ಭಾರತದ ಚಹಾ ರಫ್ತು ಪ್ರಮಾಣ 2021ರಲ್ಲಿ ಶೇಕಡಾ 15ರಷ್ಟು ಇಳಿಕೆ ಸಾಧ್ಯತೆ; ಕಾರಣವೇನು?
ದಕ್ಷಿಣ ಭಾರತದಿಂದ ರಫ್ತು ಆಗುತ್ತಿರುವ ಚಹಾ ಪ್ರಮಾಣಕ್ಕೆ ಹೋಲಿಕೆ ಮಾಡಿದರೆ ಉತ್ತರ ಭಾರತದಿಂದ ರಫ್ತಾಗುತ್ತಿರುವ ಚಹಾ ಪ್ರಮಾಣ ಕಡಿಮೆ ಇದೆ. ಕಳೆದ ಮೂರು ವರ್ಷಗಳಿಂದ ಈ ಮಾದರಿಯ ಅಂಕಿಅಂಶ ದಾಖಲಾಗಿದೆ.
ದೆಹಲಿ: ಭಾರತದ ಚಹಾ ಉದ್ಯಮವು 2021ರಲ್ಲಿ ಭಾರೀ ಇಳಿಮುಖವಾಗಿ ಸಾಗುವ ಸಾಧ್ಯತೆ ಇದೆ ಎಂದು ಮೂಲಗಳ ಮಾಹಿತಿ ಲಭ್ಯವಾಗಿದೆ. ಚಹಾ ರಫ್ತು ಪ್ರಮಾಣದಲ್ಲಿ ಇಳಿಕೆಯಾಗಲಿದೆ. 2020ನೇ ಇಸವಿಗೆ ಹೋಲಿಸಿದರೆ ಈ ವರ್ಷ ಚಹಾ ರಫ್ತು ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ವಿವಿಧ ವಿಧದ ಚಹಾ ಲಭ್ಯತೆ ಹಾಗೂ ಕೊರೊನಾ ಕಾರಣದಿಂದ ವ್ಯಾಪಾರ ವಹಿವಾಟಿನ ಮೇಲೆ ನಿರ್ಬಂಧಗಳ ಕಾರಣದಿಂದ ಈ ಏರುಪೇರು ಸಂಭವಿಸಲಿದೆ ಎಂದು ಹೇಳಲಾಗಿದೆ.
ಕೊವಿಡ್-19 ಪಿಡುಗು ಜಾಗತಿಕವಾಗಿ ಬಹುತೇಕ ಎಲ್ಲಾ ದೇಶಗಳ ಮೇಲೂ ಋಣಾತ್ಮಕ ಪ್ರಭಾವ ಬೀರಿರುವುದರಿಂದಲೂ ಚಹಾ ಮಾರುಕಟ್ಟೆ ಕುಸಿದಿದೆ ಎಂದು ಮಾಹಿತಿ ಲಭ್ಯವಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷದ ಜನವರಿಯಿಂದ ಮಾರ್ಚ್ ಅವಧಿಯಲ್ಲಿ ಶೇಕಡಾ 13.23ರಷ್ಟು ಪ್ರಮಾಣದ ಚಹಾ ರಫ್ತು ಕುಸಿತ ಕಂಡಿದೆ. ಹಾಗೂ 2019ಕ್ಕೆ ಹೋಲಿಕೆ ಮಾಡಿದರೆ ಚಹಾ ರಫ್ತು ಪ್ರಮಾಣ ಶೇಕಡಾ 29.03ರಷ್ಟು ಇಳಿಮುಖವಾಗಿದೆ. ಟೀ ಬೋರ್ಡ್ ಇಂಡಿಯಾದ ಅಧಿಕೃತ ಅಂಕಿಅಂಶಗಳು ಈ ಮಾಹಿತಿ ಸೂಚಿಸುತ್ತಿವೆ.
ಈ ವರ್ಷದ (2021) ಜನವರಿಯಿಂದ ಮಾರ್ಚ್ ಅವಧಿಯಲ್ಲಿ 45.86 ಮಿಲಿಯನ್ ಕೆಜಿಗಳಷ್ಟು ಚಹಾ ರಫ್ತು ಮಾಡಲಾಗಿದೆ. 2020ರಲ್ಲಿ ಈ ಪ್ರಮಾಣ 52.85 ಮಿಲಿಯನ್ ಕೆಜಿಯಷ್ಟು ಇತ್ತು. ಹಾಗೂ 2019ರಲ್ಲಿ 64.62 ಮಿಲಿಯನ್ ಕೆಜಿಯಷ್ಟು ಇತ್ತು.
