ಮಕ್ಕಳ ಸ್ನೇಹಿ ಪೊಲೀಸ್ ಠಾಣೆಗಳ ಸ್ಥಾಪನೆಗೆ ಒಡಿಶಾ ಸರ್ಕಾರ ನಿರ್ಧಾರ
ಒಡಿಶಾ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ತಲಾ ಒಂದು ಮಕ್ಕಳ ಸ್ನೇಹಿ ಪೊಲೀಸ್ ಠಾಣೆ ನಿರ್ಮಿಸಲು ಮುಖ್ಯಮಂತ್ರಿ ನವೀನ್ ಪಟ್ನಾಹಕ್ ಆದೇಶಿಸಿದ್ದಾರೆ
ಭುವನೇಶ್ವರ: ಒಡಿಶಾದ ವಿವಿಧೆಡೆ 34 ಮಕ್ಕಳ ಸ್ನೇಹಿ ಪೊಲೀಸ್ ಠಾಣೆ ನಿರ್ಮಿಸಲು ಒಡಿಶಾ ಸರ್ಕಾರ ನಿರ್ಧರಿಸಿದೆ. ವಿವಿಧ ಕಾರಣಗಳಿಂದ ಪೊಲೀಸ್ ಠಾಣೆಗೆ ಭೇಟಿ ನೀಡಬೇಕಾಗುವ ಮಕ್ಕಳ ಮೇಲೆ ಮಾನಸಿಕ ಒತ್ತಡ ಹೆಚ್ಚಾಗಬಾರದು ಎಂದು ಹೇಳಿರುವ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಪ್ರತಿ ಪೊಲೀಸ್ ಜಿಲ್ಲೆಗಳಲ್ಲೂ ಒಂದೊಂದು ಮಕ್ಕಳ ಸ್ನೇಹಿ ಪೊಲೀಸ್ ಠಾಣೆ ನಿರ್ಮಿಸಲು ಆದೇಶಿಸಿದ್ದಾರೆ. ಒಡಿಶಾದ ಗೃಹ ಇಲಾಖೆಯನ್ನೂ ಮುಖ್ಯಮಂತ್ರಿಯೇ ನಿರ್ವಹಿಸಿದ್ದಾರೆ.
ಪ್ರತಿಯೊಂದು ಮಕ್ಕಳ ಸ್ನೇಹಿ ಪೊಲೀಸ್ ಠಾಣೆಯಲ್ಲಿಯೂ ಮಂಚಗಳು, ಕುರ್ಚಿಗಳು, ಮೇಜು, ಗೊಂಬೆ ಮತ್ತು ಪ್ರಥಮ ಚಿಕಿತ್ಸೆ ಪೆಟ್ಟಿಗೆಗಳನ್ನು ಹೊಂದಿರುತ್ತದೆ. ಗೋಡೆಗಳಲ್ಲಿ ಅಗತ್ಯ ಮಾಹಿತಿ ನೀಡುವ ಪೋಸ್ಟರ್ಗಳು ಮತ್ತು ಚಿತ್ರಗಳನ್ನೂ ಪೊಲೀಸ್ ಠಾಣೆಗಳಲ್ಲಿ ಅಳವಡಿಸಲಾಗುವುದು ಎಂದು ಮುಖ್ಯಮಂತ್ರಿ ಕಚೇರಿ ಪ್ರಕಟಣೆ ತಿಳಿಸಿದೆ.
ಸಹಾಯ ಪಡೆಯಲು ಅಥವಾ ಕಾನೂನಿನ ಕಾರಣಗಳಿಗಾಗಿ ಪೊಲೀಸ್ ಠಾಣೆಗೆ ಬರುವ ಮಕ್ಕಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರಾಜ್ಯದಲ್ಲಿ 34 ಮಕ್ಕಳ ಸ್ನೇಹಿ ಪೊಲೀಸ್ ಠಾಣೆ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿಯ ಟ್ವೀಟ್ ತಿಳಿಸಿದೆ.
ಇಂಥ ಪೊಲೀಸ್ ಠಾಣೆಗಳಲ್ಲಿ ಮಕ್ಕಳ ಪುಸ್ತಕಗಳು, ನಿಯತಕಾಲಿಕೆಗಳು ಮತ್ತು ದಿನಪತ್ರಿಕೆಗಳು ಲಭ್ಯವಿರುತ್ತವೆ. ಇದರ ಜೊತೆಗೆ ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ನೀಡುವ ಪೋಸ್ಟರ್ಗಳು ಇರುತ್ತವೆ. ಮಕ್ಕಳೊಂದಿಗೆ ಪೊಲೀಸರು ಹೇಗೆ ವರ್ತಿಸಬೇಕು ಎಂಬುದನ್ನು ಸೂಚಿಸುವ ಇಂಥದ್ದನ್ನು ಮಾಡಿ, ಇಂಥದ್ದನ್ನು ಮಾಡಬೇಡಿ ಎಂಬ ಮಾಹಿತಿ ಫಲಕಗಳನ್ನೂ ಅಳವಡಿಸಲಾಗುವುದು. ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಮತ್ತು ಇತರ ಸಂಬಂಧಿತ ವ್ಯಕ್ತಿಗಳ ವಿವರವನ್ನೂ ಪೊಲೀಸ್ ಠಾಣೆಯಲ್ಲಿ ಎದ್ದು ಕಾಣುವಂತೆ ಪ್ರದರ್ಶಿಸಲಾಗುವುದು ಎಂದು ಒಡಿಶಾ ಸರ್ಕಾರ ವಿವರಿಸಿದೆ.
CM @Naveen_Odisha has directed to set up child-friendly police stations in each of the 34 police districts in the State, realising the need for child friendly environment within police station for kids, who would be coming to police stations for legal reasons or seeking help. pic.twitter.com/ec3cp3uvhy
— CMO Odisha (@CMO_Odisha) October 26, 2021
ಇದನ್ನೂ ಓದಿ: 275 ಐಸ್ಕ್ರೀಂ ಕಡ್ಡಿಗಳನ್ನು ಬಳಸಿ ದುರ್ಗಾದೇವಿಯ ಕಲಾಕೃತಿ ತಯಾರಿಸಿದ ಒಡಿಶಾ ಕಲಾವಿದ ಇದನ್ನೂ ಓದಿ: ಒಡಿಶಾ: ಆಳವಾದ ಗುಂಡಿಯಲ್ಲಿ ಬಿದ್ದ ಆನೆಯನ್ನು ರಕ್ಷಿಸಿ ಕರ್ತವ್ಯ ಮೆರೆದ ಅರಣ್ಯ ಇಲಾಖೆ
Published On - 11:14 pm, Tue, 26 October 21