ಸಚಿವ ಸಂಪುಟದಲ್ಲಿ ಮಂತ್ರಿಗಳ ಸಂಖ್ಯೆ ಹೆಚ್ಚಾಗಿದೆ; ಕೊರೊನಾ ಲಸಿಕೆ ಸಂಖ್ಯೆ ಏರಿಕೆಯಾಗಿಲ್ಲ: ರಾಹುಲ್ ಗಾಂಧಿ ಟೀಕೆ
ಕೆಲವು ದಿನಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಸಂಪುಟಕ್ಕೆ 43 ನೂತನ ಸಚಿವರ ಸೇರ್ಪಡೆಯಾಗಿತ್ತು. ಆ ಮೂಲಕ, ಸಂಪುಟದ ಒಟ್ಟು ಸಚಿವರ ಸಂಖ್ಯೆ 77ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.
ದೆಹಲಿ: ಕೇಂದ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಕಾಂಗ್ರೆಸ್ ನಾಯಕ ಹಾಗೂ ಸಂಸದರೂ ಆಗಿರುವ ರಾಹುಲ್ ಗಾಂಧಿ ಇಂದು (ಜುಲೈ 11) ಟೀಕಾಪ್ರಹಾರ ಮಾಡಿದ್ದಾರೆ. ಕೇಂದ್ರ ಸರ್ಕಾರದ ಮಂತ್ರಿಗಳ ಪಟ್ಟಿ ಹೆಚ್ಚುತ್ತಾ ಇದೆ ಆದರೆ, ಕೊರೊನಾ ವಿರುದ್ಧದ ಲಸಿಕೆ ಸಂಖ್ಯೆ ಹೆಚ್ಚಾಗುತ್ತಿಲ್ಲ, ಏರಿಕೆಯಾಗುತ್ತಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಪ್ರತಿನಿತ್ಯ ನೀಡಲಾಗುತ್ತಿರುವ ಸರಾಸರಿ ಲಸಿಕೆಯ ಪಟ್ಟಿಯನ್ನೂ ಹಂಚಿಕೊಂಡಿರುವ ಅವರು, ಡಿಸೆಂಬರ್ 2021ರ ಒಳಗಾಗಿ ವಯಸ್ಕರಿಗೆ ಲಸಿಕೆ ನೀಡುವ ಗುರಿಯಿಂದ ದೇಶ ಹಿಂದುಳಿದಿರುವ ಬಗ್ಗೆ ತಿಳಿಸಿದ್ದಾರೆ. ಸಚಿವ ಸಂಪುಟದಲ್ಲಿ ಮಂತ್ರಿಗಳ ಸಂಖ್ಯೆ ಹೆಚ್ಚಾಗಿದೆ. ಆದರೆ, ಲಸಿಕೆಯದ್ದಲ್ಲ ಎಂದು ರಾಹುಲ್ ಗಾಂಧಿ ತಮ್ಮ ಟ್ವೀಟ್ ಮೂಲಕ ಹೇಳಿದ್ದಾರೆ. ಲಸಿಕೆ ಎಲ್ಲಿದೆ (WhereAreVaccines) ಎಂಬ ಹ್ಯಾಷ್ ಟ್ಯಾಗ್ ಬಳಸಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಸಂಪುಟಕ್ಕೆ 43 ನೂತನ ಸಚಿವರ ಸೇರ್ಪಡೆಯಾಗಿತ್ತು. ಆ ಮೂಲಕ, ಸಂಪುಟದ ಒಟ್ಟು ಸಚಿವರ ಸಂಖ್ಯೆ 77ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.
