Parliament Winter Session 2021 ಸಂಸದರ ಅಮಾನತು ಭಾರತದ ಜನರ ಧ್ವನಿಯನ್ನು ದಮನಿಸುವ ಸಂಕೇತ: ರಾಹುಲ್ ಗಾಂಧಿ

| Updated By: ರಶ್ಮಿ ಕಲ್ಲಕಟ್ಟ

Updated on: Dec 14, 2021 | 2:25 PM

12 ಸಂಸದ ಅಮಾನತು ಭಾರತದ ಜನರ ಧ್ವನಿಯನ್ನು ದಮನಿಸುವ ಸಂಕೇತವಾಗಿದೆ. ಅವರ ದನಿಯನ್ನು ದಮನ ಮಾಡಲಾಗಿದೆ. ಅವರು ಯಾವುದೇ ತಪ್ಪು ಮಾಡಿಲ್ಲ. ಸಂಸತ್ತಿನಲ್ಲಿ ಪ್ರಮುಖ ವಿಷಯಗಳನ್ನು ಚರ್ಚಿಸಲು ನಮಗೆ ಅವಕಾಶವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

Parliament Winter Session 2021 ಸಂಸದರ ಅಮಾನತು ಭಾರತದ ಜನರ ಧ್ವನಿಯನ್ನು ದಮನಿಸುವ ಸಂಕೇತ: ರಾಹುಲ್ ಗಾಂಧಿ
ರಾಹುಲ್ ಗಾಂಧಿ
Follow us on

ದೆಹಲಿ: ಪ್ರತಿಪಕ್ಷಗಳ ಸದಸ್ಯರು ಸದನದ ಅಂಗಳಕ್ಕೆ ನುಗ್ಗಿ ಅಮಾನತುಗೊಳಿಸಿರುವ ಸಂಸದರನ್ನು ಹಿಂಪಡೆಯುವಂತೆ ಘೋಷಣೆಗಳನ್ನು ಕೂಗಿದ ನಂತರ ರಾಜ್ಯಸಭೆಯನ್ನು(RajyaSabha) ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. ಸಂಸದರು ವಿಷಾದ ವ್ಯಕ್ತಪಡಿಸಿದರೆ ಅವರ ಅಮಾನತು ಹಿಂಪಡೆಯಲಾಗುವುದು ಎಂದು ಸದನದ ಅಧ್ಯಕ್ಷ ಎಂ ವೆಂಕಯ್ಯ ನಾಯ್ಡು(M Venkaiah Naidu) ಸದಸ್ಯರಿಗೆ ತಿಳಿಸಿದರೂ ಪಟ್ಟು ಬಿಡದ ಸಂಸದರು ‘ನಮಗೆ ನ್ಯಾಯ ಬೇಕು’ ಎಂಬ ಘೋಷಣೆಗಳನ್ನು ಎತ್ತಿದರು. ಅಮಾನತುಗೊಂಡಿರುವ 12 ರಾಜ್ಯಸಭಾ ಸಂಸದರನ್ನು ಬೆಂಬಲಿಸಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿನ ವಿಪಕ್ಷದ ಸದಸ್ಯರು ಗಾಂಧಿ ಪ್ರತಿಮೆಯಿಂದ ವಿಜಯ್ ಚೌಕ್‌ವರೆಗೆ ಮೆರವಣಿಗೆ ನಡೆಸಿದ್ದಾರೆ. 12 ಸಂಸದ ಅಮಾನತು ಭಾರತದ ಜನರ ಧ್ವನಿಯನ್ನು ದಮನಿಸುವ ಸಂಕೇತವಾಗಿದೆ. ಅವರ ದನಿಯನ್ನು ದಮನ ಮಾಡಲಾಗಿದೆ. ಅವರು ಯಾವುದೇ ತಪ್ಪು ಮಾಡಿಲ್ಲ. ಸಂಸತ್ತಿನಲ್ಲಿ ಪ್ರಮುಖ ವಿಷಯಗಳನ್ನು ಚರ್ಚಿಸಲು ನಮಗೆ ಅವಕಾಶವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ.


