ಶೀಘ್ರದಲ್ಲೇ ಮತ್ತೊಮ್ಮೆ ಆಪರೇಷನ್ ಟೈಗರ್?; ಠಾಕ್ರೆ ಬಣದ 14 ಶಾಸಕರು ಬಂಡಾಯಕ್ಕೆ ಸಿದ್ಧವೆಂದ ಏಕನಾಥ್ ಶಿಂಧೆ

288 ಸದಸ್ಯರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿವಸೇನೆ (ಯುಬಿಟಿ) 20 ಸದಸ್ಯರನ್ನು ಹೊಂದಿದ್ದರೆ, ಕಾಂಗ್ರೆಸ್ 10 ಮತ್ತು ಎನ್‌ಸಿಪಿ (ಎಸ್‌ಪಿ) 10 ಸದಸ್ಯರನ್ನು ಹೊಂದಿವೆ. ಮತ್ತೊಂದೆಡೆ, 78 ಸದಸ್ಯರ ವಿಧಾನ ಪರಿಷತ್ತಿನಲ್ಲಿ ಶಿವಸೇನೆ (ಯುಬಿಟಿ) 6 ಸದಸ್ಯರನ್ನು ಹೊಂದಿದ್ದರೆ, ಕಾಂಗ್ರೆಸ್ 5 ಮತ್ತು ಎನ್‌ಸಿಪಿ (ಎಸ್‌ಪಿ) ಇಬ್ಬರು ಸದಸ್ಯರನ್ನು ಹೊಂದಿವೆ. ಶಿವಸೇನೆ (ಯುಬಿಟಿ) ಪಕ್ಷದ ಒಟ್ಟು 20 ಶಾಸಕರ ಪೈಕಿ 14ರಿಂದ 16 ಶಾಸಕರು ಪ್ರಸ್ತುತ ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಶಿಂಧೆ ಬಣ ಹೇಳಿಕೊಂಡಿದೆ. ತಾವು ಯಾವುದೇ ಶಾಸಕರನ್ನು ಬಲವಂತವಾಗಿ ಸೆಳೆಯಲು ಪ್ರಯತ್ನಿಸುತ್ತಿಲ್ಲ ಮತ್ತು ಆ ಶಾಸಕರೇ ಸ್ವಇಚ್ಛೆಯಿಂದ ತಮ್ಮನ್ನು ಸಂಪರ್ಕಿಸುತ್ತಿದ್ದಾರೆ ಎಂದು ಶಿಂಧೆ ಮತ್ತು ಅವರ ಪಕ್ಷದ ನಾಯಕರು ಹೇಳಿದ್ದಾರೆ.

ಶೀಘ್ರದಲ್ಲೇ ಮತ್ತೊಮ್ಮೆ ಆಪರೇಷನ್ ಟೈಗರ್?; ಠಾಕ್ರೆ ಬಣದ 14 ಶಾಸಕರು ಬಂಡಾಯಕ್ಕೆ ಸಿದ್ಧವೆಂದ ಏಕನಾಥ್ ಶಿಂಧೆ
Eknath Shinde Uddhav Thackeray
Image Credit source: PTI

Updated on: Jun 26, 2026 | 5:21 PM

ಮುಂಬೈ, ಜೂನ್ 26: 2022ರ ಜೂನ್ ತಿಂಗಳಲ್ಲಿ ಶಿವಸೇನೆ ಮತ್ತು ಜೂನ್ 2026ರಲ್ಲಿ ಶಿವಸೇನೆ (ಯುಬಿಟಿ) ಪಕ್ಷಗಳನ್ನು ಯಶಸ್ವಿಯಾಗಿ ವಿಭಜನೆ ಮಾಡಿದ ಬೆನ್ನಲ್ಲೇ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ವಿರೋಧ ಪಕ್ಷವಾದ ಮಹಾ ವಿಕಾಸ್ ಅಘಾಡಿ (MVA) ಪಾಳಯದಿಂದ ಶಾಸಕರನ್ನು ಸೆಳೆಯಲು ಈಗ ‘ಆಪರೇಷನ್ ಟೈಗರ್ 3.0’ ಅನ್ನು ಪ್ರಾರಂಭಿಸಿದ್ದಾರೆ ಎನ್ನಲಾಗಿದೆ.

ಕೆಲವು ದಿನಗಳ ಹಿಂದೆ ನಡೆದ ಪ್ರಮುಖ ಕಾರ್ಯತಂತ್ರದ ಸಭೆಗೆ 23 ಶಾಸಕರು ಗೈರುಹಾಜರಾದಾಗ ಕಾಂಗ್ರೆಸ್, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಮತ್ತು ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಒಳಗೊಂಡ ಎಂವಿಎ ಮೈತ್ರಿಕೂಟದೊಳಗಿನ ಬಿಕ್ಕಟ್ಟು ಬಹಿರಂಗವಾಗಿತ್ತು.

ಮಹಾರಾಷ್ಟ್ರ ರಾಜಕಾರಣದಲ್ಲಿ ‘ಆಪರೇಷನ್ ಟೈಗರ್’ನ ಮತ್ತೊಂದು ಹಂತದ ವದಂತಿಗಳು ಮತ್ತೆ ತೀವ್ರಗೊಂಡಿವೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಪಕ್ಷದ ಹಲವು ಶಾಸಕರು ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣ ಹೇಳಿಕೊಂಡಿದೆ. ಆದರೆ, ಉದ್ಧವ್ ಠಾಕ್ರೆ ಬಣ ಈ ಆರೋಪಗಳನ್ನು ಸಂಪೂರ್ಣವಾಗಿ ಆಧಾರರಹಿತ ಎಂದು ತಳ್ಳಿಹಾಕಿದೆ. ಇತ್ತೀಚೆಗಷ್ಟೇ ಉದ್ಧವ್ ಠಾಕ್ರೆಗೆ ಭಾರಿ ಆಘಾತ ನೀಡಿದ್ದ 6 ಸಂಸದರು ಬಂಡಾಯ ಎದ್ದು ಶಿಂಧೆ ಬಣವನ್ನು ಸೇರಿದ ಕೆಲವೇ ದಿನಗಳಲ್ಲಿ ಈ ಹೊಸ ಬೆಳವಣಿಗೆ ನಡೆದಿದೆ.

