ತಮಿಳುನಾಡಿನ ಜನ, ಸಂಸ್ಕೃತಿಯ ಮೇಲೆ ಪ್ರಧಾನಿ ಮೋದಿಗಿಲ್ಲ ಗೌರವ, ಆದರೆ ನನಗಿದು ಕುಟುಂಬದಂತೆ!: ರಾಹುಲ್ ಗಾಂಧಿ
ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ, ರೈತರಿಗೆ ಏನು ಬೇಕೋ ಅದನ್ನೇ ಅವರಿಂದ ಕಿತ್ತುಕೊಳ್ಳಲಾಗಿದೆ. ಅದಕ್ಕಾಗಿ ಅವರು ಹೋರಾಟ ಮಾಡುತ್ತಿದ್ದಾರೆ. ನಾವೂ ರೈತರೊಂದಿಗೆ ಇದ್ದೇವೆ. ಆದರೆ ಪಿಎಂ ಮೋದಿ ದೊಡ್ಡ ಉದ್ಯಮಿಗಳೊಂದಿಗೆ ನಿಂತಿದ್ದಾರೆ ಎಂದು ಹೇಳಿದರು.
ಚೆನ್ನೈ: ತಮಿಳುನಾಡು ವಿಧಾನಸಭೆಗೆ ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳಿಂದಲೂ ಪ್ರಚಾರ ಸಿದ್ಧತೆ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಇಂದು ತಮಿಳುನಾಡಿಗೆ ತೆರಳಿದ್ದು, ಜನವರಿ 25ರವರೆಗೆ ಅಂದರೆ ಮೂರು ದಿನ ಅಲ್ಲಿಯೇ ಇದ್ದು, ಪ್ರಚಾರ ಮಾಡಲಿದ್ದಾರೆ.
ಮೊದಲ ದಿನವಾದ ಇಂದು ಕೊಯಂಬತ್ತೂರಿನಲ್ಲಿ ಮಾತನಾಡಿ, ನಮ್ಮ ದೇಶದಲ್ಲಿ ಹಲವು ಭಾಷೆ, ಸಂಸ್ಕೃತಿಗಳು ಇವೆ. ತಮಿಳು, ಹಿಂದಿ, ಬೆಂಗಾಳಿ ಸೇರಿ ಎಲ್ಲ ಭಾಷೆಗಳಿಗೂ ಗೌರವ, ಅವಕಾಶ ಇದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರಿಗೆ ತಮಿಳುನಾಡಿನ ಸಂಸ್ಕೃತಿ, ಭಾಷೆ, ಜನರ ಬಗ್ಗೆ ಗೌರವ ಇಲ್ಲ. ತಮಿಳು ಜನರು ಮತ್ತು ಅವರ ಸಂಸ್ಕೃತಿಗಳು ತಮ್ಮ ವಿಚಾರಧಾರೆ ಮತ್ತು ಸಂಸ್ಕೃತಿಯ ಅಧೀನವಾಗಿರಬೇಕು ಎಂದು ಮೋದಿ ಬಯಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಹಾಗೇ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ, ರೈತರಿಗೆ ಏನು ಬೇಕೋ ಅದನ್ನೇ ಅವರಿಂದ ಕಿತ್ತುಕೊಳ್ಳಲಾಗಿದೆ. ಅದಕ್ಕಾಗಿ ಅವರು ಹೋರಾಟ ಮಾಡುತ್ತಿದ್ದಾರೆ. ನಾವೂ ರೈತರೊಂದಿಗೆ ಇದ್ದೇವೆ. ಆದರೆ ಪಿಎಂ ಮೋದಿ ದೊಡ್ಡ ಉದ್ಯಮಿಗಳೊಂದಿಗೆ ನಿಂತಿದ್ದಾರೆ ಎಂದು ಹೇಳಿದರು. ತಮಿಳುನಾಡು ಎಂದರೆ ನನಗೆ ಕುಟುಂಬದಂತೆ. ನಾನಿಲ್ಲಿ ಯಾವುದೇ ಸ್ವಾರ್ಥ ಸಾಧನೆಗಾಗಿ ಬಂದಿಲ್ಲ ಎಂದು ರಾಹುಲ್ ಹೇಳಿದರು.
ಸುಭಾಷ್ಚಂದ್ರ ಬೋಸ್ 125ನೇ ಜಯಂತಿ: ಶಂಖನಾದ ಮಾಡಿ ಮಮತಾ ಬ್ಯಾನರ್ಜಿ ಪಾದಯಾತ್ರೆ