ಕೆಮಿಸ್ಟ್ರಿ ಪರೀಕ್ಷೆಯಲ್ಲೇ ಫೇಲ್ ಆಗಿದ್ದರು ನೊಬೆಲ್ ರಸಾಯನಶಾಸ್ತ್ರ ಪ್ರಶಸ್ತಿ ವಿಜೇತ ಮೌಂಗಿ ಬಾವೆಂಡಿ

ನೊಬೆಲ್ ಪ್ರಶಸ್ತಿಗೆ ಭಾಜನರಾಗಿರುವ ಮೌಂಗಿ ಬಾವೆಂಡಿ ಡಿಗ್ರಿಯಲ್ಲಿ ವಿದ್ಯಾರ್ಥಿಯಾಗಿದ್ದಾಗ ತಮ್ಮ ಮೊಟ್ಟಮೊದಲ ರಸಾಯನಶಾಸ್ತ್ರ ಪರೀಕ್ಷೆಯಲ್ಲಿ ಫೇಲ್ ಆಗಿದ್ದರು. ಈ ವಿಷಯವನ್ನು ಅವರೇ ನೆನಪಿಸಿಕೊಂಡಿದ್ದಾರೆ. ನಮ್ಮ ಹಿನ್ನಡೆ ನಮಗೆ ಪಾಠವಾಗಬೇಕು. ಅದು ನಮ್ಮನ್ನು ಕುಗ್ಗಿಸುವಂತಾಗಬಾರದು ಎಂದು ಯುವಜನರಿಗೆ ಸಂದೇಶ ನೀಡಿದ್ದಾರೆ.

ಕೆಮಿಸ್ಟ್ರಿ ಪರೀಕ್ಷೆಯಲ್ಲೇ ಫೇಲ್ ಆಗಿದ್ದರು ನೊಬೆಲ್ ರಸಾಯನಶಾಸ್ತ್ರ ಪ್ರಶಸ್ತಿ ವಿಜೇತ ಮೌಂಗಿ ಬಾವೆಂಡಿ
ಮೌಂಗಿ ಬಾವೆಂಡಿ
Follow us
ಸುಷ್ಮಾ ಚಕ್ರೆ
|

Updated on: Oct 06, 2023 | 1:59 PM

ಅಮೆರಿಕಾದ ಮ್ಯಾಸಚೂಸೆಟ್ಸ್​ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಪ್ರೊಫೆಸರ್ ಮೌಂಗಿ ಬಾವೆಂಡಿ ಅವರಿಗೆ ಈ ವರ್ಷದ ನೊಬೆಲ್ ರಸಾಯನಶಾಸ್ತ್ರ ಪ್ರಶಸ್ತಿ ಲಭಿಸಿದೆ. “ಕ್ವಾಂಟಮ್ ಡಾಟ್ಸ್” ಅನ್ನು ಅಭಿವೃದ್ಧಿಪಡಿಸಲು ಇವರು ಸಹಾಯ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೌಂಗಿ ಬಾವೆಂಡಿ ಅವರಿಗೆ ನೊಬೆಲ್ ರಸಾಯನಶಾಸ್ತ್ರ ಪ್ರಶಸ್ತಿ ನೀಡಲಾಗಿದೆ.

ಕ್ವಾಂಟಮ್ ಕಣಗಳು ಟಿವಿಯ ಪರದೆಗಳು ಮತ್ತು ಎಲ್ಇಡಿ ದೀಪಗಳಲ್ಲಿ ತಮ್ಮ ಬೆಳಕನ್ನು ಹರಿಸುವ ಸಾಮರ್ಥ್ಯ ಹೊಂದಿವೆ. ಕ್ವಾಂಟಮ್ ಡಾಟ್‌ಗಳನ್ನು ಈ ಹಿಂದೆ ಬಣ್ಣದ ಲೈಟ್​ಗಳಿಗೆ ಸಂಶೋಧಕರು ಬಳಸಿದ್ದರು. ಭವಿಷ್ಯದಲ್ಲಿ ಈ ಕಣಗಳು ಎಲೆಕ್ಟ್ರಾನಿಕ್ಸ್, ಸಣ್ಣ ಸಂವೇದಕಗಳು, ಸ್ಲಿಮ್ಮರ್ ಸೌರ ಕೋಶಗಳು ಹಾಗೂ ಕ್ವಾಂಟಮ್ ಸಂವಹನಕ್ಕೂ ಕೊಡುಗೆ ನೀಡಬಹುದು ಎನ್ನಲಾಗಿದೆ. ಗೆಡ್ಡೆಗಳ ಶಸ್ತ್ರಚಿಕಿತ್ಸೆಯ ವೇಳೆಯಲ್ಲೂ ಈ ಕ್ವಾಂಟಮ್ ಕಣಗಳನ್ನು ಬಳಸಬಹುದಾಗಿದೆ.

