ಸಂಸತ್​​ನಲ್ಲಿ ಭದ್ರತಾ ಲೋಪ; ಈ ವಿಷಯದಲ್ಲಿ ರಾಜಕೀಯ ಮಾಡುತ್ತಿರುವುದು ವಿಷಾದನೀಯ: ಓಂ ಬಿರ್ಲಾ

ಸಂಸತ್​​ನಲ್ಲಿ ಭದ್ರತಾ ಲೋಪ ವಿಷಯದಲ್ಲಿ ರಾಜಕೀಯ ಮಾಡುತ್ತಿರುವುದು ವಿಷಾದನೀಯ. ಸದನದ ಬಾವಿಗೆ ನುಗ್ಗಿ ಘೋಷಣೆ ಕೂಗುವುದು ಸದನದ ಘನತೆಗೆ ವಿರುದ್ಧವಾಗಿದೆ. ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಲು ನಿಮ್ಮ (ವಿರೋಧ ಪಕ್ಷದ) ಸಹಕಾರವನ್ನು ಕೋರುತ್ತೇನೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ.

ಸಂಸತ್​​ನಲ್ಲಿ ಭದ್ರತಾ ಲೋಪ; ಈ ವಿಷಯದಲ್ಲಿ ರಾಜಕೀಯ ಮಾಡುತ್ತಿರುವುದು ವಿಷಾದನೀಯ: ಓಂ ಬಿರ್ಲಾ
ಓಂ ಬಿರ್ಲಾ
Follow us
|

Updated on: Dec 18, 2023 | 2:48 PM

ದೆಹಲಿ ಡಿಸೆಂಬರ್ 18: ಡಿಸೆಂಬರ್ 13ರಂದು ಸಂಸತ್ತಿನ ಭದ್ರತಾ ಉಲ್ಲಂಘನೆಯ (Parliament security breach)ಘಟನೆಯನ್ನು ರಾಜಕೀಯಗೊಳಿಸಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ (Om Birla) ಅವರು ಈ ಬಗ್ಗೆ ಉನ್ನತ ಮಟ್ಟದ ಸಮಿತಿಯು ಪ್ರಕರಣದ ತನಿಖೆ ನಡೆಸುತ್ತಿದೆ ಎಂದು ಹೇಳಿದರು. ಡಿಸೆಂಬರ್ 13 ರ ಘಟನೆಯ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿಕೆ ನೀಡಬೇಕೆಂದು ವಿರೋಧ ಪಕ್ಷಗಳು ಒತ್ತಾಯಿಸಿದ್ದವು. ಪ್ರತಿಪಕ್ಷದ ಕೆಲ ಸಂಸದರು ತಮ್ಮ ಬೇಡಿಕೆಗಳಿರುವ ಫಲಕಗಳನ್ನು ಹಿಡಿದುಕೊಂಡಿದ್ದರು. ಸದನದೊಳಗೆ ಭಿತ್ತಿಪತ್ರಗಳನ್ನು ತರುತ್ತಿರುವುದನ್ನು ವಿರೋಧಿಸಿದ ಓಂ ಬಿರ್ಲಾ, ಇದು ಸದನದ ಘನತೆಯನ್ನು ಕುಗ್ಗಿಸುತ್ತದೆ ಎಂದು ಹೇಳಿದ್ದಾರೆ.

ಈ ವಿಷಯದಲ್ಲಿ ರಾಜಕೀಯ ಮಾಡುತ್ತಿರುವುದು ವಿಷಾದನೀಯ. ಸದನದ ಬಾವಿಗೆ ನುಗ್ಗಿ ಘೋಷಣೆ ಕೂಗುವುದು ಸದನದ ಘನತೆಗೆ ವಿರುದ್ಧವಾಗಿದೆ. ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಲು ನಿಮ್ಮ (ವಿರೋಧ ಪಕ್ಷದ) ಸಹಕಾರವನ್ನು ಕೋರುತ್ತೇನೆ ಎಂದು ಬಿರ್ಲಾ ಹೇಳಿದರು.

ಪ್ರಶ್ನೋತ್ತರ ವೇಳೆಯಲ್ಲಿ, ಸಂಸತ್ತಿನ ಭದ್ರತೆಯು ಲೋಕಸಭೆಯ ಸೆಕ್ರೆಟರಿಯೇಟ್‌ನ ವ್ಯಾಪ್ತಿಯಲ್ಲಿದೆ. ಕೆಲವು ವಿರೋಧ ಪಕ್ಷದ ಸದಸ್ಯರ ಅಮಾನತು ಡಿಸೆಂಬರ್ 13 ರ ಘಟನೆಗೆ ಸಂಬಂಧಿಸಿಲ್ಲ.ಆದರೆ ಸದನಕ್ಕೆ ಫಲಕಗಳನ್ನು ತರುತ್ತಿದ್ದ ಸದಸ್ಯರಿಗೆ ಸಂಬಂಧಿಸಿದೆ ಎಂದು ಸ್ಪೀಕರ್ ಸದಸ್ಯರಿಗೆ ತಿಳಿಸಿದರು.