ಇದನ್ನೂ ಓದಿ: ಠಾಕ್ರೆಗೆ ಶಾಕ್; ಶಿವಸೇನೆಯ 6 ಬಂಡಾಯ ಸಂಸದರು ಶಿಂಧೆ ಬಣಕ್ಕೆ ಸೇರ್ಪಡೆ

ಮೂಲಗಳ ಪ್ರಕಾರ, ಶಿವಸೇನೆ (ಯುಬಿಟಿ) ಪಕ್ಷದ 3ರಿಂದ 4 ಶಾಸಕರು ಕೆಲವು ದಿನಗಳ ಹಿಂದೆ ಏಕನಾಥ್ ಶಿಂಧೆ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಸುಮಾರು 12ರಿಂದ 14 ಶಾಸಕರ ಗುಂಪೊಂದು ಶಿಂಧೆ ಬಣವನ್ನು ಸೇರಲು ಸಿದ್ಧವಿದೆ ಎಂದು ಅವರು ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ, ಈ ರಹಸ್ಯ ಭೇಟಿಯ ಕುರಿತು ಉಭಯ ಕಡೆಯಿಂದಲೂ ಯಾವುದೇ ಅಧಿಕೃತ ಪ್ರಕಟಣೆ ಹೊರಬಂದಿಲ್ಲ.

ಮಹಾ ವಿಕಾಸ್ ಅಘಾಡಿ (MVA) ಮೈತ್ರಿಕೂಟವು ಇತ್ತೀಚೆಗೆ ಕರೆದಿದ್ದ ತನ್ನ ಶಾಸಕರ ಪ್ರಮುಖ ಸಭೆಯ ಬೆನ್ನಲ್ಲೇ ಈ ಚರ್ಚೆಗಳು ಆರಂಭವಾಗಿವೆ. ಮೈತ್ರಿಕೂಟದ ಒಟ್ಟು 60 ಶಾಸಕರ ಪೈಕಿ ಕೇವಲ 37 ಶಾಸಕರು ಮಾತ್ರ ಈ ಸಭೆಗೆ ಹಾಜರಾಗಿದ್ದರು. ಆದರೆ, ಹಲವು ಶಾಸಕರು ತಮ್ಮ ವೈಯಕ್ತಿಕ ಕೆಲಸಗಳು ಮತ್ತು ಮೊದಲೇ ನಿಗದಿಯಾಗಿದ್ದ ಕಾರ್ಯಕ್ರಮಗಳ ಕಾರಣದಿಂದಾಗಿ ಸಭೆಗೆ ಬರಲು ಸಾಧ್ಯವಾಗಿಲ್ಲ ಎಂದು ಎಂವಿಎ ನಂತರ ಸ್ಪಷ್ಟನೆ ನೀಡಿತ್ತು.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಶಿವಸೇನೆ ಹೈಡ್ರಾಮಾ; ಶಿಂಧೆ ಬಣ ಸೇರಲು ಸಜ್ಜಾದ 6 ಬಂಡಾಯ ಸಂಸದರು

ಶಿವಸೇನೆ (ಯುಬಿಟಿ) ಪಕ್ಷದ ಒಟ್ಟು 20 ಶಾಸಕರ ಪೈಕಿ 14ರಿಂದ 16 ಶಾಸಕರು ಪ್ರಸ್ತುತ ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಶಿಂಧೆ ಬಣ ಹೇಳಿಕೊಂಡಿದೆ. ತಾವು ಯಾವುದೇ ಶಾಸಕರನ್ನು ಬಲವಂತವಾಗಿ ಸೆಳೆಯಲು ಪ್ರಯತ್ನಿಸುತ್ತಿಲ್ಲ ಮತ್ತು ಆ ಶಾಸಕರೇ ಸ್ವಇಚ್ಛೆಯಿಂದ ತಮ್ಮನ್ನು ಸಂಪರ್ಕಿಸುತ್ತಿದ್ದಾರೆ ಎಂದು ಶಿಂಧೆ ಮತ್ತು ಅವರ ಪಕ್ಷದ ನಾಯಕರು ಪ್ರತಿಪಾದಿಸಿದ್ದಾರೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಶಾಸಕರು ತಮ್ಮ ಬಣಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಸುಳಿವನ್ನು ಅವರು ನೀಡಿದ್ದಾರೆ.

ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್, ಪಕ್ಷದ ಎಲ್ಲಾ ಶಾಸಕರು ಉದ್ಧವ್ ಠಾಕ್ರೆ ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದಾರೆ. ಎಂವಿಎ ಸಭೆಗೆ ಗೈರಾದ ಶಾಸಕರು ತಮ್ಮ ವೈಯಕ್ತಿಕ ಕಾರಣಗಳ ಬಗ್ಗೆ ಪಕ್ಷದ ನಾಯಕತ್ವಕ್ಕೆ ಮೊದಲೇ ಮಾಹಿತಿ ನೀಡಿದ್ದರು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us