Noida Supertech Twin Towers ನೆಲಸಮವಾಯ್ತು ನೋಯ್ಡಾದ ಅವಳಿ ಕಟ್ಟಡ, ವಿಡಿಯೊ ನೋಡಿ

| Updated By: ರಶ್ಮಿ ಕಲ್ಲಕಟ್ಟ

Updated on: Aug 28, 2022 | 3:23 PM

ಅವಳಿ ಕಟ್ಟಡಗಳ ಪೈಕಿ ಒಂದಾಗಿರುವ ‘ಅಪೆಕ್ಸ್ ಟವರ್ (Apex Tower) 32 ಹಾಗೂ ಸಯಾನಿ (Ceyane) 29 ಮಹಡಿಗಳನ್ನು ಹೊಂದಿದೆ.  ಅಪೆಕ್ಸ್​ ಟವರ್​ನ ಎತ್ತರ 103 ಮೀಟರ್ ಇದೆ. ಸಯಾನಿ 97 ಮೀಟರ್ ಎತ್ತರವಿದೆ.

Noida Supertech Twin Towers ನೆಲಸಮವಾಯ್ತು ನೋಯ್ಡಾದ ಅವಳಿ ಕಟ್ಟಡ, ವಿಡಿಯೊ ನೋಡಿ
ನೆೆಲಸಮವಾದ ಅವಳಿ ಕಟ್ಟಡ
Follow us on

ದೇಶದ ಗಮನ ಸೆಳೆದಿದ್ದ ನೋಯ್ಡಾದ ‘ಸೂಪರ್​ಟೆಕ್ ಅವಳಿ ಕಟ್ಟಡ’ಗಳ (Noida Supertech Twin Towers) ನೆಲಸಮ ಕಾರ್ಯಾಚರಣೆ ಇಂದು ಮಧ್ಯಾಹ್ನ 2.30ಕ್ಕೆ ನಡೆದಿದೆ.  ಅವಳಿ ಕಟ್ಟಡಗಳ ಪೈಕಿ ಒಂದಾಗಿರುವ ‘ಅಪೆಕ್ಸ್ ಟವರ್ (Apex Tower) 32 ಹಾಗೂ ಸಯಾನಿ (Ceyane) 29 ಮಹಡಿಗಳನ್ನು ಹೊಂದಿದೆ.  ಅಪೆಕ್ಸ್​ ಟವರ್​ನ ಎತ್ತರ 103 ಮೀಟರ್ ಇದೆ. ಸಯಾನಿ 97 ಮೀಟರ್ ಎತ್ತರವಿದೆ. ಈ ಕಟ್ಟಡಗಳನ್ನು ಕೆಡವುವ ಗುತ್ತಿಗೆ ಪಡೆದಿರುವ ಎಡಿಫಿಸ್ ಎಂಜಿನಿಯರಿಂಗ್ ಡೆಮಾಲಿಶನ್ ಕಂಪನಿಯು ದಕ್ಷಿಣ ಆಫ್ರಿಕಾದ ತಜ್ಞರ ನೆರವು ಪಡೆದಿದೆ. ದಕ್ಷಿಣ ಆಫ್ರಿಕಾದ ರಾಜಧಾನಿ ಜೊಹನ್ಸ್​​ಬರ್ಗ್​ನಲ್ಲಿ ಮೂರು ವರ್ಷಗಳ ಹಿಂದೆ 108 ಮೀಟರ್ ಎತ್ತರದ ಬ್ಯಾಂಕ್ ಕಟ್ಟಡವನ್ನು ಕೆಡವಿದ ಕಾರ್ಯಾಚರಣೆಯಲ್ಲಿ ಇವರು ಪಾಲ್ಗೊಂಡಿದ್ದರು. ಕೇರಳದಲ್ಲಿ 2020ರಲ್ಲಿ 68 ಮೀಟರ್ ಎತ್ತರದ ಕಟ್ಟಡ ಕೆಡವಿರುವುದು ಈವರೆಗಿನ ಅತಿದೊಡ್ಡ ಕಾರ್ಯಾಚರಣೆಯಾಗಿತ್ತು. ವಿಶ್ವದ ಅತಿದೊಡ್ಡ ಕಟ್ಟಡ ಕೆಡವುವ ಕಾರ್ಯಾಚರಣೆ ನಡೆದಿರುವ ಅಬುದಾಭಿಯಲ್ಲಿ. ಅಲ್ಲಿ 168 ಮೀಟರ್ ಎತ್ತರದ ಕಟ್ಟಡ ಕೆಡವಲಾಗಿತ್ತು.

