಸತ್ತು ಬೆಂಗಳೂರಿನಲ್ಲಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಬೈಯ್ಯಪ್ಪನಹಳ್ಳಿಯಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದರು. ‘ನೀನು ಸತ್ತು ಹೋಗು, ನನ್ನ ಮಗಳು ಚೆನ್ನಾಗಿ ಇರುತ್ತಾಳೆ’ ಎಂದು ಹೇಳಿ ಅವಾಚ್ಯ ಪದಗಳಿಂದ ಮಾವ ನಿಂದಿಸಿದ್ದರು ಎಂಬುದಾಗಿಯೂ ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದರು. ಈ ಪ್ರಕರಣ ಕೂಡ ರಾಜ್ಯದಲ್ಲಿ ಸದ್ದು ಮಾಡಿತ್ತು.
ಇದನ್ನೂ ಓದಿ: ಬೆಂಗಳೂರು: ಟೆಕ್ಕಿ ಅತುಲ್ ಆಯ್ತು ಈಗ ಪೊಲೀಸ್ ಸರದಿ, ಹೆಂಡತಿ ಕಾಟಕ್ಕೆ ಕಾನ್ಸ್‌ಟೇಬಲ್ ತಿಪ್ಪಣ್ಣ ಆತ್ಮಹತ್ಯೆ!
ಈ ಎಲ್ಲ ಘಟನೆಗಳ ಬೆನ್ನಲ್ಲೇ ಇದೀಗ ಹಾಸನದಲ್ಲಿ ಟೆಕ್ಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆ ಸಂಬಂಧ ತನಿಖೆ ನಂತರ ಹೆಚ್ಚಿನ ವಿವರ ತಿಳಿದುಬರಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:41 pm, Wed, 1 January 25