ಈಗಾಗಲೇ ಉನ್ನತ ಮಟ್ಟದ ಸಮಿತಿಯು ತನ್ನ ತನಿಖೆಯನ್ನು ಆರಂಭಿಸಿದ್ದು, ಸಂಸತ್ತಿನ ಭದ್ರತೆಯನ್ನು ಹೆಚ್ಚಿಸಲು ಸರ್ವಪಕ್ಷಗಳ ಸಭೆಯಲ್ಲಿ ತಮಗೆ ನೀಡಿದ ಕೆಲವು ಸಲಹೆಗಳನ್ನು ಜಾರಿಗೊಳಿಸಲಾಗಿದೆ ಎಂದು ಅವರು ಹೇಳಿದರು. ಈ ವಿಷಯದ ಬಗ್ಗೆ ಸದಸ್ಯರೊಂದಿಗೆ ಸಮಾಲೋಚನೆ ಮುಂದುವರಿಸುವುದಾಗಿ ಹೇಳಿದ ಬಿರ್ಲಾ, ಸದಸ್ಯರು ಅವರವರ ಸೀಟುಗಳಲ್ಲಿ ಕುಳಿತುಕೊಳ್ಳುವಂತೆ ಒತ್ತಾಯಿಸಿದರು.

ಸಂಸದೀಯ ವ್ಯವಹಾರಗಳ ಪ್ರಲ್ಹಾದ್ ಜೋಶಿ ಅವರು ಫಲಕಗಳನ್ನು ತೋರಿಸದಂತೆ ಪ್ರತಿಪಕ್ಷದ ಸದಸ್ಯರಿಗೆ ಕೈಮುಗಿಗುಮನವಿ ಮಾಡಿದರು. ಭಿತ್ತಿಪತ್ರಗಳನ್ನು ಹಿಡಿದುಕೊಳ್ಳದಂತೆ ವ್ಯವಹಾರ ಸಲಹಾ ಸಮಿತಿಯ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದಿದ್ದಾರೆ ಜೋಶಿ.

ವಿರೋಧ ಪಕ್ಷದ ಸಂಸದರು ಬಿರ್ಲಾ ಹಾಗೂ ಜೋಶಿ ಅವರ ಮನವಿಯನ್ನು ನಿರ್ಲಕ್ಷಿಸಿ, ಘೋಷಣೆಗಳೊಂದಿಗೆ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದರು, ಇದರಿಂದಾಗಿ ಸ್ಪೀಕರ್ 12 ಗಂಟೆಯವರೆಗೆ ಸದನ ಮುಂದೂಡವುದಾಗಿ ಹೇಳಿದರು.

ಇದನ್ನೂ ಓದಿ:ಸಂಸತ್ ಭದ್ರತಾ ಲೋಪ, ಸಂಸದರ ಅಮಾನತು: ಸಂಸದರಿಗೆ ಪತ್ರ ಬರೆದ ಸ್ಪೀಕರ್ ಓಂ ಬಿರ್ಲಾ 

ಕಳೆದ ವಾರ ಹೊಗೆ ಡಬ್ಬಿಗಳೊಂದಿಗೆ ಸಂದರ್ಶಕರ ಗ್ಯಾಲರಿಯಿಂದ ಲೋಕಸಭೆಯ ಕೊಠಡಿಯೊಳಗೆ ಜಿಗಿದ ಇಬ್ಬರಿಗೆ ಸಂದರ್ಶಕರ ಪಾಸ್‌ಗಳನ್ನು ಅಧಿಕೃತಗೊಳಿಸಿದ ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಇದಕ್ಕೂ ಮೊದಲು, ಡಿಸೆಂಬರ್ 13 ರಂದು ನಡೆದ “ದುರದೃಷ್ಟಕರ” ಘಟನೆಯ ಬಗ್ಗೆ ಇಡೀ ಸದನವು ಕಳವಳ ವ್ಯಕ್ತಪಡಿಸಿದೆ ಎಂದು ಬಿರ್ಲಾ ಹೇಳಿದರು.

ಸಂಸತ್ತಿನ ಭದ್ರತಾ ಉಲ್ಲಂಘನೆಯ ಘಟನೆಯನ್ನು ವಿರೋಧಿಸಿ ಸದನದ ಕಲಾಪಕ್ಕೆ ಅಡ್ಡಿಪಡಿಸಿದ ಕಾರಣಕ್ಕಾಗಿ 12 ಲೋಕಸಭಾ ಸಂಸದರು ಮತ್ತು ಒಬ್ಬ ರಾಜ್ಯಸಭಾ ಸಂಸದರನ್ನು ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಲಾಗಿದೆ. ಕಳೆದ ಬುಧವಾರ 2001 ರ ಸಂಸತ್ತಿನ ಭಯೋತ್ಪಾದಕ ದಾಳಿಯ ವಾರ್ಷಿಕೋತ್ಸವದ ಪ್ರಮುಖ ಭದ್ರತಾ ಉಲ್ಲಂಘನೆಯಲ್ಲಿ, ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ ಎಂಬ ಇಬ್ಬರು ವ್ಯಕ್ತಿಗಳು ಶೂನ್ಯ ವೇಳೆಯಲ್ಲಿ ಸಾರ್ವಜನಿಕ ಗ್ಯಾಲರಿಯಿಂದ ಲೋಕಸಭೆಯ ಚೇಂಬರ್‌ಗೆ ಹಾರಿ, ಬಣ್ಣದ ಹೊಗೆಯನ್ನು ಬಿಡುಗಡೆ ಮಾಡಿ ಘೋಷಣೆಗಳನ್ನು ಕೂಗಿದರು.ಅದೇ ವೇಳೆ ಸಂಸತ್ತಿನ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