ತಿಂಗಳುಗಟ್ಟಲೆ ಸಿದ್ಧತೆ ಮತ್ತು ಯೋಜನೆಯ ನಂತರ ನೊಯ್ಡಾದ ಬಹುಮಹಡಿ ಸೂಪರ್‌ಟೆಕ್ ಅವಳಿ ಗೋಪುರಗಳನ್ನು ಭಾನುವಾರ (ಆಗಸ್ಟ್ 28) ಮಧ್ಯಾಹ್ನ 2.30 ಕ್ಕೆ ಕೆಡವಲಾಯಿತು.   ಕೇವಲ 9 ಸೆಕೆಂಡುಗಳಲ್ಲಿ ಕಟ್ಟಡ ನೆಲಸಮವಾಗಿದೆ.

ಇದನ್ನೂ ಓದಿ
Supertech Noida Twin Towers ನೋಯ್ಡಾದ ಸೂಪರ್​​ಟೆಕ್ ಅವಳಿ ಕಟ್ಟಡಗಳ ನೆಲಸಮ ಕಾರ್ಯಾಚರಣೆಗೆ ಕ್ಷಣಗಣನೆ; ಕೆಡವಲು 9 ಸೆಕೆಂಡ್ ಸಾಕು
Noida Supertech: 9 ಸೆಕೆಂಡ್​ನಲ್ಲಿ ಧರೆಗುರುಳಲಿದೆ 337 ಅಡಿ ಎತ್ತರದ ಕಟ್ಟಡ, ಭಾರತದ ಬೃಹತ್ ಕಾರ್ಯಾಚರಣೆಯ ಅತಿಮುಖ್ಯ ಅಂಕಿಅಂಶಗಳಿವು

ಕಟ್ಟಡ ಧ್ವಂಸಗೊಳಿಸಿದ್ದೇಕೆ?

ಕಳೆದ ವರ್ಷ (ಆಗಸ್ಟ್ 31, 2021) ಈ ಸಂಬಂಧ ಸುಪ್ರೀಂಕೋರ್ಟ್ ಅಂತಿಮ ಆದೇಶ ನೀಡಿತ್ತು. ‘ಸೂಪರ್​ಟೆಕ್ ಎಮರಾಲ್ಡ್​ ಕೋರ್ಟ್​’ ಸೊಸೈಟಿಯ ನಿವಾಸಿಗಳು ಮೊದಲ ಬಾರಿಗೆ 2012ರಲ್ಲಿ ನ್ಯಾಯಾಲಯದ ಕದ ತಟ್ಟಿದ್ದರು. ಪರಿಷ್ಕೃತ ಯೋಜನೆಯ ಪ್ರಕಾರ ಮಾರ್ಪಡಿಸಿದ ನಂತರ ಅವಳಿ ಕಟ್ಟಡಗಳನ್ನು ಜನರ ವಾಸಕ್ಕೆ ಬಿಟ್ಟುಕೊಡಲಾಗಿತ್ತು. ಅನುಮೋದನೆ ಕೊಡುವಾಗಲೂ ಹಲವು ಅಕ್ರಮಗಳು ನಡೆದಿವೆ ಎಂದು ನಿವಾಸಿಗಳು ಆರೋಪಿಸಿದ್ದರು. ಕೆಲ ಅಧಿಕಾರಿಗಳಿಗೆ ಶಿಕ್ಷೆಯೂ ಆಗಿತ್ತು. 2014ರಲ್ಲಿ ಅಲಹಾಬಾದ್ ಹೈಕೋರ್ಟ್​ ಕಟ್ಟಡ ಕೆಡವಲು ಆದೇಶಿಸಿತ್ತು. ನಂತರ ಸುಪ್ರೀಂಕೋರ್ಟ್​ನಲ್ಲಿ ಸುದೀರ್ಘ ವಿಚಾರಣೆ ನಡೆಯಿತು. ಮೂರು ತಿಂಗಳಲ್ಲಿ ಕಟ್ಟಡ ಕೆಡವಬೇಕೆಂದು ಸುಪ್ರೀಂಕೋರ್ಟ್​​ ಆಗಸ್ಟ್ 31, 2021ರಲ್ಲಿ ತೀರ್ಪು ನೀಡಿತ್ತು. ತಾಂತ್ರಿಕ ಕಾರಣಗಳಿಂದಾಗಿ ಕಟ್ಟಡ ಕೆಡವುವ ಕಾರ್ಯಾಚರಣೆ 1 ವರ್ಷ ತಡವಾಯಿತು.

