ಭಾರತದಲ್ಲಿ ಕೋವಿಡ್-19 ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿದ ಫೈಜರ್
ಲಸಿಕೆ ಸಂಗ್ರಹಿಸಲು ಬೇಕಾದ ಮೈನಸ್ 70 ಡಿಗ್ರಿ ಸೆಲ್ಸಿಯಸ್‌ನ ಅತಿ ಕಡಿಮೆ ತಾಪಮಾನದ ಸಂಗ್ರಹಾಗಾರಗಳ ವ್ಯವಸ್ಥೆ ಭಾರತದಂತಹ ದೇಶದಲ್ಲಿ ಅದರ ವಿತರಣೆಗೆ ದೊಡ್ಡ ಸವಾಲನ್ನು ಒಡ್ಡುತ್ತದೆ ಎಂದು ಕಂಪನಿ ಹೇಳಿದೆ.
ನವದೆಹಲಿ: ಕೋವಿಡ್-19 ಲಸಿಕೆಯ ತುರ್ತು ಬಳಕೆಯ ಅಧಿಕಾರಕ್ಕಾಗಿ ಫೈಜರ್ ಕಂಪನಿ ಭಾರತದ ಔಷಧ ನಿಯಂತ್ರಣ ಮಂಡಳಿಯಿಂದ (ಡಿಸಿಜಿಐ) ಅನುಮತಿ ಕೋರಿದೆ.
ಭಾರತದಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆ 96 ಲಕ್ಷ ದಾಟಿರುವ ಈ ಹೊತ್ತಲ್ಲಿ ಡಿಜಿಸಿಐಗೆ ಮನವಿ ಮಾಡಿರುವ ಮೊದಲ ಸಂಸ್ಥೆಯಾಗಿದೆ ಫೈಜರ್. ಫೈಜರ್ ಸಂಸ್ಥೆ ಡಿಸೆಂಬರ್ 4 ರಂದು ಡಿಸಿಜಿಐಗೆ ಸಲ್ಲಿಸಿದ ಅರ್ಜಿಯಲ್ಲಿ, ದೇಶದಲ್ಲಿ ಮಾರಾಟ ಮತ್ತು ವಿತರಣೆಗಾಗಿ ಲಸಿಕೆಯನ್ನು ಆಮದು ಮಾಡಿಕೊಳ್ಳಲು ಅನುಮೋದನೆ ಕೋರಿದೆ.
ಅಲ್ಲದೇ ಭಾರತೀಯರ ಮೇಲೆ ಲಸಿಕೆ ಪ್ರಯೋಗ ಮಾಡಲು ಹೊಸ ಔಷಧಗಳು ಮತ್ತು ಕ್ಲಿನಿಕಲ್ ಟ್ರಯಲ್ಸ್ ನಿಯಮ 2019ರ ಅಡಿಯಲ್ಲಿ ವಿಶೇಷ ನಿಬಂಧನೆಗಳಿಗೆ ಅನುಗುಣವಾಗಿ ತುರ್ತು ಬಳಕೆಗೆ ಅವಕಾಶ ನೀಡಬೇಕು ಎಂದು ಹೇಳಿದೆ.
ಭಾರತದಲ್ಲಿ ಯಾವುದೇ ಲಸಿಕೆಯನ್ನು ಅನುಮತಿಸಬೇಕಾದರೆ ಕಟ್ಟುನಿಟ್ಟಿನ ಕ್ಲಿನಿಕಲ್ ಪ್ರಯೋಗಳನ್ನು ನಡೆಸಬೇಕಾಗುತ್ತದೆ. ಆದರೆ ಫೈಜರ್ ಈ ರೀತಿಯ ಪ್ರಯೋಗಗಳನ್ನು ನಡೆಸಲು ಕೇಳಿಕೊಂಡಿಲ್ಲ.
ಭಾರತದಲ್ಲಿ ಸದ್ಯ 5 ದೇಶೀಯ ಕೊರೊನಾ ಲಸಿಕೆಗಳು ಸಂಶೋಧನಾ ಹಂತದಲ್ಲಿವೆ. ಈ ನಡುವೆ ಫೈಜರ್ ಕೊರೊನಾ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಒಂದು ವೇಳೆ ಡಿಸಿಜಿಐ ಫೈಜರ್‌ಗೆ ಅನುಮತಿ ನೀಡಿದರೆ ಶೀಘ್ರದಲ್ಲಿಯೇ ಭಾರತದಲ್ಲಿ ಕೊರೊನಾ ಲಸಿಕೆಯೊಂದರ ಸಾರ್ವಜನಿಕ ಬಳಕೆ ಸಾಧ್ಯವಾಗಲಿದೆ.
ಬುಧವಾರ ಬ್ರಿಟನ್ನ ಔಷಧಿ ಮತ್ತು ಆರೋಗ್ಯ ಉತ್ಪನ್ನಗಳ ನಿಯಂತ್ರಣ ಸಂಸ್ಥೆ (ಎಂಎಚ್ಆರ್ ಎ) ಲಸಿಕೆಯ ತುರ್ತು ಬಳಕೆಗಾಗಿ ತಾತ್ಕಾಲಿಕ ಅನುಮತಿ ನೀಡಿತ್ತು.
ಏತನ್ಮಧ್ಯೆ, ಲಸಿಕೆ ಸಂಗ್ರಹಿಸಲು ಬೇಕಾದ ಮೈನಸ್ 70 ಡಿಗ್ರಿ ಸೆಲ್ಸಿಯಸ್‌ನ ಅತಿ ಕಡಿಮೆ ತಾಪಮಾನದ ಸಂಗ್ರಹಾಗಾರಗಳ ವ್ಯವಸ್ಥೆ ಭಾರತದಂತಹ ದೇಶದಲ್ಲಿ ಅದರ ವಿತರಣೆಗೆ ದೊಡ್ಡ ಸವಾಲನ್ನು ಒಡ್ಡುತ್ತದೆ. ಅದರಲ್ಲೂ ವಿಶೇಷವಾಗಿ ಅದರ ಸಣ್ಣ ನಗರಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಇದು ಕಷ್ಟಕರವಾಗಲಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಗಳೊಬ್ಬರು ಹೇಳಿದ್ದಾರೆ.
Published On - 12:02 pm, Sun, 6 December 20