Oxygen Shortage: ಆಮ್ಲಜನಕದ ಅಭಾವದಿಂದ ದೆಹಲಿ ಆಸ್ಪತ್ರೆಯಲ್ಲಿ 8, ಜಮ್ಮುವಿನ ಆಸ್ಪತ್ರೆಯಲ್ಲಿ 4 ರೋಗಿಗಳು ಸಾವು
ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಗಳ ಕುಟುಂಬದವರು ಕೋಪಗೊಂಡು ಗಲಾಟೆ ಮಾಡಿದ್ದಾರೆ. ಆಸ್ಪತ್ರೆ ಆವರಣದಲ್ಲಿ ದಾಂಧಲೆ ನಡೆಸಿದ್ದಾರೆ. ರೋಗಿಗಳು ಆಕ್ಸಿಜನ್ ಇಲ್ಲದೆ ಮೃತಪಟ್ಟಿದ್ದರೂ ನಮ್ಮ ಬಳಿ ಆಸ್ಪತ್ರೆಯವರು ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿದ್ದಾರೆ.
ದೆಹಲಿಯ ಬಾತ್ರಾ ಆಸ್ಪತ್ರೆಯಲ್ಲಿ ಆಮ್ಲಜನಕ ಅಭಾವದಿಂದ 8 ಮಂದಿ ಮೃತಪಟ್ಟಿದ್ದಾರೆ. ಹೀಗೆ ಮೃತಪಟ್ಟವರಲ್ಲಿ ಒಬ್ಬರು ವೈದ್ಯರೂ ಹೌದು. ಈ ವಿಷಯವನ್ನು ಬಾತ್ರಾ ಆಸ್ಪತ್ರೆ ಹೈಕೋರ್ಟ್ಗೆ ತಿಳಿಸಿದೆ. ನಮ್ಮ ಆಸ್ಪತ್ರೆಯಲ್ಲಿ ಮಧ್ಯಾಹ್ನ 12ಗಂಟೆ ಹೊತ್ತಿಗೇ ಆಕ್ಸಿಜನ್ ಖಾಲಿಯಾಗಿತ್ತು. ಆಮ್ಲಜನಕ ಖಾಲಿ ಆಗುವ ಬಗ್ಗೆ ನಾವು ಮಾಹಿತಿ ನೀಡಿದ್ದರೂ ಒಂದು ತಾಸು ತಡ ಮಾಡಿದರು. ಅಂದರೆ ಸುಮಾರು 1.35ರ ಹೊತ್ತಿಗೆ ಆಕ್ಸಿಜನ್ ಪೂರೈಕೆಯಾಗಿದೆ. ಹೀಗಾಗಿ ರೋಗಿಗಳ ಸಾವಾಗಿದೆ. ಅದರಲ್ಲಿ ಒಬ್ಬರು ವೈದ್ಯರೂ ಇದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಸ್ಸಿಎಲ್ ಗುಪ್ತಾ ತಿಳಿಸಿದ್ದಾರೆ.
ಜಮ್ಮುವಿನ ಬಾತ್ರಾ ಆಸ್ಪತ್ರೆಯಲ್ಲೂ 4 ರೋಗಿಗಳು ಸಾವು ಇನ್ನು ಜಮ್ಮುವಿನ ಅತಿದೊಡ್ಡ ಆಸ್ಪತ್ರೆಯಲ್ಲೂ ಕೂಡ ಇಂದು ಆಕ್ಸಿಜನ್ ಅಭಾವದಿಂದ 4 ರೋಗಿಗಳು ಮೃತಪಟ್ಟಿದ್ದಾಗಿ ವರದಿಯಾಗಿದೆ. ಈಗ ಈ ಆಸ್ಪತ್ರೆಗೆ ಆಮ್ಲಜನಕ ಪೂರೈಕೆ ಆಗಿದ್ದಾಗಿ ಆಡಳಿತ ತಿಳಿಸಿದ್ದು, ಅಷ್ಟರಲ್ಲಾಗಲೇ ನಾಲ್ವರು ಜೀವ ಕಳೆದುಕೊಂಡಿದ್ದಾರೆ. ಬಾತ್ರಾ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಮಾತ್ರವಲ್ಲ, ಬೇರೆ ಆರೋಗ್ಯ ಸಮಸ್ಯೆ ಇರುವವರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಮುಂಜಾನೆ ಹೊತ್ತಿಗೆ ಆಮ್ಲಜನಕ ಖಾಲಿಯಾದ ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ.
ಈ ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಗಳ ಕುಟುಂಬದವರು ಕೋಪಗೊಂಡು ಗಲಾಟೆ ಮಾಡಿದ್ದಾರೆ. ಆಸ್ಪತ್ರೆ ಆವರಣದಲ್ಲಿ ದಾಂಧಲೆ ನಡೆಸಿದ್ದಾರೆ. ರೋಗಿಗಳು ಆಕ್ಸಿಜನ್ ಇಲ್ಲದೆ ಮೃತಪಟ್ಟಿದ್ದರೂ ನಮ್ಮ ಬಳಿ ಆಸ್ಪತ್ರೆಯವರು ಸುಳ್ಳು ಹೇಳಿದ್ದಾರೆ. ಹಾರ್ಟ್ ಅಟ್ಯಾಕ್, ಮತ್ತೊಂದು ಎಂದು ಕತೆ ಕಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಇದನ್ನೂ ಓದಿ: ಚಿತ್ರರಂಗಕ್ಕೆ ಶಾಪವಾದ ಕೊರೊನಾ; ಬಾಲಿವುಡ್ನ ಖ್ಯಾತ ನಟ ಕೊವಿಡ್ಗೆ ಬಲಿ