ಮುಂದಿನ ಸವಾಲು

ಧ್ವಂಸಗೊಳಿಸುವಿಕೆ,  ಕಟ್ಟಡ ಕೆಡವಿದಾಗ ಉಂಟಾಗುವ ಅವಶೇಷ ಸ್ವಚ್ಛಗೊಳಿಸುವುದು ನೋಯ್ಡಾ ಅಧಿಕಾರಿಗಳಿಗಿರುವ ಮುಂದಿನ ಸವಾಲು ಆಗಿದೆ. ಅವಶೇಷಗಳನ್ನು ತೆರವುಗೊಳಿಸಲು ಮೂರು ತಿಂಗಳು ಬೇಕಾಗಬಹುದು. ತ್ಯಾಜ್ಯವನ್ನು ನಿಗದಿತ ಜಾಗದಲ್ಲಿ ಸುರಿಯಲಾಗುವುದು.  ಸ್ಫೋಟದ ಗಂಟೆಗಳ ಮುಂಚೆಯೇ ಅಲ್ಲಿದ್ದ ನಿವಾಸಿಗಳನ್ನು ಸ್ಥಳಾಂತರಿಸಲಾಯಿತು. ಯಾವುದೇ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಸಂಚಾರ ಮಾರ್ಗಗಳನ್ನು ಯೋಜಿಸಲಾಗಿದೆ ಮತ್ತು ಮಾರ್ಗಸೂಚಿಗಳನ್ನು ಹಾಕಲಾಗಿದೆ.

ಹೀಗಿತ್ತು ಕಾರ್ಯಾಚರಣೆ

ಎರಡು ಟವರ್‌ಗಳಲ್ಲಿ 3,700 ಕೆಜಿ ಸ್ಫೋಟಕಗಳನ್ನು ಸಜ್ಜುಗೊಳಿಸಲಾಗಿತ್ತು. ಕಟ್ಟಡಗಳ ಕಂಬಗಳಲ್ಲಿನ ಸುಮಾರು 7,000 ರಂಧ್ರಗಳಲ್ಲಿ ಸ್ಫೋಟಕಗಳನ್ನು ಇರಿಸಿದ್ದು  20,000 ಸರ್ಕ್ಯೂಟ್‌ಗಳನ್ನು ಹೊಂದಿಸಲಾಗಿದೆ. “waterfall technique” ಎಂದು ಕರೆಯಲ್ಪಡುವ ತಂತ್ರದಿಂದ  ಕಟ್ಟಡಗಳು ಕುಸಿದು ನೇರವಾಗಿ ಕೆಳಗೆ ಬೀಳುವಂತೆ ಖಚಿತಪಡಿಸಿಕೊಳ್ಳಲು ಸ್ಫೋಟವನ್ನು ಯೋಜಿಸಲಾಗಿತ್ತು.

ಈ ಪ್ರದೇಶದ ಸುಮಾರು 7,000 ನಿವಾಸಿಗಳನ್ನು ಇಂದು ಬೆಳಿಗ್ಗೆ ಸ್ಥಳಾಂತರಿಸಲಾಯಿತು. ಅಕ್ಕಪಕ್ಕದ ಕಟ್ಟಡಗಳಲ್ಲಿ ಗ್ಯಾಸ್ ಮತ್ತು ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ. ಸಂಜೆ 4 ಗಂಟೆಗೆ ಅವುಗಳನ್ನು ಪುನಃಸ್ಥಾಪಿಸಲಾಗುತ್ತದೆ ಮತ್ತು ನಿವಾಸಿಗಳಿಗೆ ಸಂಜೆ 5.30 ರೊಳಗೆ ಹಿಂತಿರುಗಲು ಅನುಮತಿಸಲಾಗುತ್ತದೆ. ಧೂಳಿನಿಂದ ರಕ್ಷಣೆ ಪಡೆಯಲು  ತಮ್ಮ ಮನೆಗಳಿಗೆ ಹಿಂತಿರುಗಲು ಅನುಮತಿಸಿದಾಗ ಮನೆಯೊಳಗೆ ಮಾಸ್ಕ್ ಧರಿಸಲು ಹೇಳಲಾಗಿದೆ.

ಕಟ್ಟಡ ಕೆಡವುವ ಕಾರ್ಯಾಚರಣೆಗಾಗಿ ₹ 100 ಕೋಟಿ ಮೊತ್ತದ ಬಜೆಟ್​ ಕಾಮಗಾರಿ ನಡೆಯಲಿದೆ. ಕೆಡವುವಾಗ ಅಕ್ಕಪಕ್ಕದ ಕಟ್ಟಡಗಳಿಗೆ ಆಗುವ ಹಾನಿಯನ್ನೂ ಭರಿಸಬೇಕಿದೆ. ಈ ವೆಚ್ಚಗಳನ್ನು ಸೂಪರ್​ಟೆಕ್ ಕಂಪನಿಯೇ ಭರಿಸಬೇಕಿದೆ. ಕೆಡವುವ ಕಾರ್ಯಾಚರಣೆಗೆ ₹ 20 ಕೋಟಿ ಖರ್ಚಾದರೆ, ಕಟ್ಟಡದ ಅಸ್ಥಿಪಂಜರದಂಥ ಆಕೃತಿ ಕೆಡವಲು ₹ 50 ಕೋಟಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

Published On - 2:44 pm, Sun, 28 August 22