ಗುವಾಹಟಿ: ಅಸ್ಸಾಂ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನದ ನಂತರ ಪ್ರತಿಕ್ರಿಯಿಸಿದ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್, ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಾರ್ಚ್ 27ರಂದು ಮೊದಲ ಹಂತದ ಮತದಾನ ನಡೆದಿದ್ದು, ಮತದಾನ ನಡೆದಿರುವ ಚುನಾವಣಾ ಕ್ಷೇತ್ರಗಳಲ್ಲಿನ ಪ್ರಮುಖ ಅಭ್ಯರ್ಥಿಗಳಲ್ಲೊಬ್ಬರಾಗಿದ್ದಾರೆ ಸೋನೊವಾಲ್. ಅಭಿವೃದ್ಧಿ ಆಧಾರಿತ ನೀತಿ ಮತ್ತು ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡಿರುವ ಮೂಲಕ ನಮ್ಮ ಸರ್ಕಾರ ರಾಜ್ಯದ ಜನರ ವಿಶ್ವಾಸವನ್ನು ಗಳಿಸಿದೆ ಎಂದು ಅವರು ಹೇಳಿದ್ದಾರೆ.
5 ವರ್ಷಗಳ ಹಿಂದೆ ನಾನು ಅಧಿಕಾರಕ್ಕೇರಿದಾಗ ಉತ್ತಮ ಆಡಳಿತ ನೀಡಲು, ಭ್ರಷ್ಟಾಚಾರ ಮುಕ್ತ ರಾಜ್ಯ ನಿರ್ಮಾಣ ಮಾಡಲು, ಪ್ರತ್ಯೇಕತಾವಾದಿ ಮತ್ತು ಅಕ್ರಮ ವಲಸೆಗಾರರಿಂಂದ ರಾಜ್ಯವನ್ನು ಮುಕ್ತಗೊಳಿಸುವುದಕ್ಕಾಗಿ ನಾನು ಹಲವಾರು ಸವಾಲುಗಳನ್ನು ಎದುರಿಸಬೇಕಾಗಿ ಬಂತು. ನಾವು ಉತ್ತಮ ಕೆಲಸ ಮಾಡಿ ಜನರ ವಿಶ್ವಾಸವನ್ನು ಗಳಿಸಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಹೆಚ್ಚಿನ ಗಮನ ಹರಿಸಿದ್ದಾರೆ. ಜನರಿಗೆ ನಮ್ಮ ಮೇಲೆ ನಂಬಿಕೆ ಇದೆ. ಬಿಜೆಪಿ ಎಲ್ಲಿದೆಯೊ ಅಲ್ಲಿ ಸುರಕ್ಷೆ, ಅಭಿವೃದ್ಧಿ, ಶಾಂತಿ ಎಲ್ಲವೂ ಇರುತ್ತದೆ. ಜನರಿಗೆ ಇದು ಮನವರಿಕೆ ಆಗಿದೆ ಎಂದು ಸೋನೊವಾಲ್ ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.
ಅಸ್ಸಾಂನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದು ಕೇಳಿದಾಗ, ಸೊನೊವಾಲ್ ಅವರು ಅಧಿಕಾರದಲ್ಲಿ ಉಳಿಯಬೇಕೆ ಎಂಬ ಪ್ರಶ್ನೆ ಉದ್ಭವವಾಗುವುದಿಲ್ಲ. ಬಿಜೆಪಿ ಉತ್ತಮ ಕೆಲಸ ಮಾಡಿದೆ. ನಮ್ಮ ಪಕ್ಷ ಮತ್ತೊಮ್ಮೆ ಆಯ್ಕೆಯಾಗಬೇಕು ಎಂದು ಬಯಸುತ್ತೇವೆ. ಪ್ರಧಾನಿ ಮೋದಿಯರ ಆಶೀರ್ವಾದ ನಮ್ಮ ಮೇಲಿದೆ. ಎಲ್ಲ ಸಚಿವರು ನಮಗೆ ಸಹಾಯ ಮಾಡಿದ್ದಾರೆ.