ಆದರೆ, ನೊಬೆಲ್ ಪ್ರಶಸ್ತಿಗೆ ಭಾಜನರಾಗಿರುವ ಮೌಂಗಿ ಬಾವೆಂಡಿ ಡಿಗ್ರಿಯಲ್ಲಿ ವಿದ್ಯಾರ್ಥಿಯಾಗಿದ್ದಾಗ ತಮ್ಮ ಮೊಟ್ಟಮೊದಲ ರಸಾಯನಶಾಸ್ತ್ರ ಪರೀಕ್ಷೆಯಲ್ಲಿ ಫೇಲ್ ಆಗಿದ್ದರು. ಈ ವಿಷಯವನ್ನು ಅವರೇ ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: Nobel Prize in Chemistry 2023: ಕ್ವಾಂಟಮ್ ಡಾಟ್‌ಗಳ ಅನ್ವೇಷಣೆ, ಸಂಶ್ಲೇಷಣೆಗಾಗಿ ಮೂವರಿಗೆ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ

62 ವರ್ಷ ವಯಸ್ಸಿನ ಮೌಂಗಿ ಬಾವೆಂಡಿ ಪ್ರೌಢಶಾಲೆಯಲ್ಲಿ ವಿಜ್ಞಾನದಲ್ಲಿ ಉತ್ತಮ ಅಂಕ ಪಡೆದು ಸಾಧನೆ ಮಾಡಿದ್ದರು. ಆದರೆ, ಅವರು 1970ರ ದಶಕದ ಅಂತ್ಯದಲ್ಲಿ ಪದವಿಪೂರ್ವ ವಿದ್ಯಾರ್ಥಿಯಾಗಿ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಆಗಮಿಸಿದಾಗ ಶೈಕ್ಷಣಿಕವಾಗಿ ಹಿಂದುಳಿದರು. ನಾನು ಪರೀಕ್ಷೆಗಳಿಗೆ ಅಧ್ಯಯನ ಮಾಡಿದ್ದರೂ ಪರೀಕ್ಷೆಯ ಹಾಲ್‌ನ ಅಗಾಧ ಗಾತ್ರ ನೋಡಿ ಭಯಭೀತನಾಗಿದ್ದೆ ಎಂದು ಹೇಳಿದ್ದಾರೆ.

ನಾನು ಪರೀಕ್ಷೆಯಲ್ಲಿ ಮೊದಲ ಪ್ರಶ್ನೆಯನ್ನು ನೋಡಿದೆ. ನನಗೆ ಅದರ ಉತ್ತರ ಗೊತ್ತಾಗಲಿಲ್ಲ. ನಂತರ ಎರಡನೆಯ ಪ್ರಶ್ನೆಯನ್ನು ನೋಡಿದೆ. ಅದಕ್ಕೂ ಉತ್ತರ ಹೊಳೆಯಲಿಲ್ಲ. ಕೊನೆಗೆ ಆ ಪರೀಕ್ಷೆಯಲ್ಲಿ ರಸಾಯನಶಾಸ್ತ್ರದಲ್ಲಿ ನಾನು 100ಕ್ಕೆ 20 ಅಂಕಗಳನ್ನು ಗಳಿಸಿದೆ. ಇದು ನಮ್ಮ ಇಡೀ ತರಗತಿಯಲ್ಲಿ ಪಡೆದ ಅತ್ಯಂತ ಕಡಿಮೆ ಅಂಕವಾಗಿತ್ತು ಎಂದು ಹಳೆಯ ದಿನಗಳನ್ನು ಅವರು ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: Nobel Prize In Literature 2023: ನಾರ್ವೆ ಲೇಖಕ ಜಾನ್ ಫಾಸ್ಸೆಗೆ ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ

ಆಗ ನಾನು ಯೋಚಿಸಿದೆ, ‘ಓ ದೇವರೇ, ಇದು ನನ್ನ ಅಂತ್ಯ. ನಾನು ಇಲ್ಲಿ ಏನು ಮಾಡುತ್ತಿದ್ದೇನೆ?” ಎಂದು ಬಹಳ ತಲೆಕೆಡಿಸಿಕೊಂಡೆ. ನನಗೆ ರಸಾಯನಶಾಸ್ತ್ರ ಇಷ್ಟವಿತ್ತು. ಆದರೆ, ಪರೀಕ್ಷೆಗೆ ಹೇಗೆ ತಯಾರಾಗಬೇಕೆಂಬುದನ್ನು ನಾನು ಕಲಿತಿರಲಿಲ್ಲ. ಅದನ್ನು ಸರಿಪಡಿಸಿಕೊಳ್ಳಲು ನಾನು ನಿರ್ಧರಿಸಿದೆ. ಮುಂದೆ ನಾನು ಹೇಗೆ ಅಧ್ಯಯನ ಮಾಡಬೇಕೆಂದು ಕಂಡುಕೊಂಡೆ. ಆ ಬಗ್ಗೆ ನನಗೆ ಮೊದಲು ತಿಳಿದಿರಲಿಲ್ಲ. ಅದಾದ ನಂತರ ಎಲ್ಲ ತರಗತಿಗಳಲ್ಲೂ ಪ್ರತಿ ಪರೀಕ್ಷೆಯಲ್ಲಿ ನಾನು 100ಕ್ಕೆ 100ರ ಹತ್ತಿರ ಅಂಕ ಪಡೆಯಲಾರಂಭಿಸಿದೆ ಎಂದು ಬಾವೆಂಡಿ ತಿಳಿಸಿದ್ದಾರೆ.

ನಮ್ಮ ಹಿನ್ನಡೆ ನಮಗೆ ಪಾಠವಾಗಬೇಕು. ಅದು ನಮ್ಮನ್ನು ಕುಗ್ಗಿಸುವಂತಾಗಬಾರದು ಎಂದು ಯುವಜನರಿಗೆ ನಾನು ಸಂದೇಶ ನೀಡುತ್ತಿದ್ದೇನೆ ಎಂದು ಬಾವೆಂಡಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