ಸಂಸತ್​​ನಲ್ಲಿ ಮಸೂದೆಗಳ ನಂತರ ಮಸೂದೆಗಳು ಗದ್ದಲದ ನಡುವೆಯೇ ಅಂಗೀಕಾರಗೊಳ್ಳುತ್ತಿವೆ. ಇದು ಸಂಸತ್ತನ್ನು ನಡೆಸುವ ವಿಧಾನವಲ್ಲ. ಪ್ರಧಾನಿ ಸದನಕ್ಕೆ ಬರುವುದಿಲ್ಲ. ರಾಷ್ಟ್ರೀಯ ಮಹತ್ವದ ಯಾವುದೇ ವಿಷಯವನ್ನು ಪ್ರಸ್ತಾಪಿಸಲು ನಮಗೆ ಅವಕಾಶವಿಲ್ಲ. ಪ್ರಜಾಪ್ರಭುತ್ವದ ಹತ್ಯೆ ದುರದೃಷ್ಟಕರ. ಒಬ್ಬ ಸಚಿವರು ರೈತರನ್ನು ಕೊಂದರು. ಪ್ರಧಾನಿಗೆ ಇದರ ಅರಿವಿದೆ. ಸತ್ಯವೆಂದರೆ 2-3 ಬಂಡವಾಳಶಾಹಿಗಳು ರೈತರ ವಿರುದ್ಧವಾಗಿದ್ದಾರೆ. ಈ ಸಂಸದರನ್ನು ರಾಜ್ಯಸಭಾ ಅಧ್ಯಕ್ಷರು ಅಥವಾ ಪ್ರಧಾನಿ ಅಮಾನತು ಮಾಡಿಲ್ಲ, ಆದರೆ ರೈತರ ಆದಾಯವನ್ನು ಕದಿಯಲು ಬಯಸುವ ಶಕ್ತಿ ಅಮಾನತು ಮಾಡಿದೆ. ಪ್ರಧಾನಿ ಮತ್ತು ಅಧ್ಯಕ್ಷರು ಕೇವಲ ಅನುಷ್ಠಾನಕಾರರು ಎಂದು ರಾಹುಲ್ ಹೇಳಿದ್ದಾರೆ.

 12 ರಾಜ್ಯಸಭಾ ಸಂಸದರ ಅಮಾನತು ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಪಕ್ಷಗಳ ಸಂಸದರು ಸಂಸತ್ತಿನಿಂದ ವಿಜಯ್ ಚೌಕ್‌ವರೆಗೆ ಮೆರವಣಿಗೆ ನಡೆಸಿದರು.


ಯುಎಪಿಎಯಲ್ಲಿ ಯಾವುದೇ ತಿದ್ದುಪಡಿಗಳು ಪರಿಗಣನೆಯಲ್ಲಿಲ್ಲ

ಪ್ರಸ್ತುತ ಯುಎಪಿಎಯಲ್ಲಿ ಯಾವುದೇ ತಿದ್ದುಪಡಿಗಳು ಪರಿಗಣನೆಯಲ್ಲಿಲ್ಲ. ಹೆಚ್ಚಿನ ಸಂಖ್ಯೆಯ ಖುಲಾಸೆಗಳ ಬಗ್ಗೆ ಇತ್ತೀಚಿನ ಪುರಾವೆಗಳ ಬೆಳಕಿನಲ್ಲಿ ಕಾಯಿದೆಯನ್ನು ತಿದ್ದುಪಡಿ ಮಾಡಲು ಸರ್ಕಾರ ಯೋಜಿಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರವಾಗಿ ಗೃಹ ಸಚಿವಾಲಯ ಲೋಕಸಭೆಗೆ ತಿಳಿಸಿದೆ.

ಲಭ್ಯವಿರುವ ಮಾಹಿತಿಯ ಪ್ರಕಾರ, ಕೆಲವು ರಾಜ್ಯಗಳ ನಡುವಿನ ಭೂಪ್ರದೇಶಗಳ ಮೇಲಿನ ಗಡಿಗಳು ಮತ್ತು ಹಕ್ಕುಗಳು ಮತ್ತು ಪ್ರತಿ-ಹಕ್ಕುಗಳ ಗಡಿರೇಖೆಯಿಂದ ಗಡಿ ವಿವಾದಗಳು ಉದ್ಭವಿಸುತ್ತವೆ. ಆಂಧ್ರಪ್ರದೇಶ-ತೆಲಂಗಾಣ ಮತ್ತು ಬಿಹಾರ-ಜಾರ್ಖಂಡ್ ನಡುವೆ ಆಸ್ತಿಗಳ ವಿಭಜನೆಗೆ ಸಂಬಂಧಿಸಿದ ಕೆಲವು ವಿಷಯಗಳು ಬಾಕಿ ಉಳಿದಿವೆ ಎಂದು ಲೋಕಸಭೆಯಲ್ಲಿ ಗೃಹ ಸಚಿವಾಲಯದ ರಾಜ್ಯ ಸಚಿವ ನಿತ್ಯಾನಂದ ರೈ ಲಿಖಿತ ಉತ್ತರದಲ್ಲಿ ಹೇಳಿದ್ದಾರೆ.