ದಕ್ಷಿಣ ಭಾರತದಿಂದ ರಫ್ತು ಆಗುತ್ತಿರುವ ಚಹಾ ಪ್ರಮಾಣಕ್ಕೆ ಹೋಲಿಕೆ ಮಾಡಿದರೆ ಉತ್ತರ ಭಾರತದಿಂದ ರಫ್ತಾಗುತ್ತಿರುವ ಚಹಾ ಪ್ರಮಾಣ ಕಡಿಮೆ ಇದೆ. ಕಳೆದ ಮೂರು ವರ್ಷಗಳಿಂದ ಈ ಮಾದರಿಯ ಅಂಕಿಅಂಶ ದಾಖಲಾಗಿದೆ.
ದಕ್ಷಿಣ ಭಾರತದಿಂದ ಆಗುತ್ತಿರುವ ಚಹಾ ರಫ್ತು ಪ್ರಮಾಣ ಶೇಕಡಾ 5.41ರಷ್ಟು ಇಳಿಕೆ ಕಂಡಿದೆ. 2020ರ ಜನವರಿಯಿಂದ ಮಾರ್ಚ್ ಅವಧಿಗೆ ಹೋಲಿಸಿದರೆ 2021ರ ಜನವರಿ ಹಾಗೂ ಮಾರ್ಚ್ ಅವಧಿಯಲ್ಲಿ ಈ ವ್ಯತ್ಯಾಸ ಉಂಟಾಗಿದೆ. 2019ಕ್ಕೆ ಹೋಲಿಕೆ ಮಾಡಿದರೆ ಈ ಅವಧಿಯ ಚಹಾ ರಫ್ತು ಪ್ರಮಾಣದಲ್ಲಿ ಶೇಕಡಾ 25.85ರಷ್ಟು ಇಳಿಕೆಯಾಗಿದೆ.
ಉತ್ತರ ಭಾರತದ ಮೂರು ತಿಂಗಳ ಚಹಾ ರಫ್ತು ಪ್ರಮಾಣ, 2020ಕ್ಕೆ ಹೋಲಿಸಿದರೆ ಶೇಕಡಾ 17.83ರಷ್ಟು ಇಳಿಕೆಯಾಗಿದೆ. 2019ಕ್ಕೆ ಹೋಲಿಸಿದರೆ ಇದೇ ಸಮಯದ ಚಹಾ ರಫ್ತು ಪ್ರಮಾಣ ಶೇಕಡಾ 31.04ರಷ್ಟು ಕಡಿಮೆ ಆಗಿದೆ.
ಕೀನ್ಯಾ ಹಾಗೂ ಶ್ರೀಲಂಕಾದ ಕಡಿಮೆ ಬೆಲೆಯ ಚಹಾದ ಮುಂದೆ ಭಾರತದ ಚಹಾ ರಫ್ತು ಪ್ರಮಾಣ ಕಳೆದ ಮೂರು ವರ್ಷಗಳಿಂದ ಇಳಿಕೆಯಾಗಿದೆ. ಈ ಬಗ್ಗೆ ಗುವಹಾಟಿ ಟೀ ಆಕ್ಷನ್ ಬಯರ್ಸ್ ಅಸೋಸಿಯೇಷನ್ (GTABA) ಕಾರ್ಯದರ್ಶಿ ದಿನೇಶ್ ಬಿಹಾನಿ ಹೇಳಿದ್ದಾರೆ.
ಇದನ್ನೂ ಓದಿ: ಸಂಸ್ಕರಿಸಿದ ಹಾಗೂ ಸಾವಯವ ಪ್ರಮಾಣೀಕೃತ ಹಲಸಿನ ಹಣ್ಣು ಬೆಂಗಳೂರಿನಿಂದ ಜರ್ಮನಿಗೆ ರಫ್ತು
Curry Leaves: ಕರಿಬೇವಿನ ಚಹಾ ಮಾಡಿ ಸವಿಯಿರಿ; ಇದರಲ್ಲಿರುವ ಔಷಧೀಯ ಗುಣ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