ಬಂಧಿತ ಕೇಜ್ರಿವಾಲ್​ಗೆ ಬೆಂಬಲವಾಗಿ ವಿಪಕ್ಷಗಳಿಂದ ಮಹಾ ಸಮಾವೇಶ; ದೆಹಲಿಯ ರಾಮಲೀಲಾ ಮೈದಾನದಲ್ಲಿ ‘ಲೋಕತಂತ್ರ ಬಚಾವೊ’

|

Updated on: Mar 31, 2024 | 10:28 AM

Loktantra Bachao maharally in Delhi: ಲಿಕ್ಕರ್ ಹಗರಣದಲ್ಲಿ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪರ ಬೆಂಬಲವಾಗಿ ವಿಪಕ್ಷಗಳು ಇಂದು ಭಾನುವಾರ ‘ಲೋಕತಂತ್ರ ಬಚಾವೊ’ ಮಹಾಸಭೆ ನಡೆಸಿವೆ. ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯುತ್ತಿರುವ ಪ್ರತಿಭಟನಾ ಸಭೆಯಲ್ಲಿ ಅರವಿಂದ್ ಕೇಜ್ರಿವಾಲ್ ಪತ್ನಿ ಸುನೀತಾ, ಇಡಿಯಿಂದ ಬಂಧಿತರಾಗಿದ್ದ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಪತ್ನಿ ಕಲ್ಪನಾ, ಹಾಗು ಕಾಂಗ್ರೆಸ್, ಸಮಾಜವಾದಿ ಪಕ್ಷ, ಆರ್​ಜೆಡಿ ಮೊದಲಾದ ಇಂಡಿಯಾ ಬ್ಲಾಕ್​ನ ಪಕ್ಷಗಳ ಮುಖಂಡರು ಈ ಸಭೆಯಲ್ಲಿ ಭಾಗಹಿಸುತ್ತಿದ್ದಾರೆ.

ಬಂಧಿತ ಕೇಜ್ರಿವಾಲ್​ಗೆ ಬೆಂಬಲವಾಗಿ ವಿಪಕ್ಷಗಳಿಂದ ಮಹಾ ಸಮಾವೇಶ; ದೆಹಲಿಯ ರಾಮಲೀಲಾ ಮೈದಾನದಲ್ಲಿ ‘ಲೋಕತಂತ್ರ ಬಚಾವೊ’
ಎಎಪಿ ಪ್ರತಿಭಟನಾ ಮೆರವಣಿಗೆಯ ಒಂದು ದೃಶ್ಯ
Follow us on

ನವದೆಹಲಿ, ಮಾರ್ಚ್ 31: ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿರುವುದನ್ನು ವಿರೋಧಿಸಿ ವಿಪಕ್ಷಗಳ ಗುಂಪಾದ ಇಂಡಿಯಾ ಮೈತ್ರಿಕೂಟದ ಪಕ್ಷಗಳು (INDIA block parties) ದೊಡ್ಡ ಪ್ರತಿಭಟನೆ ನಡೆಸುತ್ತಿವೆ. ರಾಷ್ಟ್ರರಾಜಧಾನಿ ದೆಹಲಿ ನಗರದಲ್ಲಿ ಇಂದು ಭಾನುವಾರ ಲೋಕತಂತ್ರ ಬಚಾವೊ (Loktantra Bachao) ಮಹಾ ಸಮಾವೇಶ ನಡೆಯುತ್ತಿದೆ. ಅರವಿಂದ್ ಕೇಜ್ರಿವಾಲ್ ಪತ್ನಿ ಸುನೀತಾ ಅವರಲ್ಲದೇ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗು ಮಾಜಿ ಉತ್ತರಪ್ರದೇಶ ಸಿಎಂ ಅಖಿಲೇಶ್ ಯಾದವ್, ಬಿಹಾರ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಮಾಜಿ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹಾಗು ಇನ್ನೂ ಹಲವರು ಈ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಬೆಳಗ್ಗೆ 9:30ಕ್ಕೆ ಶುರುವಾಗಿರುವ ಈ ಪ್ರತಿಭಟನಾ ಸಭೆ ಮಧ್ಯಾಹ್ನ 2 ಗಂಟೆಯವರೆಗೂ ನಡೆಯುತ್ತಿದೆ.

ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರೂ ಸೋನಿಯಾ ಗಾಂಧಿ ಈ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿದ್ದಾಗಿ ನ್ಯೂಸ್18 ವರದಿ ಮಾಡಿದೆ. ಈ ಸಮಾವೇಶದಲ್ಲಿ 20,000 ಜನರು ಸೇರಬಹುದು ಎಂದು ಆಮ್ ಆದ್ಮಿ ಪಕ್ಷ ನಿರೀಕ್ಷಿಸಿದೆ. ರಾಮಲೀಲಾ ಮೈದಾನದಲ್ಲಿ 20,000 ಮಂದಿಯ ಸಭೆ ನಡೆಸಲು ಸಂಬಂಧಿತ ಪ್ರಾಧಿಕಾರದಿಂದ ಎಎಪಿ ಅನುಮತಿ ಪಡೆದಿದೆ.

ದೆಹಲಿ ಲಿಕ್ಕರ್ ಹಗರಣ ಸಂಬಂಧ ಇಡಿ ಅಧಿಕಾರಿಗಳಿಂದ ಅರವಿಂದ್ ಕೇಜ್ರಿವಾಲ್ ಬಂಧನವಾದ ಬಳಿಕ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಸೋಷಿಯಲ್ ಮೀಡಿಯಾದಲ್ಲಿ ಬಹಳ ಸಕ್ರಿಯವಾಗಿದ್ದಾರೆ. ಇಂದು ಸಭೆ ಆಯೋಜನೆಯಲ್ಲಿ ಅವರ ಪಾತ್ರ ಮಹತ್ತರವಿದೆ. ಇದೇ ಇಡಿಯಿಂದ ಜನವರಿಯಲ್ಲಿ ಗಣಿ ಪ್ರಕರಣ ಸಂಬಂಧ ಬಂಧಿತರಾಗಿದ್ದ ಮಾಜಿ ಝಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಅವರ ಪತ್ನಿ ಕಲ್ಪನಾ ಸೊರೇನ್ ಕೂಡ ‘ಲೋಕತಂತ್ರ ಬಚಾವೊ’ ಸಭೆಯಲ್ಲಿ ಭಾಗವಹಿಸಬಹುದು ಎನ್ನಲಾಗಿದೆ.

ಇದನ್ನೂ ಓದಿ: ಗುಜರಾತ್​​ನ ದ್ವಾರಕಾದಲ್ಲಿ ಶಾರ್ಟ್​ಸರ್ಕ್ಯೂಟ್​ನಿಂದ ಮನೆಗೆ ಬೆಂಕಿ; 7 ತಿಂಗಳ ಮಗು ಸೇರಿ ನಾಲ್ವರು ಸಜೀವದಹನ

ರಾಮಲೀಲಾ ಮೈದಾನದಲ್ಲಿ ಈ ಸಭೆಗೆ ತೀವ್ರ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಂದು ಗೇಟ್​ನಲ್ಲಿ ಕಟ್ಟುನಿಟ್ಟಿನ ಪರಿಶೀಲನೆ ನಡೆಯುತ್ತಿದೆ. ಸಭೆಗೆ ಯಾವುದೇ ರೀತಿಯ ಆಯುಧ ಅಥವಾ ಟ್ರಾಕ್ಟರ್ ಟ್ರಾಲಿಗಳನ್ನು ತರುವಂತಿಲ್ಲ ಎಂದು ದೆಹಲಿ ಪೊಲೀಸರು ಈ ಮೊದಲೇ ಷರತ್ತು ಹಾಕಿದ್ದಾರೆ. ಸಮಾವೇಶದ ಹೆಸರಿನಲ್ಲಿ ರಾಜಧಾನಿಯಲ್ಲಿ ಟ್ರಾಕ್ಟರ್ ರ್ಯಾಲಿ ನಡೆಸಿ ಹಿಂಸಾಚಾರಕ್ಕೆ ಎಡೆಯಾಗುವುದನ್ನು ತಪ್ಪಿಸಲು ಪೊಲೀಸರು ಈ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