
ನವದೆಹಲಿ, ಮೇ 16: ಆಪರೇಷನ್ ಸಿಂಧೂರ್ ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ದೃಢ ರಾಜಕೀಯ ಇಚ್ಛಾಶಕ್ತಿ, ವಿವಿಧ ಏಜೆನ್ಸಿಗಳ ನಿಖರವಾದ ಗುಪ್ತಚರ ಸಂಗ್ರಹಣೆ ಮತ್ತು ದೇಶದ ಸಶಸ್ತ್ರ ಪಡೆಗಳ ಸಾಟಿಯಿಲ್ಲದ ದಾಳಿಯ ಸಾಮರ್ಥ್ಯದ ಪ್ರತಿಬಿಂಬವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ವಿವಿಧ ಸಂಸ್ಥೆಗಳ ನಡುವೆ ಗುಪ್ತಚರ ಹಂಚಿಕೆಗಾಗಿ ದೆಹಲಿಯಲ್ಲಿ ನವೀಕರಿಸಿದ ಬಹು ಸಂಸ್ಥೆ ಕೇಂದ್ರವನ್ನು ಉದ್ಘಾಟಿಸಿದ ನಂತರ ಅಮಿತ್ ಶಾ (Amit Shah) ಮಾತನಾಡಿದ್ದಾರೆ. 26/11 ಮುಂಬೈ ಭಯೋತ್ಪಾದಕ ದಾಳಿಯ ನಂತರ ಕಾನೂನು ಜಾರಿಯಲ್ಲಿ ತೊಡಗಿರುವ ವಿವಿಧ ಪಾಲುದಾರರಲ್ಲಿ ಸಮಯೋಚಿತ ಮಾಹಿತಿಗಳನ್ನು ಹಂಚಿಕೊಳ್ಳುವ ಉದ್ದೇಶದಿಂದ ಗುಪ್ತಚರ ಬ್ಯೂರೋದ ಅಡಿಯಲ್ಲಿ ಬಹು ಏಜೆನ್ಸಿ ಕೇಂದ್ರವನ್ನು ರಚಿಸಲಾಯಿತು.
ಆಪರೇಷನ್ ಸಿಂಧೂರ್ ಅಡಿಯಲ್ಲಿ ಏಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತವು ಮೇ 7ರ ಆರಂಭದಲ್ಲಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ದಾಳಿಗಳನ್ನು ನಡೆಸಿತು. ಭಾರತ ಮತ್ತು ಪಾಕಿಸ್ತಾನವು ಮೇ 10ರಂದು ಮಿಲಿಟರಿ ಕ್ರಮಗಳನ್ನು ನಿಲ್ಲಿಸಲು ಒಪ್ಪಿಕೊಂಡವು. ಆದರೆ, ಭಾರತವು ತನ್ನ ಕಾರ್ಯಾಚರಣೆಗೆ ಕೇವಲ ವಿರಾಮವನ್ನು ನೀಡಿದೆ, ಅದರ ಭವಿಷ್ಯದ ಕ್ರಮಗಳು ಪಾಕಿಸ್ತಾನದ ನಡವಳಿಕೆಯ ಮೇಲೆ ಅವಲಂಬಿತವಾಗಿರುತ್ತವೆ ಎಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಭಾರತೀಯ ಸೇನೆ ಪಿಎಂ ಮೋದಿಯ ಪಾದಗಳಿಗೆ ನಮಸ್ಕರಿಸಿತು; ಮಧ್ಯಪ್ರದೇಶ ಡಿಸಿಎಂ ವಿವಾದಾತ್ಮಕ ಹೇಳಿಕೆ
ಆಪರೇಷನ್ ಸಿಂಧೂರ್ ಭಯೋತ್ಪಾದನೆಯ ವಿರುದ್ಧ ಭಾರತದ ಹೊಸ ನೀತಿ ಮತ್ತು ನ್ಯಾಯಕ್ಕಾಗಿ ದೇಶದ ಅಚಲ ಪ್ರತಿಜ್ಞೆ ಎಂದು ಮೋದಿ ಹೇಳಿದ್ದರು. “ನಾವು ಪಾಕಿಸ್ತಾನದ ವಿರುದ್ಧದ ನಮ್ಮ ಕಾರ್ಯಾಚರಣೆಗಳನ್ನು ಮಾತ್ರ ಸ್ಥಗಿತಗೊಳಿಸಿದ್ದೇವೆ. ನಮ್ಮ ಮುಂದಿನ ಹೆಜ್ಜೆ ಅವರ ನಡವಳಿಕೆಯನ್ನು ಅವಲಂಬಿಸಿರುತ್ತದೆ” ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದರು. ಹಾಗೇ, ಭಾರತ ಪರಮಾಣು ಬ್ಲ್ಯಾಕ್‌ಮೇಲ್‌ಗೆ ಬಲಿಯಾಗುವುದಿಲ್ಲ ಎಂದು ಮೋದಿ ಪಾಕಿಸ್ತಾನಕ್ಕೆ ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡಿದ್ದರು ಮತ್ತು ಜಗತ್ತಿಗೆ ಸ್ಪಷ್ಟ ಸಂದೇಶವನ್ನು ಕಳುಹಿಸಿದ್ದರು. ಭಯೋತ್ಪಾದನೆ ಮತ್ತು ವ್ಯಾಪಾರ, ಭಯೋತ್ಪಾದನೆ ಮತ್ತು ಮಾತುಕತೆಗಳು, ನೀರು ಮತ್ತು ರಕ್ತ ಒಟ್ಟಿಗೆ ಇರಲು ಸಾಧ್ಯವಿಲ್ಲ ಎಂದಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