ಭೋಪಾಲ್: ಭಾರತದೆಲ್ಲೆಡೆ ಕೊರೊನಾ ಸೋಂಕಿನ ಎರಡನೇ ಅಲೆ ವೇಗವಾಗಿ ವ್ಯಾಪಿಸುತ್ತಿದ್ದು, ಹಲವು ರಾಜ್ಯಗಳಲ್ಲಿ ಪರಿಸ್ಥಿತಿ ಕೈ ಮೀರುವ ಹಂತಕ್ಕೆ ತಲುಪುತ್ತಿದೆ. ಜನಸಾಮಾನ್ಯರಿಂದ ಗಣ್ಯಾತಿಗಣ್ಯರ ತನಕ ಎಲ್ಲರೂ ಕೊರೊನಾ ಸೋಂಕಿಗೆ ತತ್ತರಿಸಿದ್ದಾರೆ. ಮಧ್ಯಪ್ರದೇಶ ರಾಜ್ಯದಲ್ಲಿ ಕಾಂಗ್ರೆಸ್ ಶಾಸಕಿಯೊಬ್ಬರು ಕೊರೊನಾ ಸೊಂಕಿನಿಂದ ಮೃತರಾಗಿದ್ದು, ಉತ್ತರ ಪ್ರದೇಶದಲ್ಲಿ ಇಬ್ಬರು ಬಿಜೆಪಿ ಶಾಸಕರು ಕೊರೊನಾದಿಂದ ಸಾವಿಗೀಡಾಗಿದ್ದಾರೆ.
ಮಧ್ಯಪ್ರದೇಶದ ಅಲಿರಾಜ್ಪುರ್ ಜಿಲ್ಲೆಯ ಜೋಬತ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಕಲಾವತಿ ಭೂರಿಯಾ ಎಂಬ ಕಾಂಗ್ರೆಸ್ ಶಾಸಕಿ 12 ದಿನಗಳ ಹಿಂದೆ ಶಲ್ಬೀ ಆಸ್ಪತ್ರೆಗೆ ದಾಖಲಾಗಿದ್ದರು. 49 ವರ್ಷ ವಯಸ್ಸಿನ ಇವರು ಕೊರೊನಾ ಸೋಂಕಿಗೆ ತುತ್ತಾಗಿದ್ದು, ಇಂದು (ಏಪ್ರಿಲ್ 24) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆಸ್ಪತ್ರೆಯ ಮುಖ್ಯಸ್ಥ ವಿವೇಕ್ ಜೋಶಿ ಹೇಳಿದಂತೆ ಆಕೆಯ ಶ್ವಾಸಕೋಶ ಶೇ.70ರಷ್ಟು ಹಾನಿಗೊಂಡಿದ್ದು, ವೆಂಟಿಲೇಟರ್ ಆಧಾರದ ಮೇಲೆ ನೋಡಿಕೊಳ್ಳಲಾಗುತ್ತಿತ್ತು. ಆದರೆ, ತೀವ್ರವಾಗಿ ಆರೋಗ್ಯ ಹದಗೆಟ್ಟ ಕಾರಣ ಚಿಕಿತ್ಸೆಗೆ ಸ್ಪಂದಿಸಿದೆ ಇಂದು ಕೊನೆಯುಸಿರೆಳೆದಿದ್ದಾರೆ.
ಉತ್ತರ ಪ್ರದೇಶ ರಾಜ್ಯದ ಇಬ್ಬರು ಬಿಜೆಪಿ ಶಾಸಕರು ನಿಧನ
ಲಕ್ನೋ: ಉತ್ತರ ಪ್ರದೇಶ ರಾಜ್ಯದಲ್ಲಿ ಸುರೇಶ್ ಕುಮಾರ್ ಶ್ರೀವತ್ಸ ಮತ್ತು ರಮೇಶ್ ಚಂದ್ರ ದಿವಾಕರ್ ಎಂಬ ಇಬ್ಬರು ಬಿಜೆಪಿ ಶಾಸಕರು ಶುಕ್ರವಾರ (ಏಪ್ರಿಲ್ 23) ಕೊರೊನಾ ಸೋಂಕಿನಿಂದ ಮೃತರಾಗಿದ್ದಾರೆ. 76 ವರ್ಷ ವಯಸ್ಸಿನ ಸುರೇಶ್ ಕುಮಾರ್ ಶ್ರೀವತ್ಸ ಲಕ್ನೋ ಆಸ್ಪತ್ರೆಗೆ ದಾಖಲಾಗಿದ್ದು, ಕಳೆದ ಕೆಲ ದಿನಗಳಿಂದ ವೆಂಟಿಲೇಟರ್ ಸಹಾಯದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಶುಕ್ರವಾರದಂದು ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ. ಇನ್ನೊಂದೆಡೆ 56 ವರ್ಷ ವಯಸ್ಸಿನ ರಮೇಶ್ ಚಂದ್ರ ದಿವಾಕರ್ ಸಹ ಕೊರೊನಾದಿಂದ ತೀವ್ರ ಸಮಸ್ಯೆಗೆ ಒಳಗಾಗಿ ಮೃತರಾಗಿದ್ದು, ಅವರ ಪತ್ನಿಗೂ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:
ಅಮ್ಮ, ಮಗನ ದೂರ ಮಾಡಿದ ಕೊರೊನಾ; ಮಗನಿಗೆ ತಾಯಿಯ ಸಾವಿನ ಸುದ್ದಿ ಹೇಳದೆ ಅಂತ್ಯಕ್ರಿಯೆ ನೆರವೇರಿಸಿದ ಕುಟುಂಬಸ್ಥರು
ದೇಶದಲ್ಲಿ ಅತಿ ಹೆಚ್ಚು ಸಕ್ರಿಯ ಕೊರೊನಾ ಪ್ರಕರಣಗಳನ್ನು ಹೊಂದಿದ ಜಿಲ್ಲೆ ಬೆಂಗಳೂರು ನಗರ