7 ಗಂಟೆಯ ನಂತರ ಮಹಿಳೆಯರಿಗೆ ಕೆಲಸ ಮಾಡಲು ಒತ್ತಾಯಿಸುವಂತಿಲ್ಲ: ಉತ್ತರ ಪ್ರದೇಶ ಸರ್ಕಾರ ಹೊಸ ನಿಯಮ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 29, 2022 | 1:32 PM

‘ಸಂಜೆ 7ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಯಾವುದೇ ಮಹಿಳೆ ಕಾರ್ಯನಿರ್ವಹಿಸುವುದಿಲ್ಲ ಎಂದು ಹೇಳಿದರೆ ಆಕೆಯನ್ನು ಒತ್ತಾಯಿಸುವಂತಿಲ್ಲ‘ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.

7 ಗಂಟೆಯ ನಂತರ ಮಹಿಳೆಯರಿಗೆ ಕೆಲಸ ಮಾಡಲು ಒತ್ತಾಯಿಸುವಂತಿಲ್ಲ: ಉತ್ತರ ಪ್ರದೇಶ ಸರ್ಕಾರ ಹೊಸ ನಿಯಮ
ಪ್ರಾತಿನಿಧಿಕ ಚಿತ್ರ
Follow us on

ಲಖನೌ: ಉದ್ಯೋಗಸ್ಥ ಮಹಿಳೆಯರಿಗೆ ಸೇವಾ ಭದ್ರತೆ ಮತ್ತು ಸುರಕ್ಷೆ ಹೆಚ್ಚಿಸುವ ಉದ್ದೇಶದಿಂದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೊಸ ನಿಯಮಗಳನ್ನು ರೂಪಿಸಿ ಆದೇಶ ಹೊರಡಿಸಿದೆ. ಈ ನಿಯಮಗಳ ಪ್ರಕಾರ ಯಾವುದೇ ಕಾರ್ಖಾನೆಯಲ್ಲಿ ಮಹಿಳಾ ಉದ್ಯೋಗಿಗಳು ರಾತ್ರಿಪಾಳಿಯಲ್ಲಿ ಕಾರ್ಯನಿರ್ವಹಿಸಬೇಕೆಂದು ಒತ್ತಾಯಿಸುವಂತಿಲ್ಲ. ನಿರ್ದಿಷ್ಟ ಅವಧಿಯಲ್ಲಿ ನಿಯಮಿತವಾಗಿ ಕಾರ್ಯನಿರ್ವಹಿಸುವ ಮಹಿಳಾ ಉದ್ಯೋಗಿಗೆ ಉಚಿತ ಸಾರಿಗೆ, ಆಹಾರ ಮತ್ತು ಸುರಕ್ಷಾ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಲಾಗಿದೆ.

‘ಸಂಜೆ 7ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಯಾವುದೇ ಮಹಿಳೆ ಕಾರ್ಯನಿರ್ವಹಿಸುವುದಿಲ್ಲ ಎಂದು ಹೇಳಿದರೆ ಆಕೆಯನ್ನು ಒತ್ತಾಯಿಸುವಂತಿಲ್ಲ. ಆಕೆಯ ಮೇಲೆ ಹೆಚ್ಚುವರಿ ದಂಡವನ್ನು ಹೇರುವಂತಿಲ್ಲ’ ಎಂದು ಸರ್ಕಾರಿ ಆದೇಶವು ಸ್ಪಷ್ಟಪಡಿಸಿದೆ.

ಉತ್ತರ ಪ್ರದೇಶ ಸರ್ಕಾರದ ಕಾರ್ಮಿಕ ಇಲಾಖೆಯು ಈ ಸಂಬಂಧ ಅಧಿಸೂಚನೆ ಹೊರಡಿಸಿದೆ. ಆಕೆಯ ಇಚ್ಛೆಗೆ ವಿರುದ್ಧವಾಗಿ ಕೆಲಸದ ಸ್ಥಳದಲ್ಲಿಯೂ ಮಹಿಳೆಯು ಇರಬೇಕು ಎಂದು ಒತ್ತಾಯಿಸುವಂತಿಲ್ಲ. ಮಹಿಳಾ ಉದ್ಯೋಗಿಯ ಲಿಖಿತ ಒಪ್ಪಿಗೆಯಿಲ್ಲದೆ ಆಕೆಯನ್ನು ಕೆಲಸ ಸ್ಥಳದಲ್ಲಿ ರಾತ್ರಿ ಹೊತ್ತು ಇರುವಂತೆ ಸೂಚಿಸುವಂತಿಲ್ಲ ಎಂದು ಆದೇಶವು ಸ್ಪಷ್ಟಪಡಿಸಿದೆ.

ರಾಜ್ಯದ ಎಲ್ಲ ಮಿಲ್​ಗಳು ಮತ್ತು ಕಾರ್ಖಾನೆಗಳಲ್ಲಿ ಮಹಿಳಾ ಉದ್ಯೋಗಿಗಳಿಗೆ ಹಲವು ಸೌಲಭ್ಯ ಮತ್ತು ರಿಯಾಯ್ತಿಯಗಳನ್ನು ಈ ಮೊದಲು ಸರ್ಕಾರವು ಘೋಷಿಸಿತ್ತು.

‘ಕೆಲಸ ಮಾಡುವ ಸ್ಥಳದಲ್ಲಿ ಮಹಿಳೆಗೆ ಭದ್ರತೆ ಒದಗಿಸಬೇಕಾದ್ದು ಮತ್ತು ಆಕೆಯ ಮೇಲೆ ಲೈಂಗಿಕ ದೌರ್ಜನ್ಯವಾಗದಂತೆ ತಡೆಯುವುದು ಉದ್ಯೋಗದಾತನ ಜವಾಬ್ದಾರಿ. ಉದ್ಯೋಗದ ಸ್ಥಳದಲ್ಲಿ ಮಹಿಳೆಯರ ಮೇಲೆ ಆಗಬಹುದಾದ ಲೈಂಗಿಕ ದೌರ್ಜನ್ಯ ತಡೆಗಟ್ಟುವ ದೃಷ್ಟಿಯಿಂದ ರೂಪಿಸಲಾಗಿರುವ 2013ರಲ್ಲಿ ರೂಪಿಸಿದ ಕಾಯ್ದೆಯ (Sexual Harassment of Women at Workplace (Prevention, Prohibition and Redressal) Act) ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ದೂರು ದಾಖಲಾತಿ ಮತ್ತು ದಾಖಲಾದ ದೂರುಗಳ ಕ್ರಮಬದ್ಧ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕೆಂದು ಆದೇಶವು ಸೂಚಿಸಿದೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:32 pm, Sun, 29 May 22