ಅವರು ಹಂಚಿಕೊಂಡಿರುವ ಚಾರ್ಟ್ನಲ್ಲಿ ಡಿಸೆಂಬರ್ 2021ರ ಒಳಗಾಗಿ ದೇಶದ ಶೇಕಡಾ 60ರಷ್ಟು ಜನರಿಗೆ ಎರಡೂ ಡೋಸ್ ಲಸಿಕೆ ನೀಡುವ ಗುರಿ ಹೊಂದಿರುವ ಮಾಹಿತಿ ಇದೆ. ಜೊತೆಗೆ, ಇದಕ್ಕೆ ದಿನಕ್ಕೆ 8.8 ಮಿಲಿಯನ್ ಜನತೆಗೆ ಲಸಿಕೆ ನೀಡಿಕೆ ಆಗಬೇಕಾಗಿದೆ.
ಆದರೆ, ಕಳೆದ ಒಂದು ವಾರದ ಸರಾಸರಿ ಲಸಿಕೆ ನೀಡಿಕೆಯ ವಿವರದಂತೆ ಪ್ರತಿನಿತ್ಯ 3.4 ಮಿಲಿಯನ್ ಜನತೆಗೆ ಮಾತ್ರ ಲಸಿಕೆ ನೀಡಲಾಗುತ್ತಿದೆ. ಅಂದರೆ, ದಿನನಿತ್ಯದ ಲಸಿಕೆ ವಿತರಣೆಯಲ್ಲಿ 5.4 ಮಿಲಿಯನ್ನಷ್ಟು ಜನಸಂಖ್ಯೆಗೆ ಲಸಿಕೆ ನೀಡಿಕೆ ಹಿಂದುಳಿದಿದೆ. ಜುಲೈ 10ರಂದು 3.7 ಮಿಲಿಯನ್ ಜನರಿಗೆ ಲಸಿಕೆ ನೀಡಲಾಗಿದೆ. ಅದರಂತೆ 5.1 ಮಿಲಿಯನ್ ಜನರಿಗೆ ಲಸಿಕೆ ನೀಡಿಕೆ ಕಡಿಮೆಯಾದಂತಾಗಿದೆ.
ದೇಶದಲ್ಲಿ ಕೊರೊನಾ ಲಸಿಕೆ ನೀಡಿಕೆ ನಿಧಾನಗತಿಯಿಂದ ಸಾಗುತ್ತಿರುವುದನ್ನು ಕಾಂಗ್ರೆಸ್ ಸತತವಾಗಿ ವಿರೋಧಿಸುತ್ತಿದೆ. ಲಸಿಕೆ ನೀಡಿಕೆಗೆ ವೇಗ ನೀಡುವಂತೆ ಕೇಂದ್ರ ಸರ್ಕಾರವನ್ನು ಎಚ್ಚರಿಸುತ್ತಿದೆ. ಕೊರೊನಾ ಸೋಂಕು ಹರಡುವಿಕೆಯನ್ನು ಹಾಗೆ ಮಾತ್ರ ತಡೆಗಟ್ಟಬಹುದು ಎಂದು ಕಾಂಗ್ರೆಸ್ ಹೇಳುತ್ತಿದೆ.
ಕಾಂಗ್ರೆಸ್ನ ಲಸಿಕೆ ವಿಚಾರದ ಟೀಕೆಗೆ ಬಿಜೆಪಿ ಪಕ್ಷವೂ ತಿರುಗೇಟು ನೀಡಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿಯೂ ಲಸಿಕೆ ನೀಡಿಕೆ ನಿಧಾನಗತಿಯಲ್ಲೇ ಸಾಗುತ್ತಿದೆ ಎಂದು ಬಿಜೆಪಿ ಹೇಳಿದೆ.
ಇದನ್ನೂ ಓದಿ: ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆ ಭರವಸೆ ಹುಸಿ; 10 ಕೋಟಿ ಬದಲು ಕೇವಲ 2.6 ಕೋಟಿ ಡೋಸ್ ಲಸಿಕೆ ಉತ್ಪಾದನೆ
Rafale deal ನರೇಂದ್ರ ಮೋದಿ ಸರ್ಕಾರ ಜೆಪಿಸಿ ತನಿಖೆಗೆ ಸಿದ್ಧವಿಲ್ಲ ಯಾಕೆ: ರಾಹುಲ್ ಗಾಂಧಿ
Published On - 9:05 pm, Sun, 11 July 21