ನಾವು ಮತ್ತೊಮ್ಮೆ ಅಧಿಕಾರಕ್ಕೇರಿದರೆ ದೋಷ ಮುಕ್ತ ರಾಷ್ಟ್ರೀಯ ಪೌರತ್ವ ನೋಂದಣಿ (NRC) ತರುವ ಮೂಲಕ ರಾಜ್ಯದಲ್ಲಿ ಅಕ್ರಮ ವಲಸೆಗಾರರು ಇಲ್ಲದಂತೆ ಖಾತ್ರಿ ಪಡಿಸುತ್ತೇವೆ. ಅಸ್ಸಾಂನ ಜನರು ದೋಷ ಮುಕ್ತ ಎನ್ಆರ್ಸಿ ಬಯಸುತ್ತಾರೆ. ಮುಂಬರುವ ಎನ್ಆರ್ಸಿ ಪಟ್ಟಿಯಲ್ಲಿ ಯಾರೊಬ್ಬ ನುಸುಳುಕೋರರ ಹೆಸರು ಬರದಂತೆ ನಾವು ಖಾತ್ರಿ ಪಡಿಸಲಿದ್ದೇವೆ ಎಂದು ಹೇಳಿದ್ದಾರೆ.
ನರೇಂದ್ರ ಮೋದಿ ಸರ್ಕಾರ ಈಶಾನ್ಯ ರಾಜ್ಯಗಳತ್ತ ಹೆಚ್ಚು ಗಮನ ಹರಿಸಿದೆ. ರಾಜ್ಯದ ಗಡಿಭಾಗಗಳನ್ನು ಸಂಪೂರ್ಣ ಮುಚ್ಚಿದ್ದು, ನುಸುಳುಕೋರರು ಬಂದಿರುವ ಬಗ್ಗೆ ಯಾವುದೇ ಸುದ್ದಿಯಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್-ಎಐಯುಡಿಎಫ್ ಮೈತ್ರಿಕೂಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೈತ್ರಿಕೂಟ ಒಗ್ಗಟ್ಟಾಗಿಲ್ಲ. ಜನರು ಅವರನ್ನು ನಂಬುತ್ತಿಲ್ಲ. ಕಾಂಗ್ರೆಸ್ ಉತ್ತಮ ಕೆಲಸ ಮಾಡಿಲ್ಲ. ಅವರಿಗೆ ವಿಶ್ವಾಸ ಗಳಿಸಲು ಸಾಧ್ಯಲಿಲ್ಲ ಎಂದು ಸೋನೊವಾಲ್ ಹೇಳಿದ್ದಾರೆ.
ಸೋನೊವಾಲ್ ಅವರು ಮಜುಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು ಇವರ ವಿರುದ್ದ ಮೂರು ಬಾರಿ ಶಾಸಕರಾಗಿದ್ದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಜೀಬ್ ಲೋಚನ್ ಪೆಗು ಕಣದಲ್ಲಿದ್ದಾರೆ. ಶನಿವಾರ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇಕಡಾ 76.9 ಮತದಾನವಾಗಿದೆ.
ಇದನ್ನೂ ಓದಿ: Assam Election 2021 Phase 1 Voting LIVE: ಅಸ್ಸಾಂನಲ್ಲಿ ಆರಂಭವಾಗಿದೆ ಮೊದಲ ಹಂತದ ಮತದಾನ; ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿರುವ ಮತದಾರ
Assam Election 2021 Opinion Poll: ಬಿಜೆಪಿ ನೇತೃತ್ವದ ಎನ್ಡಿಎಗೆ 73 ಸೀಟ್, ಕಾಂಗ್ರೆಸ್ಗೆ ಮತ್ತೆ ವಿರೋಧ ಪಕ್ಷದ ಸ್ಥಾನ