ರಾಜ್ಯಸಭೆ ಮಧ್ಯಾಹ್ನ 2 ಗಂಟೆಗೆ ಮುಂದೂಡಿಕೆ
ಪ್ರತಿಪಕ್ಷಗಳ ಸದಸ್ಯರು ರಾಜ್ಯಸಭೆಯ ಬಾವಿಗೆ ನುಗ್ಗಿ 12 ಸಂಸದರ ಅಮಾನತು ಹಿಂಪಡೆಯಬೇಕು ಎಂದು ಆಗ್ರಹಿಸಿ ಘೋಷಣೆಗಳನ್ನು ಕೂಗುತ್ತಿದ್ದಂತೆ ಸಭಾಪತಿ ವೆಂಕಯ್ಯ ನಾಯ್ಡು ಅವರು ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು. ಸದನದಲ್ಲಿ ಸಭ್ಯತೆ ಮತ್ತು ಸೌಜನ್ಯವನ್ನು ಕಾಪಾಡಿಕೊಳ್ಳೋಣ. ಅಶಿಸ್ತಿನ ಮತ್ತು ಅಸಂಸದೀಯ ನಡವಳಿಕೆಯು ಕೆಲಸ ಮಾಡುವುದಿಲ್ಲ ಎಂದು ನಾಯ್ಡು ಅವರು ಮುಂದೂಡುವ ಮೊದಲು ಹೇಳಿದರು.

‘ನಮಗೆ ನ್ಯಾಯ ಬೇಕು’: ವಿಪಕ್ಷದ ಸಂಸದರ ಘೋಷಣೆ
12 ಸಂಸದರನ್ನು ಅಮಾನತುಗೊಳಿಸಿರುವುದನ್ನು ವಿರೋಧಿಸಿ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ಸದಸ್ಯರು ಘೋಷಣೆ ಕೂಗಿದರು. ‘ನಮಗೆ ನ್ಯಾಯ ಬೇಕು’ ಎಂಬ ಘೋಷಣೆಗಳನ್ನು ಕೂಗಿದ ಪ್ರತಿಪಕ್ಷದ  ಸದಸ್ಯರು ಸಂಸದರ ಅಮಾನತು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ರಾಜ್ಯಸಭೆಯಲ್ಲಿ ಹಣದುಬ್ಬರ ಕುರಿತು ಚರ್ಚೆಗೆ ಸಿಪಿಎಂ ಸಂಸದರ ಕರೆ 
ಸಿಪಿಎಂ ಸಂಸದ ಡಾ ವಿ ಶಿವದಾಸನ್ ಅವರು ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರದ ವಿಷಯವನ್ನು ಚರ್ಚಿಸಲು ರಾಜ್ಯಸಭೆಯಲ್ಲಿ ನಿಯಮ 267 ರ ಅಡಿಯಲ್ಲಿ ನೋಟಿಸ್ ನೀಡಿದ್ದಾರೆ.

ಸಿಬಿಐ, ಇಡಿ ನಿರ್ದೇಶಕರ ಅಧಿಕಾರಾವಧಿಯನ್ನು 5 ವರ್ಷಗಳಿಗೆ ವಿಸ್ತರಿಸಲು ಮಸೂದೆಗಳನ್ನು ಮಂಡಿಸಲಿದೆ ಕೇಂದ್ರ
ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ (ತಿದ್ದುಪಡಿ) ಮಸೂದೆ, 2021 ಮತ್ತು ಕೇಂದ್ರ ಜಾಗೃತ ಆಯೋಗ (ತಿದ್ದುಪಡಿ) ಮಸೂದೆ, 2021 ಅನ್ನು ರಾಜ್ಯಸಭೆಯಲ್ಲಿ ಪರಿಗಣನೆ ಮತ್ತು ಅಂಗೀಕಾರಕ್ಕಾಗಿ ಮಂಡಿಸಲಿದ್ದಾರೆ. ಜಾರಿ ನಿರ್ದೇಶನಾಲಯ ಮತ್ತು ಕೇಂದ್ರೀಯ ತನಿಖಾ ದಳದ ನಿರ್ದೇಶಕರ ಅಧಿಕಾರಾವಧಿಯನ್ನು ಪ್ರಸ್ತುತ ಎರಡು ವರ್ಷಗಳಿಂದ ಗರಿಷ್ಠ 5 ವರ್ಷಗಳವರೆಗೆ ವಿಸ್ತರಿಸಲು ಮಸೂದೆಗಳು ಬಯಸುತ್ತವೆ.

ಇದನ್ನೂ ಓದಿ: Lakhimpur Kheri violence ಲಖಿಂಪುರ ಖೇರಿ ಹಿಂಸಾಚಾರ ಉದ್ದೇಶಪೂರ್ವಕ ನಡೆದ ಕೃತ್ಯ, 13 ಆರೋಪಿಗಳ ವಿರುದ್ಧ ಕೊಲೆ ಯತ್ನ ಆರೋಪಕ್ಕೆ ಎಸ್‌ಐಟಿ ಆಗ್ರಹ

Published On - 1:55 pm, Tue, 14 December